ಪೆರಂಬಾಡಿ-ಮಾಕುಟ್ಟ ರಸ್ತೆ , ಲಘು ವಾಹನ ಸಂಚಾರಕ್ಕೆ ಅವಕಾಶ

No comments


ಮಡಿಕೇರಿ -ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ಕಾಮಗಾರಿಗಳು, ರಕ್ಷಣಾ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಸಿಆರ್‍ಪಿಸಿ ಕಾಯ್ದೆ ಸೆಕ್ಷನ್ 144, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005ರ ಕಲಂ 33, 34(ಬಿ),(ಸಿ),(ಡಿ) ಮತ್ತು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ(5) ರಲ್ಲಿ ದತ್ತವಾದ ಅಧಿಕಾರದಂತೆ ಹೊರಡಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ ಸೆಪ್ಟೆಂಬರ್, 30 ರವರೆಗೆ ಸಂಚಾರ ವ್ಯವಸ್ಥೆ ನಿರ್ವಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ. ಷರತ್ತುಗಳು: ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಪ್ರಯಾಣಿಕರ ದ್ವಿ ಚಕ್ರ, ತ್ರಿ-ಚಕ್ರ, ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಲಾರಿ, ಬಸ್, ಟಿಪ್ಪರ್ ಒಳಗೊಂಡಂತೆ ಯಾವುದೇ ರೀತಿಯ ಭಾರೀ ವಾಹನಗಳ ಸಂಚಾರ ನಿಷೇಧಿಸಿದೆ. ಸಂಚಾರಕ್ಕೆ ಅನುಮತಿಸಿರುವ ವಾಹನಗಳು ಅರಣ್ಯ ಭಾಗದ ಗರಿಷ್ಟ ಗಂಟೆಗೆ 40 ಕಿ.ಮೀ. ವೇಗ ಮೀರದಂತೆ ಹಾಗೂ ನಿಗಧಿತ ಅವಧಿಯಲ್ಲಿ ಈ ಪ್ರದೇಶವನ್ನು ಹಾದು ಹೋಗುವಂತೆ ಸಂಚರಿಸುವುದು ಅಲ್ಲದೆ, ಈ ಪ್ರದೇಶದಲ್ಲಿ ವಾಹನಗಳ ತಂಗುವಿಕೆ ನಿಷೇಧಿಸಿದೆ. ಈ ಆದೇಶದ ಉಲ್ಲಂಘನೆಯು ಕಾನೂನು ರೀತ್ಯಾ ದಂಡನೀಯವಾಗಿದೆ. ಈ ಬಗ್ಗೆ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ 1989ರ (ತಿದ್ದುಪಡಿ ನಿಯಮ 1990) ನಿಯಮ 221ಎ (2) ರಂತೆ ಅವಶ್ಯವಿರುವ ಸಂಜ್ಞೆ, ಸೂಚನಾ ಫಲಕ ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ

No comments

Post a Comment