ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ

No comments
Mubarak newsline
ವಿರಾಜಪೇಟೆ : ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ಅಂತರರಾಷ್ಟ್ರೀಯ ರಗ್ಬಿ ಆಟಗಾರ, ಪ್ರಗತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಾದಂಡ ತಿಮ್ಮಯ್ಯ ಹೇಳಿದರು.

ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸನ್ಮಾನಗಳು ಸ್ಪೂರ್ತಿಯಾಗಲಿದ್ದು, ಸಾಧನೆಗೆ ಸಿಗುವ ಸನ್ಮಾನಗಳು ಸದಾ ನೆನಪಿನಲ್ಲಿ ಉಳಿಯಲಿದೆ. ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಮಾತನಾಡಿ, ಜಿಲ್ಲೆಯ ತಾಲ್ಲೂಕು ಸಂಘಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿಯಾಗಿದೆ. ಸಂಘದ ಸದಸ್ಯರ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.
ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ವರದಿಗೆ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿರುವುದರಿಂದ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.
ತಾಲ್ಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಎ ಟು ಜಡ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಡಾ. ಹೇಮಂತ್ ಲೆಕ್ಕ ಪತ್ರ ಮಂಡಿಸಿದರು. 
 ವಾರ್ಷಿಕ ಪ್ರಶಸ್ತಿ ಪ್ರಧಾನ: ವಿರಾಜಪೇಟೆ ಕ್ಷೇತ್ರದ ಶಾಸಕಾರದ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಮಾಲ್ದಾರೆ ಶಾಲಾ ಮಕ್ಕಳಿಗಿಲ್ಲ ಆಟದ ಮೈದಾನ" ವರದಿಗೆ ಎ.ಎನ್ ವಾಸು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಪ್ರಯೋಗಶೀಲ ಕೃಷಿಕ ಬಿ.ಎಸ್ ನಾರಾಯಣ್ ರಾವ್" ವರದಿಗೆ ರಜಿತಾ ಕಾರ್ಯಪ್ಪ, ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ದಿಗ್ಬಂಧನಕ್ಕೆ ಒಳಗಾಗಿರುವ ಕುಟುಂಬಕ್ಕೆ ಇನ್ನೂ ದೊರೆತಿಲ್ಲ ನ್ಯಾಯ" ವರದಿಗೆ ಪುತ್ತಂ ಪ್ರದೀಪ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ "ಸಾರ್ವಜನಿಕರಿಗೆ ತಲೆನೋವಾಗಿದ್ದ ಪುಂಡಾನೆ ಸೆರೆ" ವರದಿಗೆ ಆರ್. ಸುಬ್ರಮಣಿ ಮತ್ತು ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕರಾದ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿಗೆ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ "ಶಿಕ್ಷಣದಿಂದ ದೂರು ಉಳಿದ ವಲಸೆ ಕಾರ್ಮಿಕರ ಮಕ್ಕಳು" ವರದಿಗೆ ಎಂ.ಎ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಪ್ರತಿಭಾ ಪುರಸ್ಕಾರ: ಸಂಘದ ಸದಸ್ಯರಾದ ಕೃಷ್ಣ ಅವರ ಮಕ್ಕಳಾದ ಜೀಶ್ಮ ಎಂ.ಕೆ, ಜಸ್ಮಿತಾ ಎಂ.ಕೆ, ರಜಿತ ಕಾರ್ಯಪ್ಪ ಅವರ ಮಗಳು ಕೆ.ಈಶಾನ್ವಿ, ಎ.ಎನ್ ವಾಸು ಅವರ ಮಗಳು ಸಮೃದ್ಧಿ ಎ.ವಿ, ಗಿರೀಶ್ ವಿ.ಕೆ ಅವರ ಮಗ ಅಗಿಲ್ ವಿ.ಜಿ, ಸುನಿಲ್ ಕೆ.ಎಸ್ ಅವರ ಮಗ ರೆನಿಲ್ ಕೆ.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಸಂಘದ ಕೋಶಾಧಿಕಾರಿ ಆನಂದ್, ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್ ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ನಿರ್ದೇಶಕರಾದ ಡಿ. ಮಂಜುನಾಥ್ ಮತ್ತಿತರರು ಇದ್ದರು.

ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ರವಿಕುಮಾರ್ ನಿರೂಪಿಸಿ, ಡಾ. ಹೇಮಂತ್ ವಂದಿಸಿದರು.

No comments

Post a Comment