ಈ ವರೆಗೆ ಕೊಡಗಿನ ಜನತೆಯ ಜೀವದ ಕುರಿತು ಎಚ್ಚರ ವಹಿಸಿ ಯಶಸ್ವಿಯಾಗಿರುವ ಜಿಲ್ಲಾಡಳಿತ, ಇನ್ನಾದರೂ ಜನ ಸಾಮಾನ್ಯರ ಜೀವನದ ಕುರಿತು ಯೋಚಿಸಿ ಯಶಸ್ವಿಯಾಗಬೇಕಿದೆ

No comments
     -ರಂಜಿತ್ ಕವಲಪಾರ
    ಕೊಡಗು ಜಿಲ್ಲೆ ಈ ಹಿಂದೆ  ಒಂದು ಕೋವಿಡ್ 19 ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ಕೊಡಗಿನಾದ್ಯಂತ ರೆಡ್ ಝೋನ್ ಘೋಷಣೆಯಾಗಿತ್ತು‌‌ ಆ ಕಾರಣ ಲಾಕ್ ಡೌನ್ ಕಟ್ಟುನಿಟ್ಟಾಗಿತ್ತು.    ನಂತರದ ದಿನಗಳಲ್ಲಿ ಆ ಒಂದು ಪ್ರಕರಣವು ಕೋವಿಡ್ 19ರಿಂದ ಪಾರಾಗಿ ಈಗಾಗಲೇ ಎರಡು ಕ್ವಾರಂಟೈನ್ ಅವಧಿ ಮುಕ್ತಯವಾಗಿದೆ. ಈವರೆಗೂ ಒಂದೇ ಒಂದು ಕೋವಿಡ್ 19 ಪಾಸಿಟಿವ್ ಬಾರದ ಹಿನ್ನೆಲೆ. ಕೊಡಗು ಜಿಲ್ಲೆಯಾದ್ಯಂತ ಗ್ರೀನ್ ಝೋನ್ ಘೋಷಣೆ ಮಾಡಿ, ಜನಜೀವನ ಸಹಜ ಸ್ಥಿತಿಗೆ ಬರಲು ಕೇಂದ್ರ ವಿಪತ್ತು ನಿಗ್ರಹದಳದ ಅಧಿಸೂಚನೆಯಂತೆ ಅಗತ್ಯ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕಿತ್ತು.  
   ಅದ್ಯಾಕೋ ನಮ್ಮ ಕೊಡಗಿನ ಜಿಲ್ಲಾಡಳಿತ ಇನ್ನೂ ಮುಕ್ತಕಂಠದಿಂದ ಗ್ರೀನ್ ಝೋನ್ ಘೋಷಿಸಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದೆ. 
     ಈತನ್ಮಧ್ಯೆ ಹೊರರಾಜ್ಯದ ಕೂಲಿಕಾರ್ಮಿಕರನ್ನು ಅವರ ಸ್ವಂತ ಊರಿಗೆ ತಲುಪಿಸುವ, ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡುವ, ಜಿಲ್ಲೆಯ ಸೇತುವೆ, ರಸ್ತೆ, ಅಗತ್ಯ ತಡೆಗೋಡೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ, ಕ್ರಶ್ಶರುಗಳಿಗೆ, ಗಣಿಗಾರಿಕೆಗೆ ಅವಕಾಶ ನೀಡುವ, ಮೊಬೈಲ್ ರೀಚಾರ್ಜ್ ಅಂಗಡಿ, ಶೈಕ್ಷಣಿಕ ಸಾಮಾಗ್ರಿಗಳ ಮುಂಗಟ್ಟುಗಳನ್ನು ತೆರೆಯುವ ಅವಕಾಶವೇನೋ ನೀಡಿದೆಯಾದರು.
      ಗ್ರೀನ್ ಝೋನ್ ನಲ್ಲಿ ಇರುವ ಕೇಂದ್ರದ ನಿಯಮಾವಳಿಗಳನ್ನು ಯಾಕೆ ಸಂಪೂರ್ಣ ಘೋಷಣೆ ಮಾಡುತ್ತಿಲ್ಲ ? ಎನ್ನುವ ಪ್ರಶ್ನೆ ಬಡ, ಮಧ್ಯಮ ವರ್ಗದ ವ್ಯಾಪಾರಿಗಳು ಹಾಗು ಜಿಲ್ಲೆಯ ಒಟ್ಟು ಮೊತ್ತ ಜನರ ಪ್ರಶ್ನೆಯಾಗಿದೆ.  ಪಕ್ಕದ *ಉಡುಪಿ ಜಿಲ್ಲೆ* ಕೂಡ 3 ಕೋವಿಡ್ 19 ಪಾಸಿಟಿವ್ ಇಂದಾಗಿ ರೆಡ್ ಝೂನ್ ಘೋಷಿಸಿ ಕಠಿಣ ಲಾಕ್ ಡೌನ್ ಪಾಲಿಸಿತ್ತು. ಆದರೇ ಸೋಂಕಿತರು ಗುಣಮುಖರಾಗಿ 28ದಿನಗಳ ನಂತರ ಅಗತ್ಯ ಮುಂಜಾಗ್ರತ ಕ್ರಮದೊಂದಿಗೆ ಸಂಪೂರ್ಣ ಗ್ರೀನ್ ಝೂನ್ ಘೋಷಿಸುವ ಮೂಲಕ ಲಾಕ್ ಡೌನ್ ಸಡಿಲಿಸಿ ಜನಸಾಮಾನ್ಯರ ಜೀವಕ್ಕೆ ಸಹಕರಿಸಿದೆ.
ತರಕಾರಿ, ದಿನಸಿ ವ್ಯಾಪಾರಕ್ಕೆ ಇದ್ದ ಮೂರು ದಿನದ 6ರಿಂದ 12ಸಮಯವನ್ನು ಇದೀಗ ಕೊಡಗು ಜಿಲ್ಲಾಡಳಿತ 2 ಗಂಟೆಯವರೆಗೆ ಏನೋ ವಿಸ್ತರಿಸಿದ್ದಾರೆ ಸರಿ. ಈ ತರಕಾರಿ, ದಿನಸಿ, ಮೊಬೈಲ್ ರೀಚಾರ್ಜ್, ಪುಸ್ತಕ ವ್ಯಾಪಾರಸ್ಥರ ಜೊತೆ ಜೊತೆಗೆ ಇನ್ನು ಸಾಕಷ್ಟು ಕಾರ್ಮಿಕವರ್ಗ ಜಿಲ್ಲೆಯಲ್ಲಿದ್ದು ಅವರೆಲ್ಲರೂ ಈಗಾಗಲೇ ಲಾಕ್ ಡೌನ್ ಅವಧಿಯ ಒಂದು ತಿಂಗಳಿ‌ನಿಂದ ತಮ್ಮ ನೋವನ್ನು, ಗೋಳನ್ನು ಯಾರಿಗೂ ಹೇಳಲು ಆಗದೆ, ಯಾರು ಕೇಳಿಸಿ ಕೊಳ್ಳುವವರು ಇಲ್ಲದೆ ಕಂಗಾಲಾಗಿದ್ದಾರೆ.
    ಉದಾಹರಣೆಗೆ ಸವಿತಾ ಸಮಾಜದವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಇವರು ಕೆಲಸವಿಲ್ಲದೆ ಮನೆಯಲ್ಲೇ ಕೂತಿದ್ದಾರೆ. ಸವಿತಾ ಸಮಾಜದ ಬಹುತೇಕರು ಬಡತನ ರೇಖೆಗಿಂತ ಕೆಳಮಟ್ಟದ ಕಾರ್ಮಿಕರು ಅವರ? ಅವರ ಮನೆಯವರ ಪರಿಸ್ಥಿತಿ?
  ದರ್ಜಿಗಳು, ಸಣ್ಣ ಪುಟ್ಟ ಗೂಡಂಗಡಿಗಳನ್ನಿಟ್ಟುಕೊಂಡು ಬಟ್ಟೆ ಹೊಲಿದು ಅದರಿಂದ ಬರುವ ಆದಾಯದಿಂದ ಬದುಕು ಸಾಗಿಸುತ್ತಿದ್ದ ಜನತೆಯ ಗತಿ?
  ಚಮ್ಮಾರಿಕೆ ವೃತಿಯವರ ಸಂಕಟ ಹಾಗು ಪಾದರಕ್ಷೆ ಮಾರಿ ಬದುಕು ದೂಡುತ್ತಿದ್ದವರ ಪರಿಸ್ಥಿತಿ?
 ಸಣ್ಣ ಪುಟ್ಟ ಬಟ್ಟೆ ಅಂಗಡಿ, ಸಣ್ಣ ಮೊಬೈಲ್ ಕ್ಯಾಂಟೀನ್ಗಳು,  
   ಹೀಗೆ ಬಡವರ, ಬಡತನ ರೇಖೆಗಿಂತ ಕೆಳಗಿರುವ ಹತ್ತು ಹಲವು ಇಂತಹ ಕಾರ್ಮಿಕ ವರ್ಗ ಕೊಡಗಿನಲ್ಲಿದೆ ಅವರ ಈಗಿನ ಸ್ಥಿತಿ ದೇವರಿಗೇ ಪ್ರೀತಿ.
   ಮಧ್ಯಮ ವರ್ಗದ ಜನತೆಯ ಸಂಕಷ್ಟವೇನು ಇವರಿಗಿಂತ ಭಿನ್ನವಾಗಿಲ್ಲ 
ಉದಾ;- ಈ ಕಿಟ್ ವಿಚಾರವನ್ನೇ ತೆಗೆದುಕೊಳ್ಳೋಣ. 
ಬಡ ಅಥವ ಮಧ್ಯಮ ವರ್ಗದ ಜನಪ್ರತಿನಿಧಿಗಳು( ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಯಿಂದ ಜನರಿಂದ ಆಯ್ಕೆಯಾದವರು) ಕೆಲವರು ನಮ್ಮ ಮಾಧ್ಯಮದೊಂದಿಗೆ ಅವರ ಸಂಕಟವನ್ನು ಹಂಚಿಕೊಂಡಿದ್ದಾರೆ. ಇವರೆಲ್ಲರೂ ರಾಜಕೀಯವಾಗಿ ಜನಸೇವೆಯೊಂದಿಗೆ ಒಂದಲ್ಲ ಒಂದು ಸಣ್ಣ ಪುಟ್ಟ ವ್ಯವಹಾರ ವಹಿವಾಟೋ, ಕೃಷಿಯೋ ಮಾಡಿಕೊಂಡು ಬದುಕುತ್ತಿದ್ದವರು. ಕೆಲವು ಖಾಸಗಿ ಸಂಘ ಸಂಸ್ಥೆಗಳು ನೀಡುವ ಕಿಟ್ಅನ್ನು  ಇವರು ಸಾರ್ವಜನಿಕವಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರು ಜನಪ್ರತಿನಿಧಿಗಳು ಕಿಟ್ ತೆಗೆದುಕೊಂಡರೆ? ಸಾರ್ವಜನಿಕವಾಗಿ ಆಗಬಹುದಾದ ತಲ್ಲಣಗಳನ್ನು ನೀವೆ ಊಹಿಸಿ. 
ಹಾಗೆಯೇ ಸಾಮಾನ್ಯ ಪೊಲೀಸ್ ಪೇದೆ ಓರ್ವನ ಕುಟುಂಬ? ಮಧ್ಯಮವರ್ಗದ ದಾದಿಯರ ಪಾಡು? ಬಸಿಲಲ್ಲಿ ನಮಗಾಗಿ ಈವರೆಗೆ ದುಡಿದ ಆಶಾ ಕಾರ್ಯಕರ್ತರ ಮನೆಯವರ ಸ್ಥಿತಿಗತಿ? ಒಮ್ಮೆ ಯೋಚಿಸಿ ನೋಡಿ. ವಿಷಯ ಏನೆಂದರೆ ಅವರೂ ಮನುಷ್ಯರೇ, ಅವರಿಗೂ ಮನೆ,ಮಠ , ಮಕ್ಕಳಿದ್ದಾರೆ ಎಂದು ನಾವು ನೀವು ಯೋಚಿಸುವ ಗೋಜಿಗೆ ಹೋಗುವುದಿಲ್ಲಾ.
ಇದು  ಕೆಲ ಕಾರ್ಮಿಕ, ಸೇವ ವರ್ಗದವರ ಕಥೆಯಷ್ಟೇ,,,  ಎಲ್ಲರದ್ದೂ ಇದೇ ವ್ಯಥೆ.
     
     ಜಿಲ್ಲಾಡಳಿತ ಈಗ ನಿಗಧಿ ಪಡಿಸಿರುವ ವಾರಕ್ಕೆ ಮೂರು ದಿನ ಅವಧಿಯನ್ನು ವಾರಪೂರ್ತಿ ವಿಸ್ತರಿಸಬೇಕಿದೆ. ಅದರಿಂದಾಗಿ ಏಕಾಏಕಿ ಜನ, ಗಾಡಿ ನುಗ್ಗಿ ಆಗುವ ಜಾತ್ರೆ ಹಾಗು ಟ್ರಾಫಿಕ್ ಜಾಮ್ ಅನ್ನು ನಿಯಂತ್ರಿಸಲೂಬಹುದು ಸಾಮಾಜಿಕ ಅಂತರಕ್ಕೂ ಧಕ್ಕೆಬಾರದು. 
ಬಾರ್, ಗುಟ್ಕಾ, ಶಾಪಿಂಗ್ ಮಾಲ್ ಗಳು, ದೊಡ್ಡ ಹೋಟೆಲ್, ರೆಸಾರ್ಟ್, ಹೋಂಸ್ಟೇ ಮುಂತಾದ, ಜನ ಹೆಚ್ಚಾಗಿ ಸೇರುವ, ವ್ಯಾಪಾರ ವಹಿವಾಟುಗಳನ್ನು ಹೊರತು ಪಡಿಸಿ. ಉಳಿದಂತೆ ಎಲ್ಲಾ ವ್ಯಾಪಾರಕ್ಕೂ, ವ್ಯವಹಾರಕ್ಕೂ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ, ಎಚ್ಚರಿಕೆಯೊಂದಿಗೆ ಜಿಲ್ಲಾಡಳಿತ ಅವಕಾಶವನ್ನು ನೀಡಬೇಕಿದೆ. 
ಮಧ್ಯಮವರ್ಗದವರನ್ನು ಪರಿಗಣನೆಗೆ ತೆಗೆದುಕೊಂಡು ಅವರ ಕಷ್ಟ, ಸಂಕಷ್ಟಗಳನ್ನು ಆಲಿಸಿ ಸೂಕ್ತಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾಡಳಿತ ಇನ್ನಾದರೂ ಕೊಡಗನ್ನು ಗ್ರೀನ್ ಝೋನ್ ಎಂದು ಘೋಷಿಸಿ, ಕೇಂದ್ರದ ಅಧಿಸೂಚನೆಯಲ್ಲಿರುವ ಎಲ್ಲಾ ಲಾಕ್ ಡೌನ್ ಸಡಿಲಿಕೆಯ ಕ್ರಮವನ್ನು ಕೊಡಗಿನಲ್ಲಿ ಕೂಡಲೆ ಜಾರಿ ಮಾಡಬೇಕಿದೆ.

ಕೊಡಗು ಇನ್ನೆರೆಡು ತಿಂಗಳಿನಲ್ಲಿ ಬಂದೆರಗುವ ಮಳೆಗೆ ತಯಾರಾಗಬೇಕಿದೆ. ಕೊಡಗಿನ ಜನತೆ ಕೂಡಾ. ಇನ್ನಾದರೂ ಜಿಲ್ಲಾಡಳಿತ ಈ ಕುರಿತು ಕಾರ್ಯೋನ್ಮುಖವಾಗದಿದ್ದಲ್ಲಿ ಮುಂದೆ ಮನೆಗೆ ಬೆಂಕಿ ಬಿದ್ದ ನಂತರ ನೀರಿಗಾಗಿ ಬಾವಿತೋಡುವ ದುಸ್ಸಾಹಸಕ್ಕೆ ಕೈಹಾಕಬೇಕಾದ ಅಪಾಯ ಇದೇ..!


No comments

Post a Comment