ವಾಟ್ಸಪ್ ಗ್ರೂಪಿನಲ್ಲಿ ಧರ್ಮ ನಿಂದನೆ ಆರೋಪ: ಪತ್ರಿಕಾ ವರದಿಗಾರನನ್ನು ವಿಚಾರಣೆ ನಡೆಸಿದ ಪೊಲೀಸರು.
ಸಿದ್ದಾಪುರ (Times Of Coorg), ಎ.27: ವಾಟ್ಸಪ್ ಗ್ರೂಪಿನಲ್ಲಿ ಧರ್ಮ ನಿಂದನೆ ಮಾಡಿರುವ ದೂರಿನಲ್ಲಿ ಪತ್ರಿಕಾ ವರದಿಗಾರನನ್ನು ಪೊಲೀಸರು ವಿಚಾರಣೆ ನಡೆಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕೆಲವು ಪತ್ರಕರ್ತರನ್ನು ಒಳಗೊಂಡ ವಾಟ್ಸಪ್ ಗ್ರೂಪಿನಲ್ಲಿ ಪತ್ರಿಕೆಯೊಂದರ ವರದಿಗಾರ ಸಿದ್ದಾಪುರದ ವಸಂತ್ ಕುಮಾರ್ ಎಂಬಾತ ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವ ಸಂದೇಶವನ್ನು ಪೋಸ್ಟ್ ಮಾಡಿರುವ ಬಗ್ಗೆ ಸಿದ್ದಾಪುರದ ಮುಸ್ತಫ ಎಂಬವರು ರವಿವಾರ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರನ್ನು ಸ್ವೀಕರಿಸಿದ ಪೊಲೀಸರು ಸೋಮವಾರ ದಿನ ವಸಂತ್ ಕುಮಾರ್ ಎಂಬಾತನನ್ನು ಪೊಲೀಸ್ ಠಾಣೆಗೆ ಕರೆದು ಸಿದ್ದಾಪುರ ಪಿ.ಎಸ್.ಐ ಮೋಹನ್ ರಾಜ್ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಧರ್ಮವನ್ನು ಅವಹೇಳನ ಮಾಡುವ ಉದ್ದೇಶವಾಗಲಿ, ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ವಾಟ್ಸಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿರುವುದಲ್ಲ. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಸಂದೇಶಗಳನ್ನು ಕಳಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕ್ಷಮೆ ಕೇಳಿರುವ ಪರಿಣಾಮ ವಸಂತ್ ಕುಮಾರ್ ಎಂಬಾತನಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
