ಸಿದ್ದಾಪುರ: ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಯುವಕರ ಬಂಧನ.
> ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನ ಯುವಕನ ಮೇಲೆ ಪೋಕ್ಸೊ ಪ್ರಕರಣ ದಾಖಲು.
> ಪ್ರಕರಣಗಳಲ್ಲಿ ಒಟ್ಟು ನಾಲ್ಕು ಮಂದಿಯ ಬಂಧನ.
ಸಿದ್ದಾಪುರಎ. 27: ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನ ಹಾಗೂ ಮಾರಕಾಯುಧಗಳಿಂದ ಹಲ್ಲೆ ಪ್ರಕರಣಗಳಲ್ಲಿ ನಾಲ್ಕು ಮಂದಿ ಯುವಕರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ನೆಲ್ಯಹುದಿಕೇರಿಯ ಬೆಟ್ಟದಕಾಡಿನಲ್ಲಿರುವ ತಾಯಿ ಮನೆಗೆ ಅಪ್ರಾಪ್ತ ಬಾಲಕಿ ತನ್ನ ದೊಡ್ಡಪ್ಪ ಮಗನ ಜೊತೆಗೆ ಕಾಲುದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ಬೆಟ್ಟದಕಾಡಿನ ದೀಪಕ್ ಎಂಬಾತ ಬಾಲಕಿಯ ಕೈಯನ್ನು ಎಳೆದು ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಬಾಲಕಿಯ ಪಾಲಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ದೀಪಕ್ ನನ್ನು ಬಂಧಿಸಿರುವ ಸಿದ್ದಾಪುರ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ 8 ಮತ್ತು 354 ಪ್ರಕರಣ ದಾಖಲಿಸಲಾಗಿದೆ.
ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಟ್ಟದಕಾಡಿನ ಮೂವರು ಯುವಕರು ಮಾರಕಾಯುಧಗಳಿಂದ ಹಲ್ಲೆ ಮಾಡಿರುವುದಾಗಿ ದೀಪಕ್ ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದ್ದು, ಬೆಟ್ಟದಕಾಡಿನ ನಿವಾಸಿಗಳಾದ ಜಾಬಿರ್, ಬಶೀರ್ ಮತ್ತು ನಜೀಬ್ ಎಂಬ ಮೂವರು ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು 307, R/W 34 ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ವಿದ್ಯಾರ್ಥಿನಿ ಅಪಹರಣದಲ್ಲಿ ಬಂಧಿತನಾಗಿದ್ದ ದೀಪಕ್: ಕಳೆದ ಮೂರು ತಿಂಗಳುಗಳ ಹಿಂದೆ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಪ್ರಕರಣದಲ್ಲಿ ಬಂಧಿತನಾಗಿದ್ದ ದೀಪಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಹಿಂದೆ ಕೂಡಾ ದೀಪಕ್ ಪತ್ರಕರ್ತನೋರ್ವನ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿದ್ದ.
ಸಿದ್ದಾಪುರ ಪಿ.ಎಸ್.ಐ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
