ಕೋವಿಡ್-19 : ಜಿಲ್ಲಾಧಿಕಾರಿಯವರ ಸುದ್ದಿಗೋಷ್ಠಿ

No comments

    ಮಡಿಕೇರಿ (Times Of Coorg):- ಜಿಲ್ಲೆಯಲ್ಲಿ ಜೂನ್ ೨೫ ರ ವರೆಗೆ ಒಟ್ಟು ಸೋಂಕಿತರ ಸಂಖ್ಯೆ ೨೬ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-೧೯ ಸಂಬಂಧ ಗುರುವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

       ಜಿಲ್ಲೆಯಲ್ಲಿ ಬುಧವಾರ ಸಂಜೆಯ ವೇಳೆಯಲ್ಲಿ ಒಟ್ಟು ೧೪ ಕೋವಿಡ್-೧೯ ಪ್ರಕರಣಗಳು ಪಾಸಿಟಿವ್ ಬಂದಿದ್ದು. ಸೋಂಕಿತರಿಗೆ ಸದ್ಯ ಜಿಲ್ಲಾ ಕೋವಿಡ್-೧೯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೬ ಕ್ಕೆ ಏರಿಕೆಯಾಗಿದ್ದು, ೩ ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ ೨೩ ಕೊರೊನ ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

    ಜಿಲ್ಲೆಯಲ್ಲಿ  ಕೋರೋನಾ ಸೋಂಕಿನ ಪ್ರಕರಣಗಳ ಹೆಚ್ಚಳ ಸಾಧ್ಯತೆಯಿದ್ದು, ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ಅಲ್ಲದೆ ಈವರೆಗೂ ವರದಿಯಾದ ೨೩ ಪ್ರಕರಣಗಳಲ್ಲಿ ಕೊರೊನ ಸೋಂಕಿನ ಲಕ್ಷ್ಮಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

         ಅಶ್ವಿನಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ತಜ್ಞ ವೈದ್ಯರೂ ಸೇರಿದಂತೆ ಮೂವರು ವೈದ್ಯರು, ಎಲೆಕ್ಟ್ರಿಷಿಯನ್, ಸ್ವಾಗತಕಾರಿಣಿ, ವೈದ್ಯರ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ೭ ಮಂದಿಗೆ ಸೋಂಕು ತಗುಲಿದೆ. ಬುಧವಾರ ಮತ್ತು ಗುರುವಾರ ಅಶ್ವಿನಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಮಾತ್ರ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತದೆ. ಪ್ರಸ್ತುತ ೮ ರೋಗಿಗಳು ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಯಾವ ವೈದ್ಯರೂ, ವೈದ್ಯಕೀಯ ಸಿಬ್ಬಂದಿಗೂ ಸೋಂಕು ತಗುಲಲಿಲ್ಲ. ಎಲ್ಲಾ ಸೋಂಕುಪೀಡಿತ ರೋಗಿಗಳನ್ನು ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

     ಅಸ್ಸಾಂನಿAದ  ಮುಳ್ಳೂರು ಗ್ರಾಮಕ್ಕೆ ಮರಳಿದ್ದ ಸೈನಿಕರಲ್ಲಿಯೂ ಸೋಂಕು ಪತ್ತೆಯಾಗಿದೆ. ಅಂತೆಯೇ  ಶಿರಂಗಾಲದ ಹಣ್ಣಿನ ವ್ಯಾಪಾರಿಯ ಸಂಪರ್ಕದಲ್ಲಿದ್ದ ಕಾರ್ ಮೆಕ್ಯಾನಿಕ್  ಸೇರಿದಂತೆ ಇಬ್ಬರಿಗೆ ಸೋಂಕು ಬಂದಿದೆ. ದೊಡ್ಡಳ್ಳಿ ಗ್ರಾಮದ ಮಹಿಳೆಯ ಪತಿ, ಪತಿಯ ಸಹೋದರನಿಗೂ ಸೋಂಕು ತಗುಲಿದೆ ಎಂದು ಅವರು ತಿಳಿಸಿದರು.

      ಬಿಟ್ಟಂಗಾಲದಲ್ಲಿ ಹೋಂಸ್ಟೆ ನಡೆಸುತ್ತಿದ್ದ ೭೦ ವರ್ಷದ ಮಹಿಳೆಗೂ ಸೋಂಕು ತಗುಲಿದ್ದು ಹೋಂಸ್ಟೆಗೆ ಬಂದ ಪವಾಸಿಗರಿಂದಲೂ  ಸೋಂಕು ತಗುಲಿರುವ ಸಾಧ್ಯತೆಯಿದೆ. ಜೊತೆಗೆ ಕುಶಾಲನಗರದ ಮೆಡಿಕಲ್ ಶಾಪ್ ಮಾಲೀಕನ ಮಗನಿಗೂ ಸೋಂಕು ತಗುಲಿದ್ದು, ಕುಶಾಲನಗರದ ರಥಬೀದಿಯನ್ನು ಕಂಟೈನ್ ಮೆಂಟ್ ವಲಯವನ್ನಾಗಿಸಲಾಗಿದೆ. ಕೋವಿಡ್-೧೯ ರ ಸೋಂಕಿತರ ಚಿಕಿತ್ಸೆಗೆ ಯಾವುದೆ ವೈದ್ಯರ ಕೊರತೆಯಿಲ್ಲ. ಬ್ಯಾಕಪ್ ತಂಡವನ್ನು ಇದೀಗ ಸಿದ್ದಗೊಳಿಸಲಾಗಿದೆ. ಆಸ್ಪತ್ರೆ ಹಾಗೂ ಹಾಸಿಗೆಯ ಕೊರತೆಯೂ ಇಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.

      ಕೊವಿಡ್ ಆಸ್ಪತ್ರೆಯಲ್ಲಿ ೨೫೦ ಹಾಸಿಗೆಗಳ ವ್ಯವಸ್ಥೆಯಿದೆ. ವಿರಾಜಪೇಟೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿಯೂ ಅಗತ್ಯವಿದ್ದಲ್ಲಿ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋರೋನಾ ಸೋಂಕಿತರು ಇದ್ದ ನಗರದ ಪುಟಾಣಿ ನಗರ, ಡೈರಿ ಫಾರಂ, ಮಂಗೇರಿರ ಮುತ್ತಣ್ಣ ಸರ್ಕಲ್ -  ಓಂಕಾರೇಶ್ವರ  ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಮಡಿಕೇರಿ ಬಳಿಯ ಕಗ್ಗೋಡ್ಲು, ತಾಳತ್ತಮನೆ, ಕುಶಾಲನಗರದ ರಥಬೀದಿ, ವಿರಾಜಪೇಟೆ ಬಳಿಯ ಬಿಟ್ಟಂಗಾಲ, ಶಿರಾಗಂಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ  ಸೇರಿದಂತೆ ೧೨ ಪ್ರದೇಶಗಳನ್ನು ಮುಂದಿನ ೨೮  ದಿನಗಳ ಕಾಲ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶಗಳಿಗೆ ಆಹಾರದ ಕಿಟ್‌ನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು. ಜೊತೆಗೆ ೨-೩ ದಿನಗಳಿಗೊಮ್ಮೆ ತರಕಾರಿಯನ್ನು ಪೂರೈಕೆ ಮಾಡಲಾಗುವುದು. ಹಾಲು ಮತ್ತಿತರ ಅವಶ್ಯಕ ವಸ್ತುಗಳನ್ನು ಪ್ರತಿ ದಿನವೂ ಸೀಲ್ ಡೌನ್ ಪ್ರದೇಶದ ಕುಟುಂಬಗಳಿಗೆ ತಲುಪಿಸಲಾಗುವುದು. ಈ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ವಾಹನ, ಜನ ಸಂಚಾರಕ್ಕೆ ನಿಷೇಧಿಸಲಾಗಿದೆ. ಸೀಲ್ ಡೌನ್ ಪ್ರದೇಶಗಳಲ್ಲಿರುವ ಜನ ೨೮ ದಿನಗಳ ಕಾಲ ಹೊರಬರುವಂತಿಲ್ಲ ಮತ್ತು ಆ ಸ್ಥಳಗಳಿಗೆ ಸಾರ್ವಜನಿಕರಿಗೆ ಪ್ರವೇಶವೂ ಇಲ್ಲ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

      ಜಿಲ್ಲೆಯಲ್ಲಿ ೨೪ ಗಂಟೆಗಳ ಕಾಲ ಗಂಟಲು/ಮೂಗು ದ್ರವ ಮಾದರಿ ಪರೀಕ್ಷೆಯ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಅನೇಕರ ವರದಿಗಳು ಬರಲು ಬಾಕಿಯಿದೆ. ೧ ದಿನದಲ್ಲಿ ೩೮೦ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು ಈವರೆಗೂ ೬೬೦೦ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ರೆಸಾರ್ಟ್ ಹೋಂಸ್ಟೇ, ಲಾಡ್ಜ್ಗಳನ್ನು ೨೧ ದಿನ ಮುಚ್ಚಲು ಸ್ವಯಂಪ್ರೇರಿತರಾಗಿ ಸಂಬAಧಪಟ್ಟ ಸಂಘಟನೆಗಳ ಮುಖಂಡರೇ  ನಿರ್ಧರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ. ಪನ್ನೇಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಮಹೇಶ್ ಇತರರು ಇದ್ದರು.

No comments

Post a Comment