ಮಡಿಕೇರಿ (Times Of Coorg):-ಜಿಲ್ಲಾಡಳಿತ ವತಿಯಿಂದ ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಫೋನ್-ಇನ್ ಕಾರ್ಯಕ್ರಮವು ಸೋಮವಾರ ನಡೆಯಿತು.
ಫೋನ್-ಇನ್ ಕಾರ್ಯಕ್ರಮಕ್ಕೆ ವಿರಾಜಪೇಟೆಯ ಫ್ರಭು ಕುಮಾರ್ ಎಂಬುವವರು ಕರೆ ಮಾಡಿ ನಾವುಗಳು ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ್ದು, ಕಳೆದ ನಾಲ್ಕು ತಿಂಗಳಿನಿಂದ ಪಡಿತರ ಪಡೆದಿರುವುದಿಲ್ಲ. ಈಗ ಪಡಿತರ ಪಡೆಯಲು ಹೋದಾಗ ನಿಮ್ಮ ಪಡಿತರ ಚೀಟಿಯು ವಜಾಗೊಂಡಿರುವುದಾಗಿ ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು, ನೀವು ಸತತವಾಗಿ ನಾಲ್ಕು ತಿಂಗಳಿನಿಂದ ಪಡಿತರವನ್ನು ಪಡೆಯದೇ ಇದ್ದುದರಿಂದ ನಿಮ್ಮ ಬಿಪಿಎಲ್ ಪಡಿತರ ಚೀಟಿಯು ವಜಾಗೊಂಡಿದೆ. ಲಾಕ್‍ಡೌನ್ ಮುಗಿದ ನಂತರ ವಿರಾಜಪೇಟೆ ತಾಲೂಕು ಆಹಾರ ಇಲಾಖೆಗೆ ಭೇಟಿ ನೀಡಿ ತಮ್ಮ ಮತ್ತು ಕುಟುಂಬದವರ ಹೆಬ್ಬೆಟ್ಟು ಗುರುತನ್ನು ನೀಡಿ ಪಡಿತರ ಚೀಟಿಯನ್ನು ನವೀಕರಿಸಿಕೊಳ್ಳುವಂತೆ ತಿಳಿಸಿದರು.
ವಿರಾಜಪೇಟೆಯಿಂದ ಉಪೇಂದ್ರ ಎಂಬುವವರು ಕರೆ ಮಾಡಿ ಡಿಸಿಂಬರ್ ತಿಂಗಳಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಇದುವರೆಗೂ ಪಡಿತರ ಚೀಟಿ ದೊರೆತಿಲ್ಲವೆಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕರು, ಲಾಕ್‍ಡೌನ್ ಮುಗಿದ ನಂತರ ನಿಯಮಾನುಸಾರ ಅರ್ಜಿ ಸಲ್ಲಿಕೆಯ ಜ್ಯೇಷ್ಠತೆ ಆಧಾರದ ಮೇಲೆ ಪಡಿತರ ಚೀಟಿ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ಚೇಲವಾರ ಗ್ರಾಮದಿಂದ ರಾಮಕೃಷ್ಣ ಎಂಬುವವರು ಕರೆಮಾಡಿ ಎಪಿಎಲ್ ಪಡಿತರ ಚೀಟಿಗೆ ಈಗಾಗಲೆ ಅರ್ಜಿ ಸಲ್ಲಿಸಿದ್ದು ಹೆಬ್ಬೆಟ್ಟು ಗುರುತು ನೀಡಿರುವುದಿಲ್ಲ. ಆದ್ದರಿಂದ ನಮಗೆ ಪಡಿತರ ದೊರಕುವುದೇ ಎಂದು ಪ್ರಶ್ನಿಸಿದರು.
ಬಳಿಕ ಉತ್ತರಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕರು, ಎಪಿಎಲ್ ಕಾರ್ಡ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರು ಮೇ ತಿಂಗಳ 10 ಕೆ.ಜಿ ಅಕ್ಕಿಯನ್ನು ರೂ.15 ರಂತೆ ಪಾವತಿ ಮಾಡಿ ಪಡೆಯಬಹುದಾಗಿದೆ. ಲಾಕ್‍ಡೌನ್ ಮುಗಿದ ನಂತರ ಹೆಬ್ಬೆಟ್ಟಿನ ಗುರುತು ನೀಡಿ ಪಡಿತರ ಚೀಟಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ವಿರಾಜಪೇಟೆಯಿಂದ ವ್ಯಕ್ತಿಯೊಬ್ಬರೂ ಕರೆ ಮಾಡಿ ಅವರ ಎಪಿಎಲ್ ಪಡಿತರ ಚೀಟಿಯು ಕಳೆದು ಹೋಗಿದ್ದು ಪಡಿತರ ಚೀಟಿಯ ಸಂಖ್ಯೆಯು ನಮಗೆ ಗೊತ್ತಿರುವುದಿಲ್ಲ, ಪುನಃ ಕಳೆದು ಹೋದ ಎಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಏನು ಮಾಡಬೇಕು ಎಂದು ಮಾಹಿತಿ ಪಡೆದರು.
ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕರು, ತಮ್ಮ ತಾಲೂಕಿನ ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿ ಹೊಸ ಎಪಿಎಲ್ ಪಡಿತರ ಚೀಟಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಫೋನ್-ಇನ್ ಕಾರ್ಯಕ್ರಮದಲ್ಲಿ ಆಹಾರ ಮತ್ತು ಪಡಿತರ ವಿಷಯಗಳಿಗೆ ಸಂಬಂಧಿಸಿದಂತೆ ಹಲವರು ಕರೆ ಮಾಡಿ ಮಾಹಿತಿ ಪಡೆದರು. ಕೋವಿಡ್-19 ನೋಡಲ್ ಅಧಿಕಾರಿ ಶ್ರೀನಿವಾಸ್, ಅನನ್ಯ ವಾಸುದೇವ್ ಇತರರು ಇದ್ದರು.
No comments
Post a Comment