ಸೌದೆ ತರಲು ಹೋದ ಕಾಡು ಹುಡುಗರನ್ನು ಹಿಡಿದು ಬಟ್ಟೆ ಬಿಚ್ಚಿ ಹೊಡೆದರು | ✍️ ರಂಜಿತ್ ಕವಲಪಾರ

No comments
  
 ( ಚಿತ್ರ :ದಿಡ್ಡಳ್ಳಿ ಕಾಡಿನಲ್ಲಿ ಸೋಮ ಹಾಗು ಮಹೇಶನೊಂದಿಗೆ ಲೇಖಕ ರಂಜಿತ್ ಕವಲಪಾರ ಹಾಗು ರಜತ್ ರಾಜ್.)

 ವಿಶೇಷ ಲೇಖನ 
ಬರಹ : ರಂಜಿತ್ ಕವಲಪಾರ
  ದಿಡ್ಡಳ್ಳಿ ಹಾಡಿಲಿ ನಾನು ಒಂದು ಬೀಡಿಗಾಗಿ ಬೇಡಿಕೆ ಇಟ್ಟಿದ್ದೆ. ಅವರಿಬ್ಬರು ಮುಖ ಮುಖ ನೋಡಿ ಗುಸು ಗುಸು ಅಂತ ನಕ್ಕು ಪ್ರಪಂಚದ ಮುಗ್ಧತೆಯನ್ನು ಮುಖಕ್ಕೆ ತಂದುಕೊಂಡು ಸಾರೂ. . . ನೀವು ಬೀಡಿ ಎಲ್ಲ ಎಳಿತೀರಾ? ಎಂದು ಅಚ್ಚರಿಯಿಂದ ಕೇಳಿದ್ದನು.

   ಹೌದು ಮತ್ತೆ ನಾನು ಮೂರನೇ ಕ್ಲಾಸ್ ಅಲ್ಲಿ ಇರುವಾಗಲೇ ಒಮ್ಮೆ ಬೀಡಿ ಎಳೆದಿದ್ದೆ, ಗೊತ್ತಾ ಅಂತ ನಾನು ಹಾಸ್ಯ ಮಾಡಿದ್ದೆ. ನನಗೆ ಆ ದುರ್ಗಮ ಅರಣ್ಯದಲ್ಲಿ ಬೀಡಿ ಎಳೆಯುವ ಯಾವುದೇ ಮಹದಾಸೆ ಮೂಡಿರಲಿಲ್ಲ. ಈ ಜೇನು ಕುರುಬ ಹುಡುಗರು ಅವರು ಹತ್ತಿಸಿ ಎಳೆದು ಎಂಜಲು ಮಾಡಿದ ಬೀಡಿಯನ್ನು ನಮಗೆ ಕೊಡುವುದಿಲ್ಲ ಎನ್ನುವುದು ನನಗೆ ಗೊತ್ತಿದ್ದರಿಂದ ಮತ್ತೆ ಅವರು ಈ ಹಿಂದಿನ ಕಾಲದ ಸಾಕಷ್ಟು ಮಡಿ, ಮೈಲಿಗೆಗಳಿಗೆ ಇನ್ನು ಜೋತು ಬಿದ್ದು ಮುಗ್ಧವಾಗಿ ಬದುಕುತ್ತಿರುವ ಅವರ ಕುರಿತು ತಿಳಿದಿದ್ದರಿಂದ ಅವರನ್ನು ಇಕ್ಕಟ್ಟಿಗೆ ನೂಕುವ ದೃಷ್ಟಿಯಲ್ಲಿ ನನಗೆ ಈಗಲೇ ಬೀಡಿ ಬೇಕು ಎಂದು ಸಣ್ಣ ಮಕ್ಕಳಂತೆ ಹಠಹಿಡಿದಿದ್ದೆ. 

ಅದಾಗಲೆ ನಾವು ಕಾಡಿಗೆ ಹೊರಡುವ ಮುನ್ನ ಗೂಡಂಗಡಿಯಿಂದ ಕೊಂಡುಕೊಂಡಿದ್ದ ಸರ್ವ ಬೀಡಿಯನ್ನು ಆ ಹುಡುಗರಿಬ್ಬರು ಒಬ್ಬರಾದ ಮೇಲೆ ಮತ್ತೊಬ್ಬರು ಪೈಪೋಟಿಯಲ್ಲಿ ಎಳೆದು ಮುಗಿಸಿ ಇಬ್ಬರಿಗೂ ಸೇರಿ ಒಂದೇ ಒಂದು ಬೀಡಿಯನ್ನು ಉಳಿಸಿಕೊಂಡ ಸುಸಂದರ್ಭವನ್ನು ನಾನು ಬಳಸಿಕೊಂಡು ಬೀಡಿಗಾಗಿ ಒತ್ತಾಯಿಸತೊಡಗಿದ್ದೆ. ಅವರಿಬ್ಬರು ಇದ್ದ ಒಂದು ಬೀಡಿಯನ್ನು ಅರ್ಧರ್ಧ ಎಳೆಯುವ ಸಂಚಿನಲ್ಲಿದ್ದರು. ಮತ್ತೆ ನಮ್ಮೊಂದಿಗೆ ಹೊರಟು ಬಂದಿದ್ದ ಅವರು ಅಷ್ಟೂ ಬೀಡಿಯನ್ನು ನಮ್ಮ ಕಣ್ಣಳತೆಯಿಂದ ದೂರಾಗಿ ಎಳೆಯುತ್ತಿದ್ದರು. ನಮ್ಮ ಅಂದರೆ ನನ್ನ ಹಾಗು ಗೆಳೆಯ ರಜತ್‌ನ ಕಣ್ಣು ತಪ್ಪಿಸಿ.,

   ಅಂದು ಮುಂಜಾನೆ ಮಡಿಕೇರಿ ನಗರದಲ್ಲಿ ಜೊತೆಯಾದ ನಾನು ಹಾಗು ಗೆಳೆಯ ರಜತ್ ಮಡಿಕೇರಿ ನಗರದಿಂದ ಒಂದೆರೆಡು ಮೈಲಿ ದೂರದಲ್ಲಿದ್ದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ ತಲುಪಿ ಅಲ್ಲಿಂದ ಒಂದೊಂದು ಕಾಫಿ ಹೀರಿ, ಫ್ರೆಂಚ್ ಫ್ರೈಸ್ ಕಚ್ಚಿಕೊಂಡು. ನನ್ನ ಗಾಡಿಯ ಹಿಂಬದಿ ಸೀಟಿನಲ್ಲಿ ಗೆಳೆಯ ರಜತ್‌ನನ್ನು ಹಾಕಿಕೊಂಡು. ನಿನಗೆ ಇಂದು ಬೇರೆಯದೇ ಆದ ಒಂದು ಸುಂದರ ಲೋಕವನ್ನು ತೋರಿಸುತ್ತೇನೆ ಬಾ ಎಂದು ಅವನಲ್ಲಿ ಕುತೂಹಲ ಮೂಡಿಸಿ ಸ್ಥಳ ತಲುಪುವವರೆಗೂ ಅವನಿಗೆ ಆ ಅತಿಸುಂದರ ಲೋಕದ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಹಾಗೆ ಮಡಿಕೇರಿ ಸಿದ್ದಾಪುರ ರಸ್ತೆಯ ರೆಸಾರ್ಟ್ ಒಂದರಿಂದ ಹೊರಟು ಸುಮಾರು ೪೦-೪೫ ಕಿ.ಮೀ ಕ್ರಮಿಸಿ ತಲುಪಿದ್ದು ದಿಡ್ಡಳ್ಳಿ ಹಾಡಿಯನ್ನು. ಹಾಗೆ ಗೆಳೆಯನನ್ನು ಕೂರಿಸಿಕೊಂಡು ಅಲ್ಲಿಗೆ ತಲುಪಿದ್ದ ನನ್ನ ಲೆಕ್ಕಚಾರ ಕೊಂಚ ತಪ್ಪಿತ್ತು. ನನಗೆ ಆ ಹಾಡಿಯಲ್ಲಿ ಎಲ್ಲವೂ ಆಗಿದ್ದ. ಹಿರಿಯ ಹೋರಾಟಗಾರ್ತಿ ಜೇನು ಕುರುಬರ ಮಹಿಳೆ ಮುತ್ತಮ್ಮಳ ಹಾಡಿ ಗುಡಿಸಲನ್ನು ತಲುಪುವ ಕೊಂಚ ಮುನ್ನವಷ್ಟೇ ಆಕೆ ಪೊನ್ನಂಪೇಟೆಯ ಸಂತೆಗೆ ಹೋಗಿದ್ದಳು. 

ಮೊದಲೇ ಮಾಹಿತಿ ನೀಡದೆ ಆಗಿಂದಾಗ್ಗೆ ಹೋಗಿ ತೊಂದರೆ ಕೊಡುವ ನನಗೆ ಮೊದಲೇ ಹೇಳಿ ಬರುವುದಕ್ಕೆ ಏನು ಸರ್. . . ನಿಮಗೆ ಎಂದು ಫೋನಿನಲ್ಲೇ ಬೈದಿದ್ದಳು. ನಾವು ತಲುಪುವಾಗಲೇ ಸೂರ್ಯ ನಡುನೆತ್ತಿಗೆ ಬರುವ ಹೊತ್ತಾಗಿದ್ದರಿಂದ ಆ ಬಿಸಿಲಿನ ಹೀಟಿಗೆ ಅವಳ ಬೈಗುಳ ನನಗೆ ಇನ್ನಷ್ಟು ಸಂಕಟವನ್ನು ಉಂಟುಮಾಡಿತ್ತು. ಕೊಂಚ ಬೈದ ನಂತರ ಅಲ್ಲೇ ಸುತ್ತಾಡ್ತಾ ಇರಿ ಕಾಡೊಳಗೆ ಹೋಗಬೇಡಿ ಹುಲಿ, ಕಾಡಾನೆ ಎಲ್ಲಾ ಇದೆ ನಾನು ಒಂದೆರೆಡು ಗಂಟೆಯಲ್ಲಿ ಬರುತ್ತೇನೆ. ಎಂದು ಎಚ್ಚರಿಸಿದ್ದಳು. ನಾನು ಸರಿ ಸರಿ ಬರುವಾಗ ನನಗೆ ಸಂತೆಯಿಂದ ತಿಂಡಿ ತನ್ನಿ ಎಂದು ಹೇಳಿದ್ದೆ ನೀವು ಒಂದು ತಮಾಷೆಯ ಮನುಷ್ಯ ಎಂದು ಗೊಣಗಿಕೊಂಡು ಫೋನ್ ಇಟ್ಟಿದ್ದಳು. ಹೀಗೆ ದಿಡ್ಡಳ್ಳಿಯ ನಡುವಲ್ಲಿ ಮುತ್ತಮ್ಮಳ ಮನೆಮುಂದೆ ನಿಂತ ನಮಗೆ ಮುಂದೇನು ಮಾಡುವುದು ಎಂದು ತೋಚದೆ ನಾನು ಹಾಗು ಗೆಳೆಯ ಮುಖ ಮುಖ ನೋಡಿಕೊಂಡು ಅವರ ಆ ಕಾಡು ರಸ್ತೆಯಲ್ಲಿ ಸುಮ್ಮನೆ ನಡೆಯುತ್ತಿರುವಾಗ.. ಮುತ್ತಮ್ಮಳ ಹಾಡಿ ಇಂದ ಒಂದೆರೆಡು ಫರ್ಲಾಂಗು ದೂರದಲ್ಲಿ ಮತ್ತೊಂದು ಹಾಡಿಯಿಂದ ಗಲಾಟೆಯ ಸದ್ದು ಕೇಳಿಸಿ ಕುತೂಹಲ ಕೆರಳಿ ಅತ್ತ ಕಡೆಗೆ ಧಾವಿಸಿದೆವು. 

ಅಲ್ಲಿ ಹೋದ ಕೂಡಲೇ ಒರ್ವ ಹುಡುಗನನ್ನು ಮತ್ತೊಬ್ಬ ವಯಸ್ಕ ಹಿಡಿದು ತೂರಾಡುತ್ತ ಆತನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಿದ್ದ. ಆ ವಯಸ್ಕ ಸಾಕಷ್ಟು ಹೆಂಡದ ನಶೆಯಲ್ಲಿದ್ದರಿಂದ ಆ ಹುಡುಗನಿಗೆ ಆತ ಹಲ್ಲೆ ಮಾಡಲು ಯತ್ನಿಸಿ ಅವನ ಮೇಲೆಯೇ ಬೀಳುತ್ತಿದ್ದ ದೃಶ್ಯ ನನಗೂ ಹಾಗು ರಜತ್‌ಗೂ ಸಾಕಷ್ಟು ಹಾಸ್ಯಸ್ಪದವಾಗಿತ್ತು. ನಮ್ಮನ್ನು ಕಂಡ ಅಲ್ಲೇ ಇದ್ದ ಮತ್ತೊಬ್ಬ ಯುವಕ. ಅವರ ಜಗಳವನ್ನು ತಪ್ಪಿಸುವ ಸಲುವಾಗಿ ಗಡ್ಡ ಬಿಟ್ಟು ಕಳ್ಳನಂತೆ ಕಾಣಿಸುತ್ತಿದ್ದ ನನ್ನನ್ನು ಹಾಗು ಅತಿಯಾದ ಆಹಾರ ಪ್ರೀಯತೆಯಿಂದ ದಡೂತಿಯಾಗಿದ್ದ ರಜತ್‌ನನ್ನು ಏಕಕಾಲಕ್ಕೆ ಪೊಲೀಸ್ ಮಾಡಿ ಬಿಟ್ಟಿದ್ದನು.. ಇದಾ ಪೊಲೀಸ್ ಬಂದ್ರು ಎಂದು ನಮ್ಮ ಬಳಿ ಆ ಹುಡುಗ ಓಡಿ ಬಂದು ಸಾರ್ ಇವನನ್ನು ಎತ್ಕೊಂಡು ಹೋಗಿ ಸರ್ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು ಅವನಿಗೆ ಕೇಳಿಸುವ ಹಾಗೆ ಏರು ಧ್ವನಿಯಲ್ಲಿ. ಹೇಳಿದನು. 

ಏಕಾ ಏಕಿ ನಮ್ಮಿಬ್ಬರನ್ನು ಪೊಲೀಸ್ ಎಂದು ಹೇಳಿ ಸಾರ್. . . ಸಾರ್. . . ಎಂದು ಮರ್ಯಾದೆ ಕೊಡುತ್ತಿದ್ದ ಕಾರಣ. ನಾನು ಹಾಗು ರಜತ್ ಸಾಕಷ್ಟು ಗಂಭೀರ ಮುಖಮಾಡಿಕೊಂಡು ಏರುಧ್ವನಿಯಲ್ಲಿ ಹೋಯ್ ಬಿಡೋ. . ಆ ಹುಡುಗನ ಮೇಲೆ ಹಲ್ಲೆ ಮಾಡುತ್ತಿದ್ದೀಯಾ? ಎಂದು ಗುಡುಗಿದೆ. ಪಾನಮತ್ತನಾಗಿದ್ದ ಅವನು ನಿಜವಾದ ಪೊಲೀಸ್ ಬಂದು ಗದರಿದ್ದರೂ ಕೇರ್ ಮಾಡದ ಸ್ಥಿತಿಯಲ್ಲಿದ್ದ. ಅವನು ಎಳೆದಾಡುತ್ತಾ ರಂಪಾಟ ಮಾಡುವುದರಲ್ಲಿ ಮುಂದುವರೆದ. ನನಗೆ ತಾಳ್ಮೆಇಲ್ಲದಾಗಿ ಮತ್ತಷ್ಟು ಗದರಿದ ನಂತರ ಸ್ವಲ್ಪ ಆ ಹುಡುಗನ ಬಟ್ಟೆಯ ಮೇಲಿನ ಅವನ ಹಿಡಿತವನ್ನು ಸಡಲಿಸಿದ. ಸಿಕ್ಕಿದ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಹುಡುಗನು. ಅವನಿಂದ ತಪ್ಪಿಕೊಂಡು ಬಂದು ಮತ್ತೊಬ್ಬ ಹುಡುಗನ ಬಳಿ ಬಂದು ನಿಂತು. ಅಲ್ಲಿ ಅಷ್ಟು ಹೊತ್ತು ಏನೇನು ಸಂಭವಿಸದಂತೆ ಕ್ಷಣಮಾತ್ರದಲ್ಲಿ ಸಹಜಸ್ಥಿತಿಗೆ ಬಂದಿದ್ದ. ಅವರ ನಿತ್ಯ ಜೀವನದ ಒಂದು ಅಂಗವೇ ಆಗಿ ಹೋಗಿದೆ ಈ ಕುಡಿತ ಹಾಗು ಜಗಳ, ರಂಪಾಟ ಎಂದು ಅರಿವಾಗಲು ನಮಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. 

   ಹಾಗೆ ಅಲ್ಲಿ ಕುಡಿದು ರಂಪಾಟ ಮಾಡುತ್ತಿದ್ದವನ ಹೆಸರು ಕೆಂಚ ಕುಡಿತದ ಚಟಕ್ಕೆ ಕಳೆದ ಕೆಲವರ್ಷಗಳಿಂದ ನಲುಗಿ ಹೋಗಿದ್ದ ಅವನು ಅವನ ಮಗ ಮಹೇಶನ ಬಳಿ ೫೦ರೂ ಕೊಡುವಂತೆ ಕೇಳಿ ಅಷ್ಟೆಲ್ಲ ರಂಪಾಟ ಮಾಡುತ್ತಿದ್ದ. ಅವನ ಕಥೆ ಕೇಳಿ ಆ ಜೇನು ಕುರುಬರ ಹಾಡಿಯಲ್ಲಿ ೫೦ರುಪಾಯಿಗೆ ಇದ್ದ ಮೌಲ್ಯದ ಕುರಿತು ಅಚ್ಚರಿಯೂ ಹಾಗಿತ್ತು. . ಅಯ್ಯೋ ಸರ್ ಇಲ್ಲಿ ೧೦-೨೦ರೂಪಾಯಿಗೆಲ್ಲ ಕೂನಿಯಾಗುತ್ತದೆ ಸರ್ ಎಂದು ಮಹೇಶನ ಗೆಳೆಯ ಸೋಮ ಹೇಳಿದಾಗ ನನ್ನ ಹಾಗು ರಜತ್‌ನ ಜೇಬಿನಲ್ಲಿದ್ದ ಹತ್ತಿರತ್ತಿರ ೧೦೦೦.೦೦ರುಪಾಯಿಗಳ ಕುರಿತು ಆ ಕ್ಷಣಕ್ಕೆ ಸಾಕಷ್ಟು ಬೇಸರವು, ಭಯವೂ ಆಗಿತ್ತು. ಹೀಗೆ ಆ ರಂಪಾಟದಿಂದ ತಪ್ಪಿಕೊಂಡ ಮಹೇಶ ಹಾಗು ಸೋಮ ನಮ್ಮ ಜೊತೆಗೋಡಿ ಆ ದಿಡ್ಡಳ್ಳಿ ಕಾಡನ್ನು ನಾವು ಕೇಳಿಕೊಳ್ಳದೆಯೇ ಸುತ್ತಿಸಿ ತೋರಿಸಿದ್ದರು, ಜೇನು ಕುರುಬರ ಕಾಡು ವನದೇವತಾ ಸನ್ನಿದಿಗೂ ನಮ್ಮನ್ನು ಕರೆದುಕೊಂಡು ಹೋಗಿ ಬೇಡಿಕೊಳ್ಳಲು ಅವಕಾಶ ಮಾಡಿದ್ದರು. ಒಂದಿಷ್ಟು ಕಾಲ ನಮ್ಮ ಜೇಬಿನಲ್ಲಿರುವ ದುಡ್ಡಿಗೆ ನಾನು ರಜತ್ ಇವರಿಬ್ಬರಿಂದ ಕೂನಿಯಾಗ ಬಹುದೆನ್ನುವ ಭಯವಿತ್ತಾದರು. ನಂತರ ಅವರೊಂದಿಗಿನ ಒಡನಾಟ ಭಯವನ್ನು ಮಾಸಿ ಆತ್ಮೀಯತೆಯನ್ನು ಹೆಚ್ಚಾಗಿಸಿತ್ತು..

    ನಗರದಲ್ಲಿ ನೈಜ ಕಳ್ಳರನ್ನು, ರೌಡಿಗಳನ್ನು, ಕೆಲವಾರು ಡೋಂಗಿ ರಾಜಕಾರಣಿಗಳನ್ನು, ಪರಿಸರವಾದಿಗಳನ್ನು, ಕಪಟ ಸಮಾಜಸೇವಕರನ್ನು ಸಾಕಷ್ಟು ಕಂಡು ಬೋರಾಗಿದ್ದ ನನಗೆ ನಿಜವಾದ ಮುಗ್ಧ ಮನಸ್ಸುಳ್ಳ, ನಿಷ್ಕಪಟ ಮನುಷ್ಯರಾಗಿದ್ದ ಜೇನುಕುರುಬರ ಹುಡುಗರಾದ ಸೋಮ ಹಾಗು ಮಹೇಶ ಆ ದಿನ ಪೂರ್ತಿ ಚೇತೋಹಾರಿಗಳಾಗಿದ್ದರು. ಅವರಿಗೆ ಅವರ ಅರಣ್ಯದ ಮೇಲಿರುವ ಪ್ರೀತಿಕಂಡು ನಾನು ಹಾಗು ರಜತ್ ನಿಜವಾದ ಅರಣ್ಯ ರಕ್ಷಕರು ಈ ಆದಿವಾಸಿ ಜನಾಂಗದವರೇ ಎಂದು ಮನಸ್ಸಿನಲ್ಲೇ ಹೆಮ್ಮೆ ಪಟ್ಟುಕೊಂಡಿದ್ದೋ ಹೀಗೆ ವನದೇವತೆಯ ಕಲ್ಲನ್ನು ನಮಗೆ ತೋರಿಸಿ ಮರಳುವ ಸಂದರ್ಭ ನಾನು ಮಹೇಶನ ಬಳಿ ಬೀಡಿಗಾಡಿ ಬೇಡಿಕೆ ಇಟ್ಟಿದ್ದು. ಅಲ್ಲಿಂದ ಮೈಲಿಗಟ್ಟಲೆ ದೂರವಿರುವ ಅಂಗಡಿಯಿಂದ ಬೀಡಿ ತರುವುದು ಕಷ್ಟ ಎಂದು ತಿಳಿದಿದ್ದ ನಾನು ಬೇಕುಂತಲೇ ನನಗೆ ಬೀಡಿ ಕೊಡದಿದ್ದರೆ ಇಲ್ಲಿಂದ ಒಂದಿಂಚು ಕದಲುವುದಿಲ್ಲ ಎಂದು ಹಠ ಹಿಡಿದಿದ್ದೆ. ಹಾಗೆ ಹಠ ಹಿಡಿಯುವ ಸಣ್ಣ ಅಂತರದಲ್ಲಿ ಮಹೇಶ ಹಾಗು ಸೋಮುವಿಗೆ ತಿಳಿಯದಂತೆ ರಜತ್‌ಗೆ ಕಣ್ಸನ್ನೆಯನ್ನೂ ಮಾಡಿದ್ದೆ. ಅದಕ್ಕೆ ಧ್ವನಿಗೂಡಿಸಿದ ಅವನು ನನ್ನಂತೆ ನನಗೂ ಒಂದು ಬೀಡಿ ಬೇಕೆಂದು ಹಠ ಹಿಡಿದಿದ್ದ. 

ಕಂಗಾಲಾದ ಅವರು ಇದ್ದ ಒಂದು ಬೀಡಿಯನ್ನು ಕೈಯಲ್ಲಿಡುತ್ತಾ ನೋವಿನಿಂದಲೇ ಆ ಬೀಡಿಯನ್ನು ಕೊಟ್ಟಿದ್ದರು. ನಾನು ಅವರ ಸಪ್ಪೆಮೋರೆಯನ್ನು ಗಮನಿಸಿ ಪರವಾಗಿಲ್ಲ ಈ ಒಂದು ಬೀಡಿಯನ್ನು ನಾವು ನಾಲ್ಕು ಜನರೂ ಸೇದೋಣ ಎಂದಾಗ ಎಲ್ಲಾದರೂ ಉಂಟೆ? ನಾವು ಎಳೆದ ಬೀಡಿಯನ್ನು ನೀವು ಸೇದಬಾರದು ಎಂದು ಅಚ್ಚರಿ ಹಾಗು ನಿರ್ಧಾರದ ಧ್ವನಿಯಲ್ಲಿ ಅವರಿಬ್ಬರು ಏಕಕಾಲಕ್ಕೆ ಒದರಿದ್ದರು. ಸೇದಿದರೆ ಏನಾಗುತ್ತದೆ? ಎಂದು ನಾನು ಬೇಕಂತಲೇ ಸತಾಯಿಸತೊಡಗಿದೆ. ಏನೇ ಹರಸಾಹಸ ಮಾಡಿದರೂ ಒಪ್ಪದ ಅವರು ಕೊನೆ ಕೊನೆಗೆ ನಿಷ್ಠುರವಾಗಿ ಅದೆಲ್ಲಾ ಆಗಲ್ಲ ಸಾರ್.. ಎಂದು ಕಡ್ಡಿತುಂಡು ಮಾಡಿದ ಹಾಗೆ ಹೇಳಿ ನಮ್ಮಿಬ್ಬರಿಗೆ ನಿರಾಶೆಯನ್ನು ಮೂಡಿಸಿದ್ದರು. ನಂತರ ನಾವೇ ಅವರಿಗೆ ಶರಣಾಗಿ ಆ ಬೀಡಿಯನ್ನು ಹತ್ತಿಸಿಕೊಂಡು ನಾವಿಬ್ಬರು ಯಾವ ರಜನಿಕಾಂತನಿಗೂ ಕಮ್ಮಿ ಇಲ್ಲದ ಹಾಗೆ ಸ್ಟೈಲ್ ಆಗಿ ಬೀಡಿ ಎಳೆದು ಹೊಗೆ ಬಿಡುತ್ತಿದ್ದರೆ ಈ ಸೋಮನಿಗೂ, ಮಹೇಶನಿಗೂ ಎರಡು ರಜನಿಕಾಂತರನ್ನು ಒಂದೇ ಬಾರಿಗೆ ನೇರವಾಗಿ ನೋಡಿದ ಹಾಗೆ ಆಗಿ, ಮುಗ್ಧವಾಗಿ ಕುಣಿದು ಸಂತೋಷ ಪಟ್ಟಿದ್ದರು. 

ನಂತರ ಅಲ್ಲಿಂದ ಹೊರಟು ಅವರ ಗೂಡಿನಂತಹ ದುರ್ಗಮ ಹಾಡಿ(ಮಣ್ಣು, ಮರ, ಟಾರ್ಪಲ್, ಬಿದಿರು ಬಳಸಿ ಮಾಡುವಂತಹ ಗುಡಿಸಲು)ಯನ್ನು ತೋರಿಸಿ. ಮಹೇಶನ ಮನೆಯಲ್ಲಿದ್ದ ಗಿಳಿಯನ್ನು ತೋರಿಸಿ. ಅಷ್ಟರಲ್ಲಿ ಪೇಟೆಯಿಂದ ಬಂದಿದ್ದ ಮುತ್ತಮ್ಮಳ ಕೈಯಿಂದಲು ಸರಿಯಾಗಿ ಬೈಗಳವನ್ನು ತಿಂದಿದ್ದರು. ಈ ಪೇಟೆ ಹುಡುಗರನ್ನು ಹೀಗೆ ಕಾಡಿಗೆ ಕರೆದುಕೊಂಡು ಹೋಗಿ ಏನಾದರು ಹೆಚ್ಚು ಕಮ್ಮಿ ಆದರೆ ಯಾರು ಹೊಣೆ? ಎನ್ನುವುದು ಅವಳು ಬೈದುದರ ಉದ್ದೇಶವಾಗಿತ್ತು. ಮಡಿಕೇರಿಯೇ ಕಾಡು ಎಂದು ನಂಬಿದ್ದ ನಮಗೆ ಆ ದೊಡ್ಡ ಕಾಡು ಹೆದರಿಕೆ ಹುಟ್ಟಿಸಿರಲಿಲ್ಲ. ಆದರೆ ಅಲ್ಲಿದ್ದ ಕಾಡು ಪ್ರಾಣಿಗಳ ಕುರಿತು ಇಂಚಿಂಚು ಅರಿವಿದ್ದ ಮುತ್ತಮ್ಮಳ ಹೆದರಿಕೆಗೆ, ಭಯಕ್ಕೆ ಕಾರಣವೂ ಇತ್ತು. 

ಅಂದು ಮುತ್ತಮ್ಮ ಪೇಟೆಯಿಂದ ಬರುವಾಗ ನಮಗಾಗಿ ತಂದಿದ್ದ ಸಿಹಿ ತಿಂಡಿಯನ್ನು, ಮಿಕ್ಚರ್ ಅನ್ನು ತಿಂದು ಅವಳು ಮಾಡಿಕೊಟ್ಟ ಬೆಲ್ಲದ ಕಾಫಿಯನ್ನು ಹೀರಿ ಮರಳುವ ಮುನ್ನ ಮಹೇಶನಿಗೂ, ಸೋಮನಿಗೂ ಒಂದಿಷ್ಟು ಟಿಪ್ಸ್ ಅನ್ನು ಕೊಟ್ಟು ಮರಳಿದ್ದೊ. ನಾವು ಕೊಟ್ಟ ಅಲ್ಪಮೊತ್ತದ ಟಿಪ್ಸ್ ಅವರಿಗೆ ಭಯಂಕರ ಸಂತೋಷ ಉಂಟುಮಾಡಿತು. ಅವರು ಕಾಡಿನಲ್ಲಿ ಇಂತಹ ಸಣ್ಣಪುಟ್ಟ ಅಚ್ಚರಿಗಳಿಂದಲೇ ಬದುಕುವ ಮುಗ್ಧ, ನಿಷ್ಕಲ್ಮಶ ಹುಡುಗರು ಹೌದಾಗಿದ್ದರು.

     ಇಷ್ಟೇಲ್ಲ ಯಾಕೆ ಬರೆದೆ ಎಂದರೆ.. ಮೊನ್ನೆ ಕೊಡಗಿನ ದಿನಪತ್ರಿಕೆಯಲ್ಲಿ ಇವರಿಬ್ಬರ ಫೋಟೋ ಕಂಡು ಬೆರಗಾಗಿದ್ದೆ. ಫೋಟೋದಲ್ಲಿ ಸೋಮು ಹಾಗು ಮಹೇಶ ಒಂದಿಷ್ಟು ಮರದ ಕುಂಟೆಗಳ ಜೊತೆಗೆ ಸ್ಲೇಟು ಹಿಡಿದು ಕುಂತಿದ್ದರು ಆ ಫೋಟೋವನ್ನು ರಜತ್‌ಗೂ ಕಳುಹಿಸಿದ್ದೆ. ಅದಕ್ಕೆ ರಜತ್ ಅಧಿಕಾರಿಗಳು ಲೋಡುಗಟ್ಟಲೆ ಮರಗಳನ್ನು ಲಪಟಾಯಿಸುವ ಖದೀಮರಿಗೆ ಸಾಥ್ ಕೊಡುವುದು ಹಾಗು ಹಾಡಿ ಗುಡಿಸಲು ನಿರ್ಮಾಣಕ್ಕೋ, ಸೌದೆಗೋ ಇಂತಹ ಸಣ್ಣ ಪುಟ್ಟ ಅರಣ್ಯದ ಸಂಪತ್ತನ್ನು ಬಳಸಿಕೊಳ್ಳುವ ಅಮಾಯಕರನ್ನು ದಂಡಿಸುವುದು ಇದೇ ಮೊದಲಲ್ಲವಲ್ಲಾ? ಎಂದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದ. ಅವನ ಆಕ್ರೋಶವು ನನ್ನ ಊಹೆಯು ಇವರಿಬ್ಬರ ವಿಚಾರದಲ್ಲಿ ಸರಿಯೂ ಆಗಿತ್ತು. 

      ಸೋಮ ಸಣ್ಣ ಪುಟ್ಟ ಕೂಲಿನಾಲಿಮಾಡಿ ಬದುಕುತ್ತಿದ್ದರೆ, ಈ ಮಹೇಶ ಕೂಲಿನಾಲಿಯೊಂದಿಗೆ ರಕ್ಷಿತಾರಣ್ಯಕ್ಕೆ ಬೆಂಕಿಬಿದ್ದರೆ ನಂದಿಸುವ ಅರಣ್ಯ ಇಲಾಖೆಯ ಅರೆಕಾಲಿಕ ನೌಕರನೂ ಆಗಿದ್ದ. ಮಹೇಶ ತನ್ನ ಗುಡಿಸಲು ನಿರ್ಮಾಣಕ್ಕೆ ಸೋಮನ ಸಹಾಯ ಪಡೆದು ಅರಣ್ಯದಿಂದ ಸಣ್ಣ ಮರವನ್ನು ಕಡಿದದ್ದು ನಿಜ. ಮಹೇಶನಿಗೆ ಆಗದ ಗಾರ್ಡ್‌ಗಳಿಬ್ಬರು ಇದನ್ನೇ ಅವರ ಆರೋಪ ಎಂದು ಬಂಧಿಸಿ ಇವರು ಕಡಿದಿದ್ದ ಸಣ್ಣ ಮರಗಳಿಗೆ ಬದಲಾಗಿ ಆ ಸ್ಥಳದಲ್ಲಿ ದೊಡ್ಡಕುಂಟೆಗಳನ್ನು ಇಟ್ಟು, ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಕಳ್ಳತನ ಮಾಡಿದ ಅರೋಪದಡಿ, ಮೊಕದ್ದಮೆಯನ್ನು ಬರೆದು. ಅಮಾನವೀಯವಾಗಿ ಬಟ್ಟೆಬಿಚ್ಚಿ ಈ ಜೇನುಕುರುಬರ ಹುಡುಗರ ಮೇಲೆ ರಾತ್ರಿ ಪೂರ್ತಿ ಹಲ್ಲೆ ನಡೆಸಿ, ಅರೆಜೀವ ಮಾಡಿ ಕೊನೆಗೆ ತಂದು ಅವರವರ ಹಾಡಿಗೆ ಬಿಟ್ಟು ಹೋಗಿದ್ದಾರೆ. 
 ಈ ಪ್ರಕರಣವನ್ನು ಈಗಾಗಲೇ ಜೇನು ಕುರುಬರ ಮುಖಂಡರು ಹಾಗು ವಿವಿಧ ಸಂಘ ಸಂಸ್ಥೆಗಳು ಖಂಡಿಸಿದ್ದು ಈ ಅಮಾನವೀಯ ಕೃತ್ಯಕ್ಕೆ ಕಾರಣಕರ್ತರಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡುವಂತೆ. ಹಾಗು ಮಾರಣಾಂತಿಕ ಹಲ್ಲೆಯಿಂದ ಹಾಸಿಗೆ ಹಿಡಿದಿರುವ ಯುವಕರಿಗೆ ಮೂರುತಿಂಗಳ ಜೀವನಾಂಶ ನೀಡುವಂತೆ ಒತ್ತಾಯಿಸಿದೆ. 

   ವೈಯುಕ್ತಿಕವಾಗಿ ಒಂದು ಪೂರ್ತಿದಿನ ಒಡನಾಡಿದ್ದ ನನಗೂ ಹಾಗು ರಜತ್‌ಗೂ ಯಾವುದೇ ದಿಕ್ಕಿನಿಂದ ಸೋಮ, ಹಾಗು ಮಹೇಶ ಕಳ್ಳರಂತೆ ಅದರಲ್ಲೂ ಲಕ್ಷಗಟ್ಟಲೆ ಬೆಲೆಬಾಳುವ ಮರಗಳನ್ನು ಕಡಿದು ಲಾರಿಗೆ ತುಂಬಿಸಿ ಕೇರಳ ಮುಂತಾದ ರಾಜ್ಯಗಳಿಗೆ ಸಾಗಿಸಿದ್ದ, ಸಾಗಿಸುತ್ತಿರುವ ನೈಜ ಮರಗಳ್ಳರಂತೆ ಕಂಡಿರಲಿಲ್ಲ... ಈ ಅಮಾನವೀಯ ಕೃತ್ಯವನ್ನು ಈ ಲೇಖನದ ಮೂಲಕ ನಾನು ಕೂಡ ಕಟುವಾಗಿ ಖಂಡಿಸುತ್ತಿದ್ದು ನ್ಯಾಯಕ್ಕೆ, ಸತ್ಯಕ್ಕೆ ಜಯಸಿಗಲಿ ಎಂದು ಈ ಮೂಲಕ ನಾನು ಒತ್ತಾಯಿಸುತ್ತಿದ್ದೇನೆ.

No comments

Post a Comment