ಮೇಕೇರಿ: ಶ್ರಮದಾನದ ಮೂಲಕ ರಸ್ತೆಬದಿ ಸ್ವಚ್ಛತಾ ಕಾರ್ಯ

No comments

ಮಡಿಕೇರಿ ಅ.04:-ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ ಕ್ಲಬ್, ಗ್ರಾಮ ಪಂಚಾಯಿತಿ, ಗ್ರೀನ್ ಸಿಟಿ ಫೋರಂ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ಗಾಂಧೀಜಿ ಅವರ 150 ನೇ ಜನ್ಮದಿನದ ವರ್ಷಾಚರಣೆ ಪ್ರಯುಕ್ತ ಸ್ವಚ್ಛತಾ ಆಂದೋಲನವು ಇತ್ತೀಚೆಗೆ ಜರುಗಿತು.   
‘ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಸಂರಕ್ಷಿಸಿ’ ಜನಾಂದೋಲನ ಹಾಗೂ ಸ್ವಚ್ಛತಾ ಕಾರ್ಯಕ್ಕೆ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಜಿ.ಪಂ.ಸಿಎಒ ಕೆ.ಲಕ್ಷ್ಮೀಪ್ರಿಯಾ ಅವರು ಪರಿಸರವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 
ನಿತ್ಯ ಜೀವನದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಬಟ್ಟೆ ಬ್ಯಾಗ್ ಇನ್ನಿತರ  ಪರಿಸರ  ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು. ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.  
ಮಡಿಕೇರಿ ತಾ.ಪಂ.ಇಒ ಲಕ್ಷ್ಮಿ ಅವರು ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛ ಪರಿಸರ ನಿರ್ಮಿಸಲು ಸಹಕರಿಸಬೇಕು ಎಂದರು. ಮಡಿಕೇರಿ ಗ್ರೀನ್‍ಸಿಟಿ ಫೋರಂನ ಅಧ್ಯಕ್ಷ ಸಿ.ಜಿ.ಸತ್ಯ ಮಾತನಾಡಿ, ವಿದ್ಯಾರ್ಥಿಗಳು ಜನರಲ್ಲಿ ಸ್ವಚ್ಛತೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೆಂಚಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಪಿ.ಧನಂಜಯ, ಪ್ರಾಂಶುಪಾಲ ಪಿ.ಆರ್.ವಿಜಯ್, ಗ್ರೀನ್ ಸಿಟಿ ಫೊರಂ ಸದಸ್ಯರಾದ ಮೊಂತಿ ಗಣೇಶ್, ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ, ಕಾರ್ಯದರ್ಶಿ ಕಾರ್ಯಪ್ಪ, ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ.ಜಯಂತಿ, ಉಪಾಧ್ಯಕ್ಷ ಕೆ.ಎಸ್.ಭೀಮಯ್ಯ, ಸದಸ್ಯರಾದ ನಾಚಪ್ಪ, ಪ್ರಕಾಶ್ ಕಾರ್ಯಪ್ಪ, ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಮುಖ್ಯ ಶಿಕ್ಷಕಿ ಎಂ.ಬಿ.ಕುಸುಮಾವತಿ, ಪಿ.ಡಿ.ಒ.ಪ್ರಕಾಶ್,  ಎನ್ನೆಸ್ಸೆಸ್ ಅಧಿಕಾರಿ ಬಿ.ಡಿ.ರವೀಶ್, ಉಪನ್ಯಾಸಕರಾದ ಎಸ್.ನಂದೀಶ್, ಇತರರು ಇದ್ದರು.
ನಂತರ ಎನ್ನೆಸ್ಸೆಸ್ ಶಿಬಿರಾರ್ಥಿಗಳು, ಗ್ರೀನ್ ಸಿಟಿ ಪೋರಂನ ಸ್ವಯಂ ಸೇವಕರು, ಶಾಲೆಯ ಇಕೋ ಕ್ಲಬ್‍ನ ವಿದ್ಯಾರ್ಥಿಗಳು, ಗ್ರಾಮಸ್ಥರು ಜತೆಗೂಡಿ ಮೇಕೇರಿ ಗ್ರಾಮದ ಪರಿಸರದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಹೆರಕುವ ಮೂಲಕ ಸ್ವಚ್ಛತೆ ನಡೆಸಿದರು. ಮೇಕೇರಿ ಗ್ರಾಮದಿಂದ ಮಡಿಕೇರಿ ತನಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಸ್ವಯಂ ಸೇವಕರು ರಸ್ತೆಯ ಇಕ್ಕೆಡೆಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಕವರ್‍ಗಳು ಮತ್ತಿತರ ತ್ಯಾಜ್ಯವನ್ನು ಸಂಗ್ರಹಿಸಿ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಮೇಕೇರಿಯಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯವು ಮಡಿಕೇರಿ ನಗರದಲ್ಲಿ ಕೊನೆಗೊಂಡಿತು.

No comments

Post a Comment