ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಕೆ.ಜಿ.ಬೋಪಯ್ಯ

No comments

ಮಡಿಕೇರಿ :-ನಾಡಿನ ಜೀವನದಿ ‘ಕಾವೇರಿ’ ಉಗಮ ಸ್ಥಾನ ತಲಕಾವೇರಿಯಲ್ಲಿ ಇದೇ ಅಕ್ಟೋಬರ್, 17 ರಂದು ಮಧ್ಯಾಹ್ನ 1.11 ಗಂಟೆಗೆ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಪವಿತ್ರ ತೀರ್ಥೋದ್ಭವ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕೋರಿದ್ದಾರೆ.  

     ಭಾಗಮಂಡಲದ ಮುಡಿಶೆಡ್ ಕಟ್ಟಡದಲ್ಲಿ ಗುರುವಾರ ನಡೆದ ಪವಿತ್ರ ಕಾವೇರಿ ತುಲಾ ಸಂಕ್ರಮಣ ಜಾತ್ರಾ ಮಹೋತ್ಸವ ಸಂಬಂಧ ವಿವಿಧ ಇಲಾಖೆಗಳು ಕೈಗೊಂಡಿರುವ ಅಗತ್ಯ ಸಿದ್ಧತೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಲಹೆ, ಅಭಿಪ್ರಾಯ ಪಡೆದು ಶಾಸಕರು ಮಾತನಾಡಿದರು. 

     ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭಕ್ಕೆ ತೆರಳಲು ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಗಳನ್ನು ಪಾಲಿಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದರು.   

      ಕಾವೇರಿ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಸ್ನಾನ ಮಾಡಲು ಅವಕಾಶ ಇಲ್ಲ. ಆದರೆ ಸ್ವಯಂ ಸೇವೆಕರು ತೀರ್ಥ ವಿತರಿಸಲಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.  

      ಪೊಲೀಸ್ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಕಾಟಕೇರಿ ಬಳಿ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡುವುದು, ಹಾಗೆಯೇ ತಲಕಾವೇರಿಯಿಂದ-ಭಾಗಮಂಡಲ ಕಡೆಗೆ ಪಾಂಡಿ ರಸ್ತೆ ಮೂಲಕ ಏಕಮುಕ ವಾಹನ ಸಂಚಾರಕ್ಕೆ ಅಗತ್ಯ ಕ್ರಮವಹಿಸುವುದು. ಹಾಗೂ ರಜಾ ದಿನಗಳು ಸೇರಿದಂತೆ ವಾರಾಂತ್ಯದಲ್ಲಿ ಭಾಗಮಂಡಲಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಶಾಸಕರು ಸಲಹೆ ಮಾಡಿದರು. 

      ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗಳು ಮಡಿಕೇರಿ-ಭಾಗಮಂಡಲ, ವಿರಾಜಪೇಟೆ-ಭಾಗಮಂಡಲ ಮತ್ತು ಕರಿಕೆ-ಭಾಗಮಂಡಲ ಮಾರ್ಗದ ರಸ್ತೆ ಬದಿ ಗಿಡಗಂಟೆಗಳನ್ನು ಕಡಿಯುವುದರ ಜೊತೆಗೆ, ಗುಂಡಿ ಮುಚ್ಚುವ ಕಾರ್ಯ  ಪೂರ್ಣಗೊಳಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಬದಿ ಅಪಾಯದಲ್ಲಿರುವ ಕೊಂಬೆಗಳನ್ನು ತೆರವುಗೊಳಿಸುವಂತೆ ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.   

       ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‍ಗಳು ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸ್ವಚ್ಛತೆಗೆ ಒತ್ತು ನೀಡುವ  ಕೆಲಸ ಮಾಡುವಂತೆ ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು.      

      ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇವಾಲಯದ ಆದಾಯ ಕಡಿಮೆಯಾಗಿದೆ. ಆದ್ದರಿಂದ ಈ ಬಾರಿ ಸರ್ಕಾರದಿಂದ ಹಣ  ಬಿಡುಗಡೆಯಾಗಲಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. 

      ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಭಾಗಮಂಡಲದ ಗ್ರಾ.ಪಂ.ಉಪಾಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಅವರು ಈಗಾಗಲೇ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವ ಸಂಬಂಧ ಗ್ರಾ.ಪಂ.ವತಿಯಿಂದ ಯಾವ ಕೆಲಸಗಳು ಆಗಬೇಕಿದೆ ಎಂಬ ಬಗ್ಗೆ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಭಾಗಮಂಡಲದಲ್ಲಿ ನಾಲ್ಕು ಸಂಚಾರಿ ಶೌಚಾಲಯ ತಾತ್ಕಾಲಿಕ ನಿರ್ಮಾಣ, ತಲಕಾವೇರಿಯಲ್ಲಿ 10 ಸಂಚಾರಿ ಶೌಚಾಲಯ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ ಎಂದರು. 

       ಭಾಗಮಂಡಲದಲ್ಲಿ ಮೇಲುಸೇತುವೆ ನಿರ್ಮಾಣ ಆಗುತ್ತಿರುವುದರಿಂದ ರಸ್ತೆ ಗುಂಡಿಮಯವಾಗಿದ್ದು, ರಸ್ತೆ ಗುಂಡಿ  ಮುಚ್ಚಿಸಬೇಕಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕುಡಿಯುವ ನೀರು ಕಲ್ಪಿಸಲಾಗುತ್ತದೆ. ಪರಿಸರ ಶುಚಿತ್ವಕ್ಕೆ ಒತ್ತು ನೀಡಲಾಗಿದೆ ಎಂದು ಹೊಸೂರು ಸತೀಶ್ ಕುಮಾರ್ ಅವರು ಮಾಹಿತಿ ನೀಡಿದರು.  

      ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.   

       ಈ ಸಂದರ್ಭದಲ್ಲಿ ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಮನು ಮುತ್ತಪ್ಪ ಅವರು ಹುಣಸೂರು-ತಲಕಾವೇರಿ ರಸ್ತೆ ಸರಿಪಡಿಸಬೇಕು. ತಲಕಾವೇರಿಯಲ್ಲಿ ಸಂಜೆ 6 ಗಂಟೆಯ ನಂತರ ಪೂಜಾ ಕಾರ್ಯಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.  

       ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರು ಮಾತನಾಡಿ ಕುಡಿಯುವ ನೀರು ಪರೀಕ್ಷೆ ಮಾಡಲಾಗುವುದು. ತುಲಾ ಸಂಕ್ರಮಣದಂದು ಕೋವಿಡ್-19 ಸಂಬಂಧ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.  

       ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು ಜನದಟ್ಟಣೆ ನಿಯಂತ್ರಿಸುವುದು, ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮವಹಿಸಲಿದೆ. ಅಗತ್ಯ ಹೋಂ ಗಾರ್ಡ್‍ಗಳನ್ನು ನಿಯೋಜನೆ ಜೊತೆಗೆ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗುತ್ತದೆ. ತಲಕಾವೇರಿ ವಾಹನ ನಿಲುಗಡೆ ಪ್ರದೇಶದಲ್ಲಿ 150 ವಾಹನಗಳ ನಿಲುಗಡೆಗೆ ಅವಕಾಶವಿದೆ. ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ಅವರು ಕೋರಿದರು. 

       ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷರಾದ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು ಮಾತನಾಡಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ತಲಕಾವೇರಿ ಜಾತ್ರಾ ಮಹೋತ್ಸವಕ್ಕೆ ತೆರಳಲು ಭಕ್ತಾಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ಪ್ರವಾಸಿಗರನ್ನು ತಡೆಯಬೇಕು ಎಂದು ಅವರು ಸಲಹೆ ಮಾಡಿದರು.  

      ಈ ಸಂದರ್ಭದಲ್ಲಿ ಮನುಮುತ್ತಪ್ಪ ಅವರು ಮಾತನಾಡಿ ನಮ್ಮ ಅವಧಿಯಲ್ಲಿ ಡ್ರೆಸ್ ಕೋಡ್ ಮಾಡಲಾಗಿತ್ತು, ಆದರೆ ಇದು ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ ಎಂದರು. 

         ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ತಲಕಾವೇರಿ-ಭಾಗಮಂಡಲ ಪುಣ್ಯ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿ ಗುರುತಿಸುವುದರಿಂದ ಸಮಸ್ಯೆಗಳು ಹೆಚ್ಚಿದೆ. ಆದ್ದರಿಂದ ಪ್ರವಾಸಿ ಕೇಂದ್ರದ ಬದಲಾಗಿ ಪವಿತ್ರ ಪುಣ್ಯ ಧಾರ್ಮಿಕ ಕ್ಷೇತ್ರವನ್ನಾಗಿ ಗುರುತಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. 

       ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಲಕಾವೇರಿ ಭಾಗಮಂಡಲ ಧಾರ್ಮಿಕ ಪುಣ್ಯ ಕ್ಷೇತ್ರದ ಬದಲಾಗಿ ಪ್ರವಾಸಿ ಸ್ಥಳವೆಂದು ನಮೂದಾಗಿದ್ದು, ಇದನ್ನು ತೆಗೆಸಲು ಕ್ರಮವಹಿಸಲಾಗುವುದು ಎಂದರು. 

       ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಈ ಬಾರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಇಲ್ಲದಿರುವುದರಿಂದ ಗ್ರಾ.ಪಂ.ಯವರು ಹೆಚ್ಚಿನ ಜವಾಬ್ದಾರಿವಹಿಸಬೇಕು ಎಂದು ಸಲಹೆ ಮಾಡಿದರು.

       ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಹೊಸಗದ್ದೆ ಭಾಸ್ಕರ ಅವರು ತುಲಾ ಸಂಕ್ರಮಣ ಜಾತ್ರಾ ಸಂದರ್ಭದಲ್ಲಿ ನಿಯಮಗಳು ಜಾರಿಗೆ ಬರುತ್ತವೆ. ಆದರೆ ಜಾತ್ರೆಯ ನಂತರ ಯಾವುದೇ ಕಾರ್ಯಗಳು ಅನುಷ್ಠಾನವಾಗುವುದಿಲ್ಲ ಎಂದರು.  

       ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ ವರ್ಷಕ್ಕೊಮ್ಮೆ ನಡೆಯುವ ಪವಿತ್ರ ತೀರ್ಥೋದ್ಭವಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದು ಕೋರಿದರು.

       ಪಶ್ಚಿಮಘಟ್ಟ ಸಮಿತಿ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಪವಿತ್ರ ತೀರ್ಥೋದ್ಭವ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡದೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಅವರು ಸಲಹೆ ಮಾಡಿದರು.  

       ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ.ಬಿ.ದೇವಯ್ಯ, ಪ್ರಮುಖರಾದ ಕಾಳನ ರವಿ, ಅಮೆ ಬಾಲಕೃಷ್ಣ, ಕುದುಕುಳಿ ಭರತ್, ಪ್ರಮೋದ್ ಸೋಮಯ್ಯ ಇತರರು ಹಲವು ಸಲಹೆ ನೀಡಿದರು.    

        ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬೊಳ್ಳಡ್ಕ ಅಪ್ಪಾಜಿ, ಗ್ರಾ.ಪಂ.ಅಧ್ಯಕ್ಷರಾದ ಪೆಮಿತಾ, ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ, ತಾ.ಪಂ.ಇಒ ಶೇಖರ್, ತಹಶೀಲ್ದಾರ್ ಮಹೇಶ್, ಎಇಇ ಶಿವರಾಮ್, ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ದೇವಾಲಯದ ಇಒ ಕೃಷ್ಣಪ್ಪ, ಕೆ.ಆರ್.ಮಹೇಶ್, ಪಿಡಿಒ ನಂದಕುಮಾರ್ ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.

No comments

Post a Comment