ಮಡಿಕೇರಿ :-ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ ಸಹಯೋಗದೊಂದಿಗೆ ನಗರದ ಡಿಡಿಪಿಐ ಕಚೇರಿಯಲ್ಲಿ ಗುರುವಾರ "ಸುಸ್ಥಿರ ಜೀವನಕ್ಕಾಗಿ ಜೀವನ" ಎಂಬ ಕೇಂದ್ರ ವಿಷಯದಡಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ 28 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾದ 10 ಕಿರಿಯ ವಿಜ್ಞಾನಿಗಳನ್ನು ಪುರಸ್ಕರಿಸಿ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕೋವಿಡ್-19 ರ ಹಿನ್ನೆಲೆಯಲ್ಲಿ ಭೌತಿಕ ಸಮಾವೇಶಕ್ಕೆ ಪರ್ಯಾಯವಾಗಿ ಆನ್‍ಲೈನ್ ಮೂಲಕ ನಡೆದ ಜಿಲ್ಲಾ ಮಟ್ಟದ 28 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾದ ಜಿಲ್ಲೆಯ ಕಿರಿಯ ವಿಜ್ಞಾನಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಪ್ರಭಾರ ಡಿಡಿಪಿಐ ಎಚ್.ಕೆ.ಮಂಜುನಾಥ್, ಶಿಕ್ಷಕರು ಮಕ್ಕಳಲ್ಲಿ ಮೂಲ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸುವುದರೊಂದಿಗೆ, ಮಕ್ಕಳನ್ನು ಅನ್ವೇಷಣಾ ಕ್ಷೇತ್ರದಲ್ಲಿ ತೊಡಗಿಸುವ ಮೂಲಕ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಪ್ರೇರೇಪಿಸಬೇಕು ಎಂದರು.
ದೇಶದಲ್ಲಿ ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವೇಷಣೆಗಳ ಬಳಕೆ ಮಾಡಿಕೊಂಡು ಸ್ಥಳೀಯ ಪರಿಸರ ಸಮಸ್ಯೆಗಳಿಗೆ ವೈಜ್ಞಾನಿಕ ಸಂಶೋಧನೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳನ್ನು ಪುರಸ್ಕರಿಸಿದ ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗರ್ವನರ್ ಎಚ್.ಟಿ.ಅನಿಲ್ ಅವರು ಮಾತನಾಡಿ, ಇಂತಹ ವಿಜ್ಞಾನ ಸಮಾವೇಶದ ಮೂಲಕ ಕೊಡಗಿನ ಬಾಲ ವಿಜ್ಞಾನಿಗಳು ಪ್ರತಿವರ್ಷ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತರುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲೆಯಲ್ಲಿ ಇಂತಹ ಉಪಯುಕ್ತ ವಿಜ್ಞಾನ ಕಾರ್ಯಕ್ರಮಗಳನ್ನು ವಿಜ್ಞಾನ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮತ್ತು ತಂಡದವವರು ಜಿಲ್ಲೆಯಲ್ಲಿ ವಿಜ್ಞಾನ ಮತ್ತು ಪರಿಸರ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುತ್ತಿರುವುದಕ್ಕೆ ಶ್ಲಾಘಿಸಿದರು.
ವಿಜ್ಞಾನ ಜನಪ್ರಿಯಗೊಳಿಸುವಲ್ಲಿ ವಿಜ್ಞಾನ ಪರಿಷತ್ತು ಹಮ್ಮಿಕೊಳ್ಳುತ್ತಿರುವ ಕಾರ್ಯಚಟುವಟಿಕೆಗಳು ಮಾದರಿಯಾಗಿವೆ ಎಂದು ಅನಿಲ್ ಅವರು ಹೇಳಿದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮಹತ್ವ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ.ಪ್ರೇಮಕುಮಾರ್, ಈ ಸಮಾವೇಶವು ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವುದರೊಂದಿಗೆ ಭವಿಷ್ಯದ ಬಾಲವಿಜ್ಞಾನಿಗಳನ್ನಾಗಿ ರೂಪಿಸಲು ಸೂಕ್ತ ವೇದಿಕೆ ಒದಗಿಸುತ್ತದೆ ಎಂದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಕೇಂದ್ರ ವಿಷಯದಡಿ ವಿವಿಧ ಉಪ-ವಿಷಯಗಳ ಅಭ್ಯಾಸಾತ್ಮಕ ಚಟುವಟಿಕೆ ಕುರಿತು ಇಬ್ಬರು ವಿದ್ಯಾರ್ಥಿಗಳ ತಂಡವು ತಮ್ಮ ಶಿಕ್ಷ ಕರ ಮಾರ್ಗದರ್ಶನದೊಂದಿಗೆ ವಿಜ್ಞಾನಿಗಳ ಮಾದರಿಯಲ್ಲಿ ವೈಜ್ಞಾನಿಕ ಯೋಜನಾ ವರದಿ ತಯಾರಿಸಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಹೊಸ ಪರಿಕಲ್ಪನೆಗಳು ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಪ್ರಚಲಿತ ಪ್ರಾಕೃತಿಕ ಹಾಗೂ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಇಂತಹ ಸಮ್ಮೇಳನಗಳು ಪೂರಕವಾಗಿವೆ ಎಂದರು.
ಸಮಾರೋಪ ಸಮಾರಂಭ ಉದ್ಘಾಟಿಸಿದ ನಗರದ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ವೈವಿಧ್ಯಮಯ ವಿಜ್ಞಾನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೇರೇಪಣೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸಂಸ್ಥೆಯು ಸಹಕರಿಸಲಿದೆ ಎಂದರು.
ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಮಕ್ಕಳ ವಿಜ್ಞಾನ ಸಮಾವೇಶದ ರೂಪುರೇμÉ ಕುರಿತು ವಿವರಿಸಿದರು. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2020 ಕ್ಕೆ ಆಯ್ಕೆಯಾದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಿರಿಯ ವಿಜ್ಞಾನಿಗಳಾದ ಕೆ.ಕೆ.ಮಹಿನ್ ಮತ್ತು ಸು.ಎಸ್.ರಘುವಂಶಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ.ವೆಂಕಟೇಶ್, ರೋಟರಿ ಸಂಸ್ಥೆಯ ಸದಸ್ಯೆ ಶಿಲ್ಪ ರೈ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಎಂ.ರೇವತಿ, ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಬಿಆರ್‍ಸಿ ನಳಿನಿ, ಇಸಿಓ ಎಂ.ಎಚ್.ಹರೀಶ್, ಬಿಆರ್ ಪಿ ಕೆ.ಯು.ರಂಜಿತ್ ಇತರರು ಇದ್ದರು.
No comments
Post a Comment