ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುವ ಘಟನೆಗಳ ಬಗ್ಗೆ ಆಡಳಿತ ವರ್ಗದ ಮೌನ ಕಳವಳಕಾರಿ : ಪಾಪ್ಯುಲರ್ ಫ್ರಂಟ್

No comments

ರಾಜ್ಯ ಸುದ್ದಿ (TOC) ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿಕೊಂಡು ರಾಜ್ಯದಲ್ಲಿ ಸರಣಿ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ಆಡಳಿತ ವರ್ಗದ ಮೌನವು ಕಳವಳಕಾರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ಸಂಘಪರಿವಾದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿ ಮುಸ್ಲಿಮ್ ಯುವಕರನ್ನು ಗುರಿಪಡಿಸುವ ಹಲವು ಘಟನೆಗಳು ಇತ್ತೀಚಿಗೆ ನಡೆದಿವೆ. ಬೆಳಗಾವಿಯ ಅರ್ಬಾಝ್ ಎಂಬ ಯುವಕನನ್ನು ಹತ್ಯೆಗೈದು, ರೈಲ್ವೇ ಹಳಿಯಲ್ಲಿ ಎಸೆಯಲಾಯಿತು. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಸುನೀಲ್ ಕುಮಾರ್ ಅವರು ಬಾಬಾ ಬುಡನ್ ಗಿರಿ ದರ್ಗಾ ಪರಿಸರದಲ್ಲಿರುವ ಸಮಾಧಿಗಳನ್ನು ಸ್ಥಳಾಂತರಿಸಬೇಕೆಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಅದೇ ರೀತಿ ಗದಗದಲ್ಲಿ ಸಂಘಪರಿವಾರದ ನಾಯಕನೊಬ್ಬ ಮಸ್ಜಿದ್ ಗಳನ್ನು ಒಡೆದು ಮಂದಿರ ನಿರ್ಮಿಸಬೇಕೆಂಬ ದ್ವೇಷ ಹರಡುವ ಹೇಳಿಕೆಯನ್ನು ನೀಡಿದ್ದಾನೆ. ಮಸೀದಿಗಳ ಧ್ವನಿ ವರ್ಧಕಗಳ ಬಗ್ಗೆಯೂ ವಿವಾದ ಸೃಷ್ಟಿಸಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುವ, ಅವರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ, ಮುಸ್ಲಿಮರನ್ನು ಖಳರನ್ನಾಗಿ ಚಿತ್ರಿಸಿ ಸಮಾಜದ ಸಾಮರಸ್ಯ ಕೆಡಿಸುವ ಇಂತಹ ಹತ್ತಾರು ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕವಾಗಿಬಿಟ್ಟಿವೆ. ಬಹುತೇಕ ಪ್ರಕರಣಗಳಲ್ಲಿ ಮುಸ್ಲಿಮ್ ಯುವಕರ ವಿರುದ್ಧವೇ ಪೊಲೀಸರು ಪೂರ್ವಾಗ್ರಹಪೀಡಿತರಾಗಿ ಕೇಸು ದಾಖಲಿಸುತ್ತಿರುವುದು ಕಂಡು ಬರುತ್ತಿದೆ.


ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿ ನಡೆಸುವ ಇಂತಹ ದುಷ್ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಪ್ರಕರಣ ದಾಖಲಿಸುವ ವೇಳೆ ಅನುಸರಿಸುತ್ತಿರುವ ತಾರತಮ್ಯ ಧೋರಣೆಯನ್ನು ನಿಲ್ಲಿಸಬೇಕು. ಮುಸ್ಲಿಮರನ್ನು ಭೀತಿಗೊಳಪಡಿಸುವ ಕೃತ್ಯದಲ್ಲಿ ಸಂಘಪರಿವಾರವು ತೊಡಗಿದ್ದು, ಇಂತಹ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಮತ್ತು ಮುಸ್ಲಿಮರ ಸುರಕ್ಷತೆಯನ್ನು ಸರ್ಕಾರ ಖಾತರಿಪಡಿಸಬೇಕೆಂದು ಯಾಸಿರ್ ಹಸನ್ ಆಗ್ರಹಿಸಿದ್ದಾರೆ. ಅದೇ ರೀತಿ ಸಂಘಪರಿವಾರದ ಮುಸ್ಲಿಮ್ ವಿರೋಧಿ ಷಡ್ಯಂತ್ರಗಳನ್ನು ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಎದುರಿಸಲು ಸಮುದಾಯವು ಮುಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.

No comments

Post a Comment