ಮಡಿಕೇರಿ ಸೆ.04(ಕರ್ನಾಟಕ ವಾರ್ತೆ):-ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕೋವಿಡ್ ಹಿನ್ನೆಲೆಯಲ್ಲಿ ಸೆ. 10 ರಂದು ನಡೆಯಲಿರುವ ಗೌರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಅರಿಶಿಣ ಗಣೇಶ ಅಭಿಯಾನ 2021 ರ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಮನವಿ ಮಾಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‍ಗಳ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಯನ್ನು ತಯಾರಿಸುವ ಕುರಿತು ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಲು ಮನವಿ ಮಾಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮನವಿ ಮಾಡಿದ್ದಾರೆ.
ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ಈ ಬಾರಿ ಗಣೇಶ ಹಬ್ಬದಲ್ಲಿ ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿಣ ಮತ್ತಿತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಅರಿಶಿಣ ಗಣೇಶ ಮೂರ್ತಿ ತಯಾರಿಸಲು ಕೋರಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ 10 ಲಕ್ಷ ದಷ್ಟು ಗಣೇಶ ಮೂರ್ತಿಗಳನ್ನು ನಾಗರಿಕರಿಂದ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆಯ ಗುರಿ ಹೊಂದಲಾಗಿದ್ದು, ಜಿಲ್ಲೆಯ ಜನತೆ ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಅರಿಶಿಣದಿಂದ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಅದನ್ನು ಪೂಜಿಸಿದ ನಂತರ ಮನೆಯಲ್ಲೇ ಬಕೇಟ್‍ನಲ್ಲಿ ವಿಸರ್ಜಿಸುವ ಕುರಿತು ಶಿಕ್ಷಕರು/ಉಪನ್ಯಾಸಕರು ಜನಜಾಗೃತಿ ಮೂಡಿಸಬೇಕು ಎಂದು ಜಿ.ಆರ್.ಗಣೇಶನ್ ಕೋರಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರು ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ಶಾಲಾಭಿವೃದ್ಧಿ ಸಮಿತಿಗಳ ವತಿಯಿಂದ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸುವ ಕುರಿತಾಗಿ ಆನ್ ಲೈನ್ ಮೂಲಕ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಡಿಪಿಐ ಎ.ಶ್ರೀಧರನ್ ತಿಳಿಸಿದ್ದಾರೆ.
ಅಪ್‍ಲೋಡ್ ಮಾಡಲು ಮನವಿ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರಿಕರು ತಮ್ಮ ಮನೆಯಲ್ಲಿ ತಯಾರಿಸಿದ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಯೊಂದಿಗೆ ತಮ್ಮ ಸೆಲ್ಫಿ ಫೆÇೀಟೋ ತೆಗೆದು ವೆಬ್‍ಸೈಟ್ http://www.turmericganesha.com/ಲಿಂಕ್ ಬಳಸಿ ಸೆಪ್ಟೆಂಬರ್, 10 ರೊಳಗೆ ಅಪ್‍ಲೋಡ್ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಅಭಿಯಾನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದ್ದಾರೆ.
ಈ ಪರಿಸರ ಜಾಗೃತಿ ಆಂದೋಲನಕ್ಕೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮನೆ ಮಂದಿ, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಗರಿಕರು ತಮ್ಮ ಮನೆಯಲ್ಲಿ ರಾಸಾಯನಿಕ ಬಣ್ಣ ಮುಕ್ತ ಹಾಗೂ ಮಾಲಿನ್ಯ ರಹಿತ ಅರಿಶಿಣ ಗಣೇಶ ಮೂರ್ತಿ ತಯಾರಿಸಿ ಪೂಜಿಸಿದ ನಂತರ ಮನೆಯಲ್ಲೇ ಬಕೇಟ್‍ನಲ್ಲಿ ವಿಸರ್ಜಿಸಿ ನಂತರ ಅರಿಶಿಣ ಮಿಶ್ರಿತ ನೀರನ್ನು ಗಿಡಗಳಿಗೆ ಹಾಕಬಹುದಾಗಿದೆ. ಪರಿಸರಕ್ಕೆ ಯಾವುದೇ ರೀತಿಯಲ್ಲೂ ಮಾಲಿನ್ಯವನ್ನುಂಟು ಮಾಡದಿರುವ ಈ ಅಭಿಯಾನವು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ. ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಕುರಿತು ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‍ಸೈಟ್ https://kspcb.karnataka.gov.in/node/66 ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಭಿಯಾನದ ಸಂಚಾಲಕರಾದ ಟಿ.ಜಿ.ಪ್ರೇಮಕುಮಾರ್ ಅವರನ್ನು (ಮೊಬೈಲ್ ನಂಬರ್: 94485 88352) ಹಾಗೂ ತಾಲ್ಲೂಕು ಶಿಕ್ಷಣ ಸಂಯೋಜಕರು, ಬಿ.ಆರ್.ಪಿ./ಕ್ಲಸ್ಟರ್ ಸಿ.ಆರ್.ಪಿ.ಗಳನ್ನು ಸಂಪರ್ಕಿಸಬಹುದು.
ಮಕ್ಕಳಿಂದ ಮೂರ್ತಿ ತಯಾರು: ಜಿಲ್ಲೆಯ ವಿವಿಧ ಶಾಲೆಗಳ ಇಕೋ ಕ್ಲಬ್ ವತಿಯಿಂದ ಮಕ್ಕಳು ಮನೆಯಲ್ಲೇ ತಯಾರಿಸಿರುವ ಅರಿಶಿಣ ಗಣೇಶಮೂರ್ತಿಗಳ ಚಿತ್ರಗಳು ಜನರ ಗಮನ ಸೆಳೆದಿವೆ. ಮಕ್ಕಳು ಈಗಾಗಲೇ ತಾವು ತಯಾರಿಸಿರುವ ಅರಿಶಿಣ ಗಣೇಶಮೂರ್ತಿಯ ಚಿತ್ರಗಳನ್ನು ಶಾಲೆಯ ಶಿಕ್ಷಕರಿಗೆ ಕಳುಹಿಸುತ್ತಿದ್ದಾರೆ.
No comments
Post a Comment