ಜಿಲ್ಲಾಡಳಿತ ವತಿಯಿಂದ ಒಲಂಪಿಕ್ಸ್‍ನಲ್ಲಿ ಭಾರತದ ಮಹಿಳೆಯರ ಹಾಕಿ ತಂಡದ ಸಹಾಯಕ ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಅಂಕಿತಾ ಸುರೇಶ್‍ಗೆ ಸನ್ಮಾನ

No comments

ಮಡಿಕೇರಿ ಸೆ.07(web@timesofcoorg):-ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್‍ನಲ್ಲಿ ಭಾರತದ ಮಹಿಳೆಯರ ಹಾಕಿ ತಂಡದ ಸಹಾಯಕ ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಬಿ.ಎಸ್.ಅಂಕಿತಾ ಸುರೇಶ್ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.    

  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅಂಕಿತಾ ಸುರೇಶ್ ಅವರಿಗೆ ಶಾಲು, ಮೈಸೂರು ಪೇಟ, ಪುಸ್ತಕ, ಪ್ರಶಸ್ತಿ ಪತ್ರ ಮತ್ತಿತರವನ್ನು ನೀಡಿ ಹೃದಯ ಪೂರ್ವಕವಾಗಿ ಸನ್ಮಾನಿಸಲಾಯಿತು.   

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ ಸುರೇಶ್ ಅವರು ಹಿರಿಯರ ಮಾರ್ಗದರ್ಶನ, ವ್ಯಾಸಾಂಗ ಮಾಡುವ ಸಂದರ್ಭದಲ್ಲಿ ಹಾಕಿ ತರಬೇತುದಾರರು, ಶಿಕ್ಷಕರು, ಕುಟುಂಬದವರು ಹೀಗೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಹಾಕಿ ಕ್ರಿಡಾ ತಂಡದ ಸಹಾಯಕ ತರಬೇತುದಾರರಾಗುವ ಹಂತಕ್ಕೆ ತಲುಪಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.

 ‘ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ಕ್ರೀಡಾಪಟುಗಳಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕೀಡಾಕೂಟಗಳಲ್ಲಿ ಪಾಲ್ಗೊಂಡು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಲಿದ್ದಾರೆ ಎಂದು ಅಂಕಿತಾ ಸುರೇಶ್ ಅವರು ಹೇಳಿದರು.’   

 ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಯಾವುದೇ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಆತ್ಮವಿಶ್ವಾಸ ತುಂಬುವಲ್ಲಿ ಕ್ರೀಡಾ ತರಬೇತುದಾರರ ಪಾತ್ರ ಅತಿ ಅಮೂಲ್ಯವಾಗಿದೆ ಎಂದು ನುಡಿದರು.  

ಅಂಕಿತಾ ಸುರೇಶ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಾಧನೆ ಮಾಡಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಶ್ಲಾಘಿಸಿದರು. 

 ‘ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಹೇಳಿದರು.’  

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಮಾತನಾಡಿ ಅಂಕಿತಾ ಸುರೇಶ್ ಅವರು ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿ, ಟೋಕಿಯೊ ಒಲಂಪಿಕ್ಸ್ ಮಹಿಳಾ ಹಾಕಿ ತಂಡವು ಉತ್ತಮ ಸಾಧನೆ ಮಾಡಿದ್ದು ಮರೆಯುವಂತಿಲ್ಲ ಎಂದರು.  

ಕೂಡಿಗೆ ಕ್ರೀಡಾ ಶಾಲೆಯ ಅಥ್ಲೇಟಿಕ್ ತರಬೇತುದಾರರಾದ ಆಂಥೋನಿ ಡಿಸೋಜಾ ಅವರು ಅಂಕಿತಾ ಸುರೇಶ ಅವರ ಕುರಿತು ಕಿರು ಪರಿಚಯ ಮಾಡಿದರು.

ಅಂಕಿತಾ ಅವರು ಮಡಿಕೇರಿ ತಾಲ್ಲೂಕಿನ ಬೊಯಿಕೇರಿ ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ನಗರದ ಜನರಲ್ ತಿಮ್ಮಯ್ಯ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದಾರೆ ಎಂದರು. 

ಮಡಿಕೇರಿಯಲ್ಲಿ ಪದವಿ ಪೂರ್ಣಗೊಳಿಸಿ, ಅಣ್ಣಮಲೈ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಎನ್‍ಐಎಸ್ ಹಾಕಿ ಡಿಪ್ಲೋಮಾ ಪಡೆದಿದ್ದಾರೆ ಎಂದರು. 

ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹಾಕಿ ತರಬೇತಿಯೊಡನೆ ಅಥ್ಲೆಟಿಕ್ ನಲ್ಲಿ ಪ್ರತಿಭೆ ತೊರಿದ್ದಾರೆ. ಮಂಗಳೂರು ಬೆಂಗಳೂರು ಮತ್ತು ಉತ್ತರ ಕನ್ನಡಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆಳ್ಳಿ ಪದಕ ಪಡೆದಿದ್ದಾರೆ.

 ಮಂಗಳೂರು ವಿವಿ ಪ್ರತಿನಿಧಿಸಿ, ಮಧ್ಯಪ್ರದೇಶದಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ ನಡೆದ ದಕ್ಷಿಣ ವಲಯ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದಾರೆ ಎಂದು ಅವರು ವಿವರಿಸಿದರು. ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡೂ, ಅಂಕಿತಾ ಸುರೇಶ್ ಕುಟುಂಬದವರು, ಇತರರು ಇದ್ದರು.     

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಸ್ವಾಗತಿಸಿದರು, ಕೂಡಿಗೆ ಕ್ರೀಡಾ ಶಾಲೆಯ ಪ್ರಾಂಶುಪಾಲರಾದ ದೇವಕುಮಾರ್ ನಿರೂಪಿಸಿದರು, ಆಂಥೋನಿ ಡಿಸೋಜಾ ಪ್ರಾರ್ಥಿಸಿದರು, ಮುರುಳಿ ವಂದಿಸಿದರು.

No comments

Post a Comment