ಯಾರ ಮಡಿಲಿಗೆ ನಾಪೋಕ್ಲು ಗ್ರಾಮ ಪಂಚಾಯಿತಿ ಆಡಳಿತ ಚುಕ್ಕಾಣಿ?
ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋರು ಯಾರು, ಸೋಲೂರು ಯಾರು ?
ವಿಶೇಷ ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ಗ್ರಾಮ ಪಂಚಾಯಿತಿ ಸುಮಾರು 12000ಜನಸಂಖ್ಯೆ ಹಾಗೂ 23ಸದಸ್ಯ ಬಲ ಹೊಂದಿರುವ ಕೊಡಗು ಜಿಲ್ಲೆಗೆ ಎರಡನೇ ಅತೀ ದೊಡ್ಡ ಹಾಗೂ ಮಡಿಕೇರಿ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಸದಸ್ಯ ಬಲ ಹೊಂದಿರುವ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೀಗ ಚುನಾವಣಾ ದಿನಾಂಕ ಘೋಷಣೆ ಯಾಗದಿದ್ದರೂ
ಮೀಸಲಾತಿ ಪ್ರಕಟವಾಗಿದ್ದು ಪ್ರಕಟವಾದ ಮೀಸಲಾತಿ ಈ ಕೆಳಕಂಡಂತಿದೆ
ಸಾಮಾನ್ಯ 7 ಸ್ಥಾನ
ಸಾಮಾನ್ಯ ಮಹಿಳೆ 6 "
ಹಿಂದುಳಿದ ವರ್ಗ (ಅ) 3. "
ಹಿಂದುಳಿದ ವರ್ಗ (ಬ) 1. "
ಹಿಂದುಳಿದ ವರ್ಗ (ಅ)ಮಹಿಳೆ 3
ಪರಿಶಿಷ್ಟ ಪಂಗಡ ಮಹಿಳೆ 1
ಪರಿಶಿಷ್ಟ ಜಾತಿ ಮಹಿಳೆ. 1
ಹಿಂದುಳಿದ ವರ್ಗ (ಬ) ಮಹಿಳೆ 1
ಒಟ್ಟು 23
ಈ ಅವಕಾಶದಲ್ಲಿ ಯಾರು ಯಾರು ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೋ ಯಾವ ಅಭ್ಯರ್ಥಿ ವಿಜಯದ ಮಾಲೆ ತಮ್ಮದಾಗಿಸಿಕೊಳ್ಳುತ್ತಾರೆ ಎಂಬುವುದೇ ಕುತೂಹಲ.
ನಾಪೋಕ್ಲು ವ್ಯಾಪ್ತಿಯಲ್ಲಿ ಇದೀಗ ಎಲ್ಲಿ ನೋಡಿದರೂ ಚುನಾವಣೆಯ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಹಲವು ರೀತಿಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿ ಮತ ಬೇಟೆ ಪ್ರಾರಂಭಿಸಿದ್ದಾರೆ .
ಎಲ್ಲಾ ಹಬ್ಬಗಳು ಆಯಾ ಜಾತಿ ಧರ್ಮ ಪಂಗಡಕ್ಕೆ ಸೀಮಿತವಾದರೆ ಚುನಾವಣೆ ಎಂದರೆ ಬಹುತೇಕರಿಗೆ ಇವೆಲ್ಲವನ್ನೂ ಮೀರಿಸುವ ಹಬ್ಬವಾಗಿದೆ.
ಕಾರಣ ಹಬ್ಬಗಳು 1/2 ದಿನಗಳಿಗೆ ಸೀಮಿತವಾದರೆ
ಚುನಾವಣೆ ಎಂಬ ಹಬ್ಬ ಹಣ ಹೆಂಡ ಪರಸ್ಪರ ವಾಕ್ಸಮರ ಎಲ್ಲವನ್ನು ಉಳ್ಕೊಂಡ್ಳಂತ ತಿಂಗಳುಗಟ್ಟಲೆ ನಡೆಯುವ
ಹಾಗೂ ಕೆಲವರ ಜೇಬು ತುಂಬಿಸಿಕೊಳ್ಳುವ ಹಬ್ಬವಾಗಿ ಆಚರಿಸಿಕೊಳ್ಳುತ್ತಾರೆ.
ನಾಪೋಕ್ಲು ವಿಗೆ ಸಂಬಂಧಿಸಿದ ಹಾಗೆ ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭ ಕಾಣುವ ಪೈಪೋಟಿ
ಪ್ರತಿಷ್ಠೆ ಉಳಿದ ಯಾವುದೇ ಚುನಾವಣೆಯಲ್ಲಿ ಕಾಣಲು ಸಾದ್ಯವಿಲ್ಲ.
ಮತ್ತೊಂದು ಕಡೆ ಜನಸಾಮಾನ್ಯರು ನಮ್ಮ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು ಆಗ್ತಾರೆ ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗುತ್ತಾರೆ
ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೆ.
ಕೆಲವರು ಕೆಲವು ಮಾಜಿ ಸದಸ್ಯರ ಪರ ಬ್ಯಾಟ್ ಬೀಸುತ್ತಿದ್ದರೆ ಬಹುತೇಕರು ಮಾಜಿಗಳ ವಿರುದ್ಧವಾಗಿಯೇ ಬಾಲ್ ಎಸೆಯುತ್ತಿದ್ದಾರೆ.
ಕೆಲವು ಮಾಜಿ ಸದಸ್ಯರನನ್ನು ಕ್ಷೇತ್ರದ ಜನರಿಗೆ ಜನಪ್ರತಿನಿಧಿ ಎಂಬುದೇ ಮರೆತುಹೋಗಿದೆ ಕಾರಣ ಕಳೆದ ಚುನಾವಣೆ ಮುಗಿದ ಬಳಿಕ ಕಾಣೆಯಾದವರು
ಇನ್ನು ಪತ್ತೆಯಾಗಿಲ್ಲ.
ಅದಲ್ಲದೆ ಚುನಾವಣೆ ಸಮೀಪಿಸುತ್ತಿರುವಾಗ ಅಸಮಾಧಾನ ಪಕ್ಷಾಂತರ ಸಹಜ ಪ್ರಕ್ರಿಯೆ .
ಕಾರಣ ಗ್ರಾಮ ಪಂಚಾಯತಿ ಚುನಾವಣೆ ಪಕ್ಷಾತೀತವಾದರೂ ಚುನಾವಣೆ ನಡೆಯುವುದಂತೂ ಪಕ್ಷಗಳ ಕರಿನೆರಳಿನಲ್ಲಿ ಮತ್ತು ಸ್ಪರ್ಧಿಸುವುದು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಕಳೆದ ಸಲ 23 ಸದಸ್ಯಬಲದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ 12 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದರೆ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 4 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಮಧ್ಯದ ಹೊಳೆ ಹರಿಸಿ ಹಣಬಲ ತೋಳ್ಬಲ ದಿಂದ ಗೆಲುವು ಪಡೆದುಕೊಂಡಿದ್ದಾರೆ ಎಂದು ಪರಾಜಿತ ಅಭ್ಯರ್ಥಿಗಳು
ಹಾಗೂ ಅವರ ಬೆಂಬಲಿಗರು ದೂರಿದರು.
ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರ ಸದಸ್ಯ ಬಲ 23 ಇದ್ದರು ಮತಗಳು 22ಕ್ಕೆ ಸೀಮಿತವಾಗಿತ್ತು.
ಕಾರಣ ಕಾಂಗ್ರೆಸ್ ಬೆಂಬಲಿತ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಇಸ್ಮಾಯಿಲ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಜಗದೀಶ್ ಕಣಕ್ಕಿಳಿದಿದ್ದರು.
ತೀವ್ರ ಕುತೂಹಲದಿಂದ ಕೂಡಿದ್ದ ಚುನಾವಣೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ತಲಾ 11 ಬೆಂಬಲಿತ ಸದಸ್ಯರ ಮತದ ಸಮಬಲದಲ್ಲಿತ್ತು .
ಆದರೆ ನಿರೀಕ್ಷೆ ಕುತೂಹಲಕ್ಕೆ ತಣ್ಣೀರೆರಚಿದ ಮೈತ್ರಿ ಅಭ್ಯರ್ಥಿಯ ಪರ ಸದಸ್ಯರು ಅಡ್ಡ ಮತದಾನ ಮಾಡುವ ಮುಖಾಂತರ ಕಾಂಗ್ರೆಸ್ ಅಭ್ಯರ್ಥಿ ಕೆ ಎ ಇಸ್ಮಾಯಿಲ್ ರವರು 12/ 10 ಮತಗಳ ಅಂತರದಲ್ಲಿ ಗೆದ್ದು ಅಧ್ಯಕ್ಷ ಸ್ಥಾನ ಅಲಂಕರಿಸಿದರು.
ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾಬಾ ತಿಮ್ಮಯ್ಯ ಕಣಕ್ಕಿಳಿದಿದ್ದರೆ ಮೈತ್ರಿ ಅಭ್ಯರ್ಥಿಯಾಗಿ ಮಹಮ್ಮದ್ ಕುರೇಶಿ ಕಣದಲ್ಲಿದ್ದರು.
ಇದು ಕೂಡ ಕುತೂಹಲದಿಂದ ಕೂಡಿತ್ತು ಆದರೆ ಉಪಾಧ್ಯಕ್ಷರ ಚುನಾವಣೆಯಲ್ಲೂ ಕುತೂಹಲಕ್ಕೆ ತಣ್ಣೀರೆರಚಿದ ಮತದಾರ ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ ಅಡ್ಡಮತದಾನ ಮಾಡುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾಬಾ ತಿಮ್ಮಯ್ಯ 9/12 ಮತದಿಂದ ಗೆದ್ದು ಬೀಗಿದರು.
ಈ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜನ ಜನ ಕಾಂಚಾಣ ಕೆಲಸ ಮಾಡಿದೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಇದು ನಗ್ನ ಸತ್ಯ ಕೂಡ ಹೌದು.
ತದನಂತರ ಅಡ್ಡಮತದಾನ ಸಂಬಂಧ ಆಣೆ ಪ್ರಮಾಣ ಎಷ್ಟೇ ನಡೆದರು ಈ ಆರೋಪಕ್ಕೆ ಕಾರಣಕರ್ತರಾದ ಅಡ್ಡಮತದಾನ ಮಾಡಿದ ವಿಲನ್ ಅಂತೂ ಇದುವರೆಗೂ ಪತ್ತೆಯಾಗಲೇ ಇಲ್ಲ.
ತದನಂತರ ರಾಜಕೀಯ ಚದುರಂಗದಾಟದಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯ ಕಾಂಗ್ರೆಸ್ ಸೇರ್ಪಡೆಯಾದರೆ
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಶಾಲಿಯಾಗಿದ್ದ ಒಂದು ಸ್ಥಾನದ ಕುತೂಹಲ ಕೆರಳಿಸಿದ್ದ ಮರುಚುನಾವಣೆಯ ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆದ್ದು ಬೀಗಿದರು.
ಇದೀಗ ಐದು ವರ್ಷ ಕಳೆದು ಮತ್ತೆ ಚುನಾವಣೆಯ ಅಭ್ಯರ್ಥಿಗಳ ಮೀಸಲಾತಿ ಪ್ರಕಟವಾಗಿದ್ದು ಹಲವು ಸ್ಥಳಗಳಲ್ಲಿ ಮೀಸಲಾತಿ ಬದಲಾವಣೆಯಾಗಿದೆ.
ಕೆಲವು ಮಾಜಿ ಸದಸ್ಯರು ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಯಾದರೆ ಗೆಲುವು ಸುಲಭವೋ ಆ ಪಕ್ಷಕ್ಕೆ ಪಕ್ಷಾಂತರದ ಮುನ್ಸೂಚನೆ ನೀಡಿದ್ದರು.
ಕಾಂಗ್ರೆಸ್ ತನ್ನ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದೆ
ತೆನೆಹೊತ್ತ ಮಹಿಳೆ ಪಕ್ಷ ತನ್ನ ಸದಸ್ಯ ಬಲ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.
ಅದೇ ಹಾದಿಯಲ್ಲಿ ಈಗಾಗಲೇ ಕಳೆದ ಬಾರಿಯ ಜೆಡಿಎಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಯಾಗಿರುತ್ತಾರೆ.
ಮತ್ತೊಂದು ಕಡೆ ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಅಂತ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕೂಡ ಟಿಕೆಟಿಗಾಗಿ ಪೈಪೋಟಿ ನಡೆಸುತ್ತಿದೆ.
ಮತ್ತೊಂದು ಕಡೆ ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿ ಆದರೆ ಗೆಲುವು ಕಷ್ಟವೋ ಅಂತ ಕಡೆಗಳಲ್ಲಿ ಅಭ್ಯರ್ಥಿಯೇ ಸಿಗದೆ ಪಕ್ಷದ ಮುಖಂಡರು ಪರದಾಡುತ್ತಿದ್ದಾರೆ.
ಮತ್ತೊಂದು ಕಡೆ ಕೆಲವರು ಟಿಕೇಟಿಗಾಗಿ ನಾಯಕರುಗಳ ದುಂಬಾಲು ಬಿದ್ದಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಲು ಸಾಧ್ಯವಾಗದೆ ಅದೆಷ್ಟು ಜನ ಬಂಡಾಯ ವೇಳುತ್ತಾರೋ ಎಂಬುದು ಕೊನೆಯ ಗಳಿಗೆಯಲ್ಲಿ ಸ್ಪಷ್ಟವಾಗಲಿದೆ.
ಕಳೆದ ಬಾರಿಯ ಕೆಲ ಸದಸ್ಯರು ಕೆಲಸಕಾರ್ಯಗಳಲ್ಲಿ ಪಕ್ಷಪಾತ ಮಾಡಿದ್ದು ಅವರವರ ಬೆಂಬಲಿಗರಿಗೆ ಅವಶ್ಯಕತೆ ಇಲ್ಲದಿದ್ದರೂ ಕೆಲವು ಕಾಮಗಾರಿಗಳನ್ನು ಮಾಡಿಕೊಂಡಿರುವುದಾಗಿ ಕೆಲವರು ದೂರಿದ್ದರೆ
ಅನುಕೂಲ ಪಡೆದುಕೊಂಡಂತಹ ಕೆಲವರು ಸದಸ್ಯರ ಪರವಾಗಿ ಉತ್ತಮ ಕೆಲಸ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಮತ್ತೆ ಕೆಲವರು ಕೆಲ ಸದಸ್ಯರುಗಳು ಮತವನ್ನು ಮನಗಂಡು ಕೆಲಸಕಾರ್ಯಗಳು ಮಾಡಿದ್ದು ಕೆಲವು ಕಡೆ ಕುಡಿಯಲು ಒಂದು ಹನಿ ನೀರು ಇಲ್ಲದೆ ಪರದಾಡುತ್ತಿದ್ದರು ಅಂತಹ ಕಡೆ ಗಮನ ಹರಿಸದೆ ನೀರಿನ ಸೌಲಭ್ಯ ಇರುವ ಅವರವರ ಬೆಂಬಲಿಗರಿಗೆ ಓಟ್ ಬ್ಯಾಂಕ್ ಗೋಸ್ಕರ ತೆರೆದ ಬಾವಿಗಳು ಮಾಡಿಕೊಟ್ಟಿರುದಾಗಿ ಆರೋಪ ಕೇಳಿಬರುತ್ತಿದೆ.
ಜನಪ್ರತಿನಿಧಿಗಳು ಇನ್ನಾದರೂ ಪಕ್ಷಪಾತ ಮಾಡದೆ ಎಲ್ಲಿ ಏನೇನು ಅವಶ್ಯಕತೆ ಇದೆಯೋ ಅದನ್ನು ಮನಗೊಂಡು ಜನಪ್ರತಿನಿಧಿ ಎಂದು ತಿಳಿದುಕೊಂಡು
ಹಾಗೂ ಗೆಲುವಿನ ಬಳಿಕ ಪಕ್ಷಾಂತರ ಮಾಡಿ ಮತದಾರರನ್ನು ವಂಚಿಸದೆ ಮುನ್ನಡೆಯಲಿ ಎಂದು ಸಜ್ಜನರ ಅಭಿಪ್ರಾಯ. ಏನೇ ಆದರೂ ಒಬ್ಬ ಜನಪ್ರತಿನಿಧಿ ಎಲ್ಲರನ್ನೂ ತೃಪ್ತಿಪಡಿಸಲು ಅಂತೂ ಸಾಧ್ಯವಿಲ್ಲದ ಕೆಲಸ ಎಂದು ನಾವುಗಳು ಮನಗಾಣಬೇಕಾಗಿದೆ.
ಮತ್ತೊಂದು ಕಡೆ ಚೆರಿಯ ಪರಂಬು ಕಲ್ಲು ಮೊಟ್ಟೆ ಗ್ರಾಮ ಸ್ಥಳೀಯ ಜನಪ್ರತಿನಿಧಿ ಅಯ್ಕೆ ಆಗದ ಕಾರಣ ಅಭಿವೃದ್ಧಿ ಕಾಣದೆ ಹಿಂದುಳಿದಿದೆ. ಈ ವ್ಯಾಪ್ತಿಯಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ಮತದಾರರಿದ್ದು ಮೂರು ಸದಸ್ಯರನ್ನು ಆಯ್ಕೆಮಾಡುವ ಸಾಮರ್ಥ್ಯವಿದ್ದರೂ ಈವರೆಗೂ ಈ ವ್ಯಾಪ್ತಿಗೆ ಸ್ಥಳೀಯ ಗ್ರಾಮದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಆಗಲಿಲ್ಲ.
ಕಾರಣ ಅಧಿಕಾರಿಗಳ ನಿರ್ಲಕ್ಷದಿಂದ ಈ ವ್ಯಾಪ್ತಿಯ ಮತಗಳು 3 ಬೂತ್ ಗಳಿಗೆ ಹರಿದು ಹಂಚಿಹೋಗಿದೆ. ಆದರಿಂದ ಇಲ್ಲಿನ ನಿವಾಸಿಗಳು ಈ ವ್ಯಾಪ್ತಿಯಲ್ಲಿ ಒಂದು ಬೂತ್ ಸ್ಥಾಪನೆ ಮಾಡಿ ಈ ಭಾಗದ ಎಲ್ಲಾ ಮತಗಳನ್ನು ಕ್ರೋಡೀಕರಿಸಿ ಸದರಿ ಗ್ರಾಮದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅನು ಮಾಡಿಕೊಡಬೇಕಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು ಯಾರು ಸ್ಪಂದಿಸಲಿಲ್ಲ ಆದ್ದರಿಂದ ಸ್ಥಳೀಯ ಜನಪ್ರತಿನಿಧಿ ಎಂಬುವುದು ಕನಸಾಗಿಃ ಉಳಿದಿದೆ.
ಕೆಲವರು ಊರಲ್ಲಿ ಮೆರೆದಾಡಲು ಎಂದು ಜನಪ್ರತಿಯಾಗಿ
ಆಯ್ಕೆಯಾದಂತೆ ವರ್ತಿಸುತ್ತಾರೆ.
ಮತ್ತೆ ಕೆಲವರು ಹಣಬಲದಿಂದ ಗೆಲುವು ಸಾಧಿಸುತ್ತಾರೆ.
ಕೆಲವರು ಹಣಬಲದಿಂದ ಗೆಲುವು ಸಾಧಿಸಿದ್ದರು. ವಿದ್ಯಾಭ್ಯಾಸದ ಕೊರತೆಯಿಂದ ಗ್ರಾಮ ಅಭಿವೃದ್ಧಿಪಡಿಸುವುದು ಕಷ್ಟವಾದರೆ
ಕೆಲವರಿಂದ ಅನೈತಿಕತೆ ತಾಂಡವವಾಡುತ್ತಿದೆ.
ಮತ್ತೆ ಕೆಲವರು ಭ್ರಷ್ಟಾಚಾರ ಮಾಡಲೆಂದೇ ಆಯ್ಕೆ ಮಾಡಿ ಕಳುಹಿಸಿದ ಹಾಗೆ ಕೆಲಸ ಮಾಡುತ್ತಾರೆ.
ಮತ್ತೆ ಕೆಲ ಮತದಾರರು ಕೊನೆಯ ಕ್ಷಣದ ಮದ್ಯದ ಹೊಳೆಯಲ್ಲಿ ಈಜಾಡುತ್ತಾ ಮತ ಹಾಕುವುದು ಹಾಸ್ಯಾಸ್ಪದ.
ಏನೇ ಆದರೂ ಚುನಾವಣಾ ಸಂದರ್ಭದಲ್ಲಿ ಹಣದ ಆಸೆಗೋ ಮದ್ಯದ ಆಸೆಗೂ ಆಮಿಷಕ್ಕೋ ಬಲಿಯಾಗಿ ಭ್ರಷ್ಟರನ್ನು ಅವಿದ್ಯಾವಂತರನ್ನು ಆಯ್ಕೆ ಮಾಡಿದರೆ
ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅದರ ಪರಿಣಾಮ ಮತದಾರ ಪ್ರಭು ಅನುಭವಿಸಲೇಬೇಕು.
ಆದ್ದರಿಂದ ಮತದಾರರೂ ಎಚ್ಚೆತ್ತುಕೊಂಡು ಯಾವುದೇ ಹಣ ಆಮಿಷಗಳಿಗೆ ಬಲಿಯಾಗದೆ ಭ್ರಷ್ಟರನ್ನು ತಿರಸ್ಕರಿಸಿ ಉತ್ತಮ ವಿದ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದ ಮಾತ್ರ ಇದಕ್ಕೆಲ್ಲ ಪರಿಹಾರ .
ನಾಪೋಕ್ಲು ಪಟ್ಟಣವು ಮುಂದೆ ತಾಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣಗಳಿದ್ದು ಆ ನಿಟ್ಟಿನಲ್ಲಿ ತುಂಬಾ ವ್ಯವಸ್ಥಿತವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯುವನೇತಾರರು ಆಯ್ಕೆಯಾಗಬೇಕಾಗಿದೆ.
ಸದ್ಯ ನಾಪೋಕ್ಲುವಿನಲ್ಲಿ ಹೋಬಳಿ ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳು ಸುಸಜ್ಜಿತವಾಗಿ ಇಲ್ಲದೇ ಇರುವುದು ಹಾಗೂ ಈ ಸಂಬಂಧ ಆಡಳಿತ ಗಮನಹರಿಸದಿರುವುದು ದುರಂತವೇ ಸರಿ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಮುನ್ನೋಟ ಕಲ್ಪನೆ ಉಳ್ಳ ನಿಸ್ವಾರ್ಥ ಸೇವಕರು ಆಯ್ಕೆಯಾಗಲಿ ಎಂಬುದೇ ಸಜ್ಜನರ ಆಶಯ.

No comments
Post a Comment