ಅಮೇರಿಕಾದ ಅಕ್ಕ ಸಂಸ್ಥೆ ವತಿಯಿಂದ ಕಿಟ್ ವಿತರಣೆ

No comments
ಮಡಿಕೇರಿ (Times Of Coorg) : ಅಮೇರಿಕಾದ ಅಕ್ಕ ಸಂಸ್ಥೆ ವತಿಯಿಂದ ಮಕ್ಕಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡದ ಟೈಲ್ಸ್, ಫ್ಲೋರಿಂಗ್ ಕೆಲಸಕ್ಕೆಂದು ಬೆಂಗಳೂರಿನಿಂದ ಬಂದು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಎರಡು ಕುಟುಂಬಕ್ಕೆ ಆಹಾರ ಕಿಟ್ ನೀಡಲಾಯಿತು. ಮಾಧ್ಯಮ ಸ್ಪಂದನದ ಬಗ್ಗೆ ಮಾಹಿತಿ ಅರಿತ ಮಕ್ಕಂದೂರಿನ ಕೋಡಿಯಡ್ಕ ರಮೇಶ್ ಅವರು ಮಾಧ್ಯಮ ತಂಡದ ಸದಸ್ಯ ಕುಡೆಕಲ್ ಸಂತೋಷ್, ವಿಶ್ವ ಕುಂಬೂರು ಗಮನಕ್ಕೆ ತಂದಿದ್ದರು.  ಮಕ್ಕಂದೂರು ಶಾಲೆಯಲ್ಲೇ ತಂಗಿರುವ ರಾಮಸ್ವಾಮಿ ಹಾಗೂ ಧನುರಾಜ್ ಕುಟುಂಬಗಳಿಗೆ ಮಕ್ಕಂದೂರು ಗ್ರಾ.ಪಂ.ಸದಸ್ಯ, ಸುವರ್ಣ ಕಾಫಿ ಲಿಂಕ್ಸ್ ನ ಮಾಲೀಕ ಬಿ.ಎನ್. ರಮೇಶ್ ಹದಿನೈದು ದಿನಗಳಿಗಾಗುವಷ್ಟು ಆಹಾರ ಕಿಟ್ ಒದಗಿಸಿ ನೆರವಾದರು. 

ದಾರಿ ತಪ್ಪಿ ಮೂಡಿಗೆರೆಗೆ ಹೋಗಬೇಕಾದವರು ಮಡಿಕೇರಿಗೆ ಬಂದು ದಿಕ್ಕು ತೋಚದೆ ಮಕ್ಕಂದೂರಿನ ಮಾಜಿ ಸೈನಿಕರೋರ್ವರ ಮನೆಯ ಅಂಗಳದಲ್ಲಿ ಆಶ್ರಯ ಪಡೆದಿರುವ ಅಸ್ಸಾಂ ಮೂಲದ ಕುಟುಂಬಕ್ಕೆ ಆಹಾರ ಕಿಟ್ ಒದಗಿಸಲಾಯಿತು.
ಮೂಡಿಗೆರೆಗೆ ಎಂದು ಬಸ್ ಹತ್ತಿದವರು ಭಾಷಾ ಸಮಸ್ಯೆ ಯಿಂದಾಗಿ ಮಡಿಕೇರಿಯಲ್ಲಿ ಬಂದಿಳಿದು, ಕಾಲ್ನಡಿಗೆಯಲ್ಲೇ ಮಕ್ಕಂದೂರು ತಲಪಿದವರಿಗೆ ಮಾಜಿ ಸೈನಿಕ ಬಿ.ಎಸ್. ವಿಜಯ ಅವರು ತಮ್ಮ ಮನೆಯ ಅಂಗಳದ ಒಂದು ಬದಿಯಲ್ಲಿ ಆಶ್ರಯ ನೀಡಿದ್ದಾರೆ. ತಾಜರಲಿ, ಮೊಯ್ದುಲ್ ಇಸ್ಲಾಂ, ಫುಲ್ಕತುನ್ ಹಾಗೂ ಮೂವರು ಮಕ್ಕಳಿರುವ ಕುಟುಂಬಕ್ಕೆ ಅಕ್ಕಿ,ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.

ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಬೋರ್ ವೆಲ್ ಪೈಸಾರಿ ಬಳಿ ನೆಲೆಸಿರುವ ಒಂಟಿ ವೃದ್ಧೆ ಮಹಿಳೆ ಶಾರದಾ ಪ್ರಭಾಕರ್ ಅವರಿಗೂ ದಿನಸಿ ಸಾಮಗ್ರಿ ನೀಡಲಾಯಿತು. ಬಿಪಿಎಲ್ ಕಾರ್ಡ್ ಹೊಂದಿರುವ ವೃದ್ಧೆಗೆ ಆಹಾರ ಇಲಾಖೆಯಿಂದ ಅಕ್ಕಿ ಸಿಕ್ಕಿದೆಯಾದರೂ ದಿನಸಿ ಸಾಮಗ್ರಿ ನೀಡಲಾಯಿತು.
ಈ ಎರಡೂ ಪ್ರಕರಣಗಳ ಬಗ್ಗೆ ಬಿ.ಎನ್. ರಮೇಶ್ ಅವರೇ ಮಾಧ್ಯಮ ಸ್ಪಂದನ ತಂಡದ ಗಮನಕ್ಕೆ ತಂದು, ಅವರೇ ಆಹಾರ ಕಿಟ್ ಒದಗಿಸಿದ್ದಾರೆ. ಕಿಟ್ ವಿತರಣೆ ಸಂದರ್ಭದಲ್ಲಿ ಮಾಧ್ಯಮ ಸ್ಪಂದನ ತಂಡದ ಕುಡೆಕಲ್ ಸಂತೋಷ್, ದಾನಿ ಬಿ.ಎನ್. ರಮೇಶ್, ನೀಲ್ ರಮೇಶ್ ಇದ್ದರು.

No comments

Post a Comment