Showing posts with label ಸುಳ್ಯ. Show all posts
Showing posts with label ಸುಳ್ಯ. Show all posts

ಸೋಮವಾರಪೇಟೆ - ಕುಶಾಲನಗರ ಹೆದ್ದಾರಿಯ ಯಡವನಾಡು ಬಳಿಯ ಅರಣ್ಯದ ದೇವಸ್ಥಾನಕ್ಕೆ ಕಾರು ಡಿಕ್ಕಿ


ಸೋಮವಾರಪೇಟೆ (Times Of Coorg) : ಸೋಮವಾರಪೇಟೆ - ಕುಶಾಲನಗರ ರಾಜ್ಯ ಹೆದ್ದಾರಿಯ ಯಡವನಾಡು ಸಮೀಪವಿರುವ ದೇವಸ್ಥಾನವೊಂದರ ಬಳಿ ಕಾರು ಡಿಕ್ಕಿಯಾದ ಘಟನೆ ಇಂದು ಭಾನುವಾರ ನಡೆದಿದೆ‌.

ಸೋಮವಾರಪೇಟೆ ಸಮೀಪದ ಬಜೆಗುಂಡಿಯ ವ್ಯಕ್ತಿಯೊಬ್ಬರ KA 12 B 7469 ಸಂಖ್ಯೆಯ ಸ್ವಿಫ್ಟ್ ಕಾರ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇವಸ್ಥಾನದ ಮೇಲ್ಛಾಣಿ ಜಖಂಗೊಂಡಿದೆ.





ಕೋವಿಡ್-19 ನಿಯಂತ್ರಣ ಮತ್ತು ಮಳೆ ಹಾನಿ ಬಗ್ಗೆ ಮಾಹಿತಿ ಪಡೆದ ಸಿಎಂ


       ಮಡಿಕೇರಿ (Times Of Coorg):-ರಾಜ್ಯಾದ್ಯಂತ ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಮಾಡಲು ಮತ್ತು ಕೋವಿಡ್ ಮರಣ ಪ್ರಕರಣಗಳ ಪ್ರಮಾಣ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.   

      ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಹಾಗೂ ಮಳೆ ಹಾನಿ ಸಂಬಂಧ ಸಭೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದರು.

      ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ ಜಿಲ್ಲಾಡಳಿತ ಸೋಂಕು ನಿಯಂತ್ರಿಸುವ ಸಲುವಾಗಿ ಹಗಲಿರುಳು ಶ್ರಮ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯ ವೈಖರಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

      ಈಗಾಗಲೇ ಅನ್‍ಲಾಕ್ ಪ್ರಕ್ರಿಯೆಯಿಂದ ಆರ್ಥಿಕ ಚಟುವಟಿಕೆ ಆರಂಭಿಸಲಾಗಿದೆ. ಕೋವಿಡ್-19 ಜೊತೆಗೆ ಬದುಕು ನಡೆಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಬೇಕು. ಕೋವಿಡ್-19 ನಿಂದ ಉಂಟಾಗುತ್ತಿರುವ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಶ್ರಮವಹಿಸಿ ಎಂದು ಮುಖ್ಯಮಂತ್ರಿ ಅವರು ರಾಜ್ಯದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಅಲ್ಲದೇ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಪ್ರವಾಹ ನಿರ್ವಹಣೆ ಸಂಬಂಧ ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸಿ. ಮಳೆಯಿಂದ ಮನೆ, ಜೀವ ಹಾನಿ ಸಂಭವಿಸಿದ್ದಲ್ಲಿ ನಿಯಮಾನುಸಾರ ಪರಿಹಾರ ನೀಡಿ. ಈಗಾಗಲೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಹಣ ಬಿಡುಗಡೆ ಮಾಡಲಾಗಿದ್ದು, ಪರಿಹಾರ, ರಸ್ತೆ ಸೇತುವೆ ಮುಂತಾದವುಗಳ ದುರಸ್ತಿ ಮತ್ತು ಮರುನಿರ್ಮಾಣ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದರು.

      ಈ ಸಂದರ್ಭ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರು ಪ್ರತಿ ಜಿಲ್ಲೆಯಲ್ಲಿಯು ಕೋವಿಡ್-19 ಪರೀಕ್ಷೆ ಹೆಚ್ಚಿಸಬೇಕು. ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು. 

      ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸುವ ಸಲುವಾಗಿ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಶೇ.11 ರಷ್ಟಿದೆ. ಶೇ. 1.2 ರಷ್ಟು ಮರಣ ಪ್ರಮಾಣವಿದೆ ಎಂದು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು. 

     ಜಿಲ್ಲೆಯಲ್ಲಿ 1 ದಿನಕ್ಕೆ 450 ಸಂಖ್ಯೆಯಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಸಂಬಂಧ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. 56 ಹಾಸಿಗೆಯ ಐಸಿಯುವನ್ನು ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ಒದಗಿಸಿದರು.

      ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಹಾಗೆಯೇ ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಿಂದಲೂ ಸಹ ಕೋವಿಡ್-19 ಚಿಕಿತ್ಸೆಗಾಗಿ ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಜಿಲ್ಲೆಗೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.

     ಮಳೆ ಹಾನಿ ಸಂಬಂಧ ಮಾಹಿತಿ ನೀಡಿದ ಅನೀಸ್ ಕಣ್ಮಣಿ ಜಾಯ್ ಅವರು, ಜಿಲ್ಲೆಯ 3 ತಾಲೂಕುಗಳ 115 ಗ್ರಾಮಗಳು ಮನೆಯಿಂದ ಹಾನಿಗೊಳಗಾಗಿದೆ. ರಸ್ತೆ, ಸೇತುವೆ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಎಂಜಿನಿಯರಿಂಗ್ ವಿಭಾಗದಿಂದ 600 ಕೋಟಿ ರೂ. ಮೂಲ ಸೌಕರ್ಯ ಹಾನಿ ಅಂದಾಜಿಸಲಾಗಿದೆ. ಕೃಷಿ, ತೋಟಗಾರಿಕೆ ಸೇರಿದಂತೆ 41 ಸಾವಿರ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.

     ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ 346 ಮನೆಗಳಿಗೆ ಹಾನಿಯಾಗಿದ್ದು, 12 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ 5 ಮಂದಿ ಕಾಣೆಯಾಗಿದ್ದರು. ಈ ಪೈಕಿ 3 ಜನರ ಮೃತದೇಹಗಳು ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಪರಿಹಾರ ವಿತರಣೆ ಮಾಡಲಾಗಿದೆ. 2 ಮಂದಿ ಕಣ್ಮರೆಯಾಗಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉಳಿದ ಎರಡು ವ್ಯಕ್ತಿಗಳ ಕುಟುಂಬಕ್ಕೂ ಸಹ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. 17 ಜಾನುವಾರುಗಳು ಸಾವನ್ನಪ್ಪಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

     ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಹೇಶ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ಇತರರು ಇದ್ದರು.

ಸುಳ್ಯದಲ್ಲಿ ಕೊರೊನಾ ನಿರ್ಲಕ್ಷ್ಯ: ನಮ್ಮಸುಳ್ಯ ಕೂಡ ದೂರದ ಬೆಂಗಳೂರು, ಬಳ್ಳಾರಿ ,ಯಾದಗಿರಿ ಆಗಬೇಕೆ? : ಎಂ.ವೆಂಕಪ್ಪಗೌಡ


ಸುಳ್ಯ (Times of coorg @ dakshina kannada ): ದೇಶದಲ್ಲಿ , ರಾಜ್ಯದಲ್ಲಿಯಂತೆ ಇದೀಗ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೂಡಾ ಕೊರೊನಾ ಮಹಮಾರಿ ಹೆಚ್ಚಳವಾಗುತ್ತಿದೆ.ಅದೇ ರೀತಿ ಸುಳ್ಯ ದಲ್ಲಿ ಕೊರೊನಾ  ವರದಿಯಾಗುತ್ತಿರುವುದು, ಸುಳ್ಯ ನಗರದ ಜನತೆಯನ್ನು ಆತಂಕೀಡು ಮಾಡಿದೆ ,ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ,ಸುಳ್ಯ ವಕೀಲ ಸಂಘದ ಅಧ್ಯಕ್ಷ, ಹಾಗೂ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪಗೌಡ ಹೇಳಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಮಾಡಿರುವ ವೆಂಕಪ್ಪಗೌಡ ಅವರು, ಇದೀಗ ಕೇವಲ ಸೋಂಕಿತರು ಮಾತ್ರವಲ್ಲ, ಮರಣ ಕೂಡ ಸಂಭವಿಸಿದೆ‌.ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ತಾಲ್ಲೂಕು ಆಡಳಿತಕ್ಕೆ ಒಬ್ಬರು ಮರಣಹೊಂದಿ, ಅವರಿಗೆ ಪಾಸಿಟಿವ್ ಆದ ವಿಚಾರವೇ ಶನಿವಾರ ಮಧ್ಯಾಹ್ನ ತನಕ ತಿಳಿದಿಲ್ಲ.
ಈ ಬಗ್ಗೆ ಮರಣ ಪಟ್ಟ ವಾರ್ಡಿನ ಸದಸ್ಯರ ಕರೆ ಕೂಡ ಸ್ವೀಕರಿಸುವ ಆಸಕ್ತಿಯಿಲ್ಲ.ಅಲ್ಲದೆ ಮರಣ ಹೊಂದಿದ ಮನೆ ಸುತ್ತಮುತ್ತ ಸ್ಯಾನಿಟೈಸ್ ಮಾಡುವ ಗೋಜಿಗೆ ಈ ತನಕ‌ ಹೋಗಿಲ್ಲ.ಎಂದಾದ್ರೆ ಏನರ್ಥ? ನಮ್ಮ ಸುಳ್ಯ ಕೂಡ ದೂರದ ಬೆಂಗಳೂರು ,ಬಳ್ಳಾರಿ, ಯಾದಗಿರಿ ಆಗಬೇಕೆ? ಎಂಬ ಆತಂಕ ಜನರಲ್ಲಿ ಮೂಡಿರುವುದು ಸತ್ಯ ಎಂದು ವೆಂಕಪ್ಪಗೌಡ ಹೇಳಿದರು.

ಸುಳ್ಯ ದಲ್ಲಿ ಕೇವಲ ಕೊರೊನಾ ಮಾತ್ರವಲ್ಲ, ಇದೀಗ ಡೆಂಗ್ಯೂ ಕೂಡ ಪ್ರಾರಂಭ ಆಗಿರೋದಕ್ಕೆ ನಗರಪಂಚಾಯತ್‌ ಚರಂಡಿ‌ ಗುತ್ತಿಗೆದಾರರಿಗೆ ಅದರ ಸೋಂಕು ತಗುಲಿರೋದು‌ ಅದಕ್ಕೆ ಸಾಕ್ಷಿಯಾಗಿದೆ .
ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ವೆಂಕಪ್ಪಗೌಡ ಹೇಳಿದರು.

ಕುಂಞಿ ಅಹ್ಮದ್ ತಹಶೀಲ್ದಾರ್ ; ನಿಷ್ಕಳಂಕ, ನಿಸ್ವಾರ್ಥ ಆಡಳಿತಾಧಿಕಾರಿ


✍ಸ್ವಬಾಹ್ ಹಿಮಮಿ ಬೀಜಕೊಚ್ಚಿ
ಸುಳ್ಯ (TOC ನ್ಯೂಸ್ ದ.ಕ) ಸುಳ್ಯ, ಸಪ್ತ ಭಾಷೆಗಳ ಸಂಗಮ ಭೂಮಿ. ಕಾಸರಗೋಡು, ಮಂಗಳೂರು ಮತ್ತು ಕೊಡಗು ಹೆದ್ದಾರಿಗಳಲ್ಲಿ ಸಿಗುವ ಮುಖ್ಯ ಪಟ್ಟಣ. ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಪೈಕಿ ಕೊನೆಯ ತಾಲೂಕು. ಜಾತಿ-ಧರ್ಮ-ಪಥ-ಪಂಗಡಗಳು ಹಲವಾರಿದ್ದರೂ ಪರಸ್ಪರ ಪ್ರೀತಿ, ಸಂತೋಷ, ಸಹಬಾಳ್ವೆಗಳಿಗೆ ಹೆಸರುವಾಸಿಯಾದ ಊರು. ಕೆ.ಎ 21 ಅಂದರೆ ನಮ್ಮವರು. ಕಲ್ಸಿಕಟ್ಟೆ ಎಂಬ ಹೆಸರನ್ನು ಬದಲಾಯಿಸಿ ಸುಳ್ಯ ಎಂದು ನಾಮಕರಣ ಮಾಡಲಾಗಿತ್ತಂತೆ. ಮಸೀದಿ, ಮಂದಿರ, ಚರ್ಚ್ ಗಳೇ ಸುಳ್ಯದ ಸೊಬಗು. ತಾಲೂಕಿನ ಹೆಮ್ಮೆಯ ತಹಶೀಲ್ದಾರರಾಗಿದ್ದಾರೆ ಶ್ರೀ ಕುಂಞಿ ಅಹ್ಮದ್. ಕುಂಞಿ ಅಹ್ಮದ್ ರವರು ಕೊಡಗು ಜಿಲ್ಲೆಯ ವಿರಾಜಪೇಟೆಯವರು. ಕಳೆದ 6 ತಿಂಗಳ ಹಿಂದೆ ಸುಳ್ಯದ ತಹಶೀಲ್ದಾರರಾಗಿ ನೇಮಕಗೊಂಡು ಸಕ್ರಿಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈವರೆಗೂ ಸುಳ್ಯ ಕಾಣದ ಅಪ್ರತಿಮ ನಿಷ್ಕಳಂಕ, ನಿಸ್ವಾರ್ಥ ಅಧಿಕಾರಿಯಾಗಿದ್ದಾರೆ ನಮ್ಮ ತಹಶೀಲ್ದಾರ್ ಎಂಬುದರಲ್ಲಿ ಎರಡು ಮಾತಿಲ್ಲ. Really, we feel much & more proud to be have such a TAHASHILDHAR. ತಾಲೂಕಿನ ಎಲ್ಲ ಅಧಿಕಾರಿ ವೃಂದದವರೊಂದಿಗೆ ಸಮಾನ ಮನಸ್ಸಿನೊಂದಿಗೆ ಅವರಿಗೆ ಮಾದರಿಯಾಗಿ ತನ್ನ ಅಧಿಕಾರಾವಧಿಯನ್ನು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಸದೇ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರಲ್ಲಿ ಭಾರತಕ್ಕೆ ಯಾವ ಆಡಳಿತ ಮಾದರಿ, ಶೈಲಿ ಪರಿಣಾಮಕಾರಿಯಾಗುತ್ತದೆ ಎಂದು ಕೇಳಿದಾಗ ಗಾಂಧೀಜಿ ನೀಡಿದ ರಿಪ್ಲೈ ಇಸ್ಲಾಮಿಕ್ ಖಿಲಾಫತ್'ನ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ (ರ) ರವರ ಆಡಳಿತ ಎಂದಾಗಿತ್ತು. ಆ ರೋಲ್ ಮೋಡಲ್ ನಂತೆ ನಮ್ಮ ತಹಶೀಲ್ದಾರ್ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. 
ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಳ್ಯ.👈 ಇದು ತಹಶೀಲ್ದಾರ್ ರವರ ಮುಖ್ಯ ಅಜೆಂಡಾ. ಇದೀಗಲೇ ಸುಳ್ಯ ಪ್ಲಾಸ್ಟಿಕ್ ಮುಕ್ತ ತಾಲೂಕಿನತ್ತ ಹೆಜ್ಜೆ ಇಟ್ಟಿದೆ. ಅದರ 90 ಶೇಕಡ ಕಾರ್ಯರೂಪಗಳೆಲ್ಲವೂ ಫುಲ್ ಸಕ್ಸಸ್ ಆಗಿದೆ.
 ಬೆಳಕು ಎಂಬುದು ಬಡ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ. ಬಡವರೊಂದಿಗೆ ಸಂಪೂರ್ಣವಾಗಿ ಬೆರೆತು ಅವರ ಎಲ್ಲ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕಿಸಿ ಕೊಡುವುದು. ಹೀಗೆ ಹತ್ತು ಹಲವಾರು ಸಮಾಜಮುಖಿ, ಸಾಂತ್ವನ ಕಾರ್ಯ ಯೋಜನೆಗಳು, ಕಾರ್ಯ ಚಟುವಟಿಕೆಗಳು. ಅಭಿವೃದ್ಧಿಯಿಂದ ಅಭಿವೃದ್ಧಿಯತ್ತ ಸಾಗುತ್ತಿದೆ ನಮ್ಮ ಸುಳ್ಯ. ಸುಳ್ಯದ ಅಭಿವೃದ್ಧಿಯ ಹರಿಕಾರ ಕುಂಞಿ ಅಹ್ಮದ್ ಸರ್ ರವರೆಂದರೆ ತಪ್ಪಾಗದು. ಯಾವುದೇ ರಾಜಕೀಯ ಅಥವಾ ಇನ್ನಿತರ ಪಾರ್ಟಿಗಳ ಹಿಂದೆ ದುಂಬಾಲು ಬೀಳದೆ ಎಲ್ಲರೊಂದಿಗೆ ಎಲ್ಲ ಪಾರ್ಟಿಯವರೊಂದಿಗೆ, ಎಲ್ಲ ಧರ್ಮದವರೊಂದಿಗೆ ಸಮಾನ ರೀತಿಯಲ್ಲಿ ವರ್ತಿಸುತ್ತಾ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

 ನಿನ್ನೆ (ಸೆಪ್ಟಂಬರ್ 19) ಎಸ್ಸೆಸ್ಸೆಫ್ ನ ಧ್ವಜ ದಿನ. ಅದರ ಪ್ರಯುಕ್ತ ಡಾ. ಎಂ.ಬಿ ಸದಾಶಿವ ರವರ ಸಂದೀಪಾ ಸ್ಪೆಷಲ್ ಸ್ಕೂಲ್ ನಲ್ಲಿ ರೀಚ್ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಕಾರ್ಯಕ್ರಮಕ್ಕೆ ತಹಶೀಲ್ದಾರ್ ರವರನ್ನು ಆಮಂತ್ರಿಸಲು ಹೋದಾಗ, "ಎಸ್ಸೆಸ್ಸೆಫ್ ನವರು ಏನು ಬೇಕಾದರೂ ಮಾಡಿ, ನೀವು ಒಳ್ಳೆಯದನ್ನೇ ಮಾಡುತ್ತೀರಾ, ನನ್ನ ಫುಲ್ ಸಪೋರ್ಟ್" ಎನ್ನುತ್ತಾ ನಮಗೆ ಸ್ಫೂರ್ತಿ ತುಂಬಿದರು. ಅಂದ ಹಾಗೆ ನಿನ್ನೆಯ ನಮ್ಮ ಕಾರ್ಯಕ್ರಮ ಉದ್ದೇಶಕ್ಕಿಂತಲೂ ಚೆನ್ನಾಗಿ ನಡೆದಿದೆ. ಎಂ.ಬಿ ರವರ ವಿಕಲಚೇತನ ಮಕ್ಕಳು, ಅವರನ್ನು ಕಂಡು, ಅವರ ಆ ಸಂಸ್ಥೆ, ಸಂಸ್ಥೆ ಮಕ್ಕಳನ್ನು ಕಂಡು, ಅವರ ಸೇವೆಯನ್ನು ಕಂಡು ತಹಶೀಲ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಸೆಸ್ಸೆಫ್ ಇಲ್ಲಿ ಕಾರ್ಯಕ್ರಮ ನಡೆಸಿದ್ದು ನಿಜಕ್ಕೂ ಗ್ರೇಟ್ ಎನ್ನುತ್ತಾ ಮತ್ತಷ್ಟು ಸ್ಫೂರ್ತಿ ನೀಡಿದರು. ಆ ಮಕ್ಕಳಿಗೆ ಸ್ವತಹ ತಂದಿದ್ದ ಚೊಕಲೇಟ್'ಗಳನ್ನು ನೀಡಿ ಕುಶಲೋಪರಿ ನಡೆಸಿ ತನ್ನ ಭಾಷಣದಲ್ಲಿ ಅವರ ಬಗ್ಗೆ ಮಾತನಾಡಿ ಕಣ್ಣೀರಿಟ್ಟರು. ರೀಚ್ನಲ್ಲಿ ತಹಶೀಲ್ದಾರ್, ಡಾ.ಎಂ.ಬಿ ಹಾಗೂ ಕರ್ನಾಟಕ ಎಸ್ಸೆಸ್ಸೆಫ್ ಸ್ಥಾಪಧ್ಯಕ್ಷರಾದ ಎ.ಬಿ ಹಸನುಲ್ ಫೈಝಿ ಉಸ್ತಾದ್ ರವರುಗಳನ್ನು ಅವರ ವಿಶಿಷ್ಟ ಸಾಧನೆ, ಸೇವಾ ಕಾರ್ಯಚಟುವಟಿಕೆಗಳಿಗಾಗಿ ಗೌರವ ಕಾಣಿಕೆ ನೀಡಿ ಸನ್ಮಾನಿಸಿದೆವು. DEVOLEPED SULYA, ನಮ್ಮ ತಹಶೀಲ್ದಾರ್ ರವರ ಕನಸು. ಆ ಕನಸನ್ನು ನನಸು ಮಾಡಲಿರುವ ಗುರಿಯುತ್ತ ನಾವು ರೀಚ್ ಆಗುತ್ತಿದ್ದೇವೆ. ಅದರ ಮುಂಚೂಣಿಯಲ್ಲಿ ನಮ್ಮ ತಹಶೀಲ್ದಾರರಿದ್ದಾರೆ. ತಹಶೀಲ್ದಾರ್ ಬಗ್ಗೆ ನಮ್ಮ ತಹಶೀಲ್ದಾರ್ ಎನ್ನುವಾಗ ಅಭಿಮಾನವೆನಿಸುತ್ತದೆ. ಕನಸನ್ನು ನನಸು ಮಾಡುವತ್ತ ನಾವಿಟ್ಟಿರುವ ಯಾತ್ರೆಯ ದಂಡ ನಾಯಕ ತಹಶೀಲ್ದಾರ್ ಶ್ರೀ ಯುತ ಕುಂಞಿ ಅಹ್ಮದ್ ರವರು. ಅಲ್ಲಾಹು ಅವರಿಗೆ ಆಫಿಯತ್ ನೊಂದಿಗೆ ಧೀರ್ಘಾಯುಸ್ಸು ನೀಡಿ ಅನುಗ್ರಹಿಸಲಿ, ಆಮೀನ್.