ಕರಿಯಪ್ಪ ಸಾವು ಪ್ರಕರಣ.ಆದಿವಾಸಿಗಳ ಮೇಲೆ ನಡೆಯುವ ದೌರ್ಜನ್ಯ ಖಂಡನೆ: ಜೆ.ಕೆ ರಾಮು

No comments
ಸಿದ್ದಾಪುರ :- ಎಚ್ ಡಿ ಕೋಟೆ ತಾಲ್ಲೂಕಿನ ಗುಂಡ್ರೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಮಾನುಷವಾಗಿ ಹತ್ಯೆಯಾದ ಜೇನು ಕುರುಬ ಸಮುದಾಯದ ಕರಿಯಪ್ಪ  ಸಾವು ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ವಿರಾಜಪೇಟೆ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ ಕೆ ರಾಮು ಒತ್ತಾಯಿಸಿದ್ದಾರೆ.ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ ತಲೆತಲಾಂತರಗಳಿಂದ ಅರಣ್ಯವನ್ನೇ ನಂಬಿ ಅರಣ್ಯದಂಚಿನಲ್ಲಿ ಸಣ್ಣ ಪುಟ್ಟ ಗುಡಿಸಲುಗಳನ್ನು ಕಟ್ಟಿ ಜೀವನ ನಡೆಸುತ್ತಿರುವ ಆದಿವಾಸಿಗಳ ಮೇಲೆ ಅರಣ್ಯಯ ಇಲಾಖೆ ಕೆಲ ಸಿಬ್ಬಂದಿಗಳು ನಿರಂತರ ದೌರ್ಜನ್ಯ ಎಸಗುತ್ತಿರುವ ಪರಿಣಾಮವೇ  ಜೇನುಕುರುಬರ ಕರಿಯಪ್ಪ ಅವರನ್ನ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.ಆದಿವಾಸಿಗಳು ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆಯೇ ಹೊರತು ಲೂಟಿ ಮಾಡಿ ಶ್ರೀಮಂತಿಕೆಯಲ್ಲಿ ಬದುಕು ಸಾಗಿಸುತ್ತಿಲ್ಲ. ಸೌದೆ, ಜೇನು, ಮೇಣ, ಸೀಗೆಕಾಯಿ, ಪಾಚಿ ಸೇರಿದಂತೆ  ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಕಾಡಿಗೆ ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಆದಿವಾಸಿಗಳ ಮೇಲೆ ಹಲ್ಲೆ ಮಾಡಿ, ಪ್ರಕರಣ ದಾಖಲಿಸಿ, ಬೆದರಿಕೆ ಒಡ್ಡುವ ಘಟನೆಗಳು ಕೊಡಗು ಜಿಲ್ಲೆಯಲ್ಲೂ ನಿರಂತರವಾಗಿ ನಡೆಯುತ್ತಿವೆ.ಇತ್ತೀಚೆಗೆ ದಿಡ್ಡಳ್ಳಿಯಲ್ಲಿ ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಹಾಗೂ ರಾಜೇಶ್, ಹರೀಶ,ರಮೇಶ, ಸೋಮೂಣು,ಕುನ್ನು,  ಸೇರಿದಂತೆ ಹಲವರ ಮೇಲೆ  ಇಲ್ಲಸಲ್ಲದ ಆರೋಪ ಮಾಡಿ ವಾರಗಳ ಕಾಲ ಬಂಧನದಲ್ಲಿರಿಸಿ ಮಾನಸಿಕ ದೈಹಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ನಾಗರಹೊಳೆ ವ್ಯಾಪ್ತಿಯಲ್ಲಿ ಗುಡಿಸಲು ಕಟ್ಟಿ ಜೀವನ ನಡೆಸಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಜಿಲ್ಲೆಯ ನಾನಾ ಭಾಗಗಳಲ್ಲಿ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳಿಂದ ನಿರಂತರವಾಗಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಸರ್ಕಾರ ಆದಿವಾಸಿಗಳಿಗೆ ರಕ್ಷಣೆ ನೀಡುವ ಮೂಲಕ ದೌರ್ಜನ್ಯ ಎಸಗುವ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ ಅವರು. ಕಾಡಂಚಿನಲ್ಲಿ ಶತಮಾನಗಳಿಂದ ಪಾರಂಪರಿಕವಾಗಿ ಅರಣ್ಯದ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವ ಆದಿವಾಸಿಗಳ ಮೇಲೆ ದಿನ ನಿತ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ಷುಲ್ಲಕ ಕಾರಣಕ್ಕೆ ಹೊಡೆಯುವುದು, ಬಡಿಯುವುದು  ಯಾರೋ ಮಾಡಿದ ತಪ್ಪನ್ನು ಆದಿವಾಸಿಗಳ ಮೇಲೆ ಹಾಕಿ ಸುಳ್ಳು ಪ್ರಕರಣವನ್ನು ಧಾಖಲಿಸಿ ಚಿತ್ರಹಿಂಸೆ ಕೊಡುವುದು ಈ ರೀತಿ ಅನೇಕ ದೌರ್ಜನ್ಯ  ಘಟನೆಗಳು ನಡೆಯುತ್ತಿದೆ .ಆದಿವಾಸಿಗಳನ್ನು ಅಭಿವೃದ್ಧಿಯೊಂದಿಗೆ ಮುಂದು ತರುವ ಪ್ರಯತ್ನವಾಗಲಿ ರಕ್ಷಣೆಯಾಗಲಿ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು.ಆದಿವಾಸಿಗಳ ದೌರ್ಜನ್ಯ ಮುಂದುವರಿದರೆ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜೆ.ಕೆ ರಾಮು ಎಚ್ಚರಿಸಿದ್ದಾರೆ.

No comments

Post a Comment