ಸೆ.30 ರಂದು ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್

No comments

ಮಡಿಕೇರಿ ಸೆ.23(web@timesofcoorg):-ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 30 ರಂದು ಮೆಗಾ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ ಅವರು ತಿಳಿಸಿದ್ದಾರೆ.  

ಕೊಡಗು ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಸುಮಾರು 5 ಸಾವಿರದಷ್ಟು ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸುಮಾರು 1600 ರಾಜಿ ಆಗಬಹುದಾದ ಪ್ರಕರಣಗಳೆಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.  

      ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣಗಳನ್ನು ಪರಿಹರಿಸಲಾಗುವುದು. ಸಾರ್ವಜನಿಕ ಹಿತಾಸಕ್ತಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮೆಗಾ ಲೋಕ ಅದಾಲತ್ ಏರ್ಪಡಿಸಲಾಗಿದೆ. ಆ ದಿಸೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದರು.  

ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲು ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳು, ಮೈಂಟೆನ್ಸ್ ಪ್ರಕರಣಗಳು, ಹಾಗೆಯೇ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಲ್ಲ ಅಪರಾಧಿತ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ, ನ್ಯಾಯಾಧೀಕರಣ ಪ್ರಕರಣಗಳು, ವೇತನ ಹಾಗೂ ಭತ್ಯೆಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಬಾಡಿಗೆ, ಅನುಭೋಗ ಹಕ್ಕುಗಳು ಹೀಗೆ ಹಲವು ರೀತಿಯ ಪ್ರಕರಣಗಳನ್ನು ಮೆಗಾ ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗುತ್ತದೆ. 

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ ಮುಂಚಿತವಾಗಿಯೇ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಸಮಿತಿಗೆ ಆನ್‍ಲೈನ್, ವಿಡಿಯೋ ಕಾನ್ಪರೆನ್ಸ್, ಇ-ಮೇಲ್, ಎಸ್‍ಎಂಎಸ್., ವಾಟ್ಸ್‍ಅಪ್, ಎಲೆಕ್ಟ್ರಾನಿಕ್ ಮೋಡ್, ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 08272-222373 ಇ-ಮೇಲ್-dlsamadikeri@gmail.com ನ್ನು ಸಂಪರ್ಕಿಸಬಹುದು.

No comments

Post a Comment