ಸಹಕಾರ ಸಂಘ ಮತ್ತಷ್ಟು ಬಲಪಡಿಸಲು ಕೈಜೋಡಿಸಿ: ಸೋಮಶೇಖರ್
ಮಡಿಕೇರಿ ಆ.20( web@timesofcoorg):-ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಮಾಡುವಲ್ಲಿ ಇನ್ನಷ್ಟು ಸುಧಾರಣೆ ಮತ್ತು ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಸಹಕಾರ ಸಂಘದಲ್ಲಿ 30 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. 280 ವಿವಿಧ ಸಹಕಾರ ಬ್ಯಾಂಕ್‍ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ತಿಳಿಸಿದರು.
ಕೊಡಗು ಡಿಸಿಸಿ ಬ್ಯಾಂಕ್ ಸಾಲ ನೀಡುವಲ್ಲಿ ಮತ್ತು ವಸೂಲಾತಿಯಲ್ಲಿಯೂ ಸಹ ಉತ್ತಮವಾಗಿದೆ. ಅಪೇಕ್ಸ್ ಬ್ಯಾಂಕುಗಳು ಸಹ ಸಧೃಡವಾಗಿವೆ. ಕೊಡಗು ಡಿಸಿಸಿ ಬ್ಯಾಂಕಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರಿದೆ, ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಗಳು ಹೀಗೆ ಎಲ್ಲರ ಪರಿಶ್ರಮವನ್ನು ಮೆಚ್ಚಬೇಕು ಎಂದು ಸಚಿವರು ನುಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಸಹಕಾರ ಕ್ಷೇತ್ರ ರಾಜಕೀಯ ಕ್ಷೇತ್ರಕ್ಕೆ ಮೆಟ್ಟಿಲು ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿರುವುದು ವಿಶೇಷವಾಗಿದೆ. ಮಾದಾಪುರದಲ್ಲಿಯೂ ಜಿಲ್ಲಾ ಸಹಕಾರ ಬ್ಯಾಂಕನ್ನು ಆರಂಭಿಸುವಂತೆ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಡಿಸಿಸಿ ಬ್ಯಾಂಕ್ ಜಿಲ್ಲೆಯ ಮನೆ ಮನೆಗೆ ತಲುಪಿರುವುದು ವಿಶೇಷವೇ ಸರಿ. ಆ ದಿಸೆಯಲ್ಲಿ ಇನ್ನಷ್ಟು ಹೆಮ್ಮರವಾಗಿ ಬ್ಯಾಂಕ್ ಬೆಳೆಯಲಿ ಎಂದು ಶಾಸಕರು ಆಶಿಸಿದರು.
ಶಾಸಕಾರದ ಕೆ.ಜಿ.ಬೋಪಯ್ಯ ಅವರು ಶತಮಾನೋತ್ಸವದ ಸ್ಮರಣ ಸಂಚಿಕೆ ‘ಸಹಕಾರ ಸಿರಿ’ ಬಿಡುಗಡೆ ಮಾಡಿ ಮಾತನಾಡಿ ಕೊಡಗು ಜಿಲ್ಲೆ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಅಸ್ತಿತ್ವ ಹೊಂದಿದೆ. ರೈತರಿಗೆ ಕೃಷಿ ಸಾಲ ನೀಡುವಲ್ಲಿ ಸಹಕಾರ ಕ್ಷೇತ್ರ ಸಹಕಾರಿಯಾಗಿದೆ ಎಂದರು.
ರೈತರಿಗೆ ಅತಿ ಸುಲಭದಲ್ಲಿ ಸಾಲ ದೊರೆಯುತ್ತಿದೆ. ಸಾಲ ಪಡೆದವರು ಸಹಾ ಸಾಲವನ್ನು ಹಿಂದಿರುಗಿಸುತ್ತಾರೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 5 ಲಕ್ಷ ರೂ ವರೆಗೆ ಜಾಮೀನು ರಹಿತವಾಗಿ ಸಾಲ ವಿತರಿಸಲಾಗುತ್ತದೆ ಎಂದರು.
ಕೊಡಗು ಡಿಸಿಸಿ ಬ್ಯಾಂಕ್ ಲಾಭದಲ್ಲಿ ನಡೆಯುತ್ತಿದೆ. ಸಹಕಾರ ಸಂಘಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಯಾವುದೇ ಕಾರಣಕ್ಕೂ ನಿಯಂತ್ರಣ ಹೇರಬಾರದು ಎಂದು ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಕೊಡಂದೇರ ಕುಟುಂಬವು ಸಹಕಾರ ಕ್ಷೇತ್ರದಿಂದ ಸೇನಾ ಕ್ಷೇತ್ರದವರೆಗೆ ತನ್ನದೇ ಆದ ಕೊಡುಗೆ ನೀಡಿದೆ, ಕೊಡಗು ಜಿಲ್ಲೆಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಡಿಸಿಸಿ ಬ್ಯಾಂಕ್ ಉತ್ತಮವಾಗಿ ಬೆಳೆಯಲು ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದರು.
ಮಾಜಿ ಸಚಿವರು ಹಾಗೂ ಸಹಕಾರಿಯಾದ ಎಂ.ಸಿ.ನಾಣಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಎರಡನೇ ಸಹಕಾರ ಸಂಘ ಸ್ಥಾಪನೆಯಾಗಿರುವುದು ಶಾಂತಳ್ಳಿಯಲ್ಲಿ (1906) ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸಹಕಾರ ಸಂಘಗಳು ಯಾವುದೇ ರೀತಿಯ ನಿಯಂತ್ರಣಕ್ಕೆ ಒಳಗಾಗಬಾರದು. ಹಸ್ತಕ್ಷೇಪವು ಸಹಾ ಇರಬಾರದು. ಸಹಕಾರ ಕ್ಷೇತ್ರ ಸಹಕಾರಿಗಳಿಗೋಸ್ಕರ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಗಳು ಪಟ್ಟಭದ್ರ ಹಿತಾಶಕ್ತಿಗಳ ಹಿಡಿತದಲ್ಲಿ ಇರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದಲ್ಲಿ ಭ್ರಾತೃತ್ವದಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಗೂ ಮೊದಲು ಧವಸ ಭಂಡಾರ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದವು ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ 21 ಶಾಖೆಗಳನ್ನು ಹೊಂದಿದೆ. 11 ಕಡೆಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ ಎಂದರು.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೃಷಿಕರಿಗೆ ಅಗತ್ಯ ಸಹಕಾರ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ವತಿಯಿಂದ ಚಿನ್ನಾಭರಣ ಸಾಲವನ್ನು ಸಹ ನೀಡಲಾಗುತ್ತದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಶತಮಾನೋತ್ಸವ ಸಂದರ್ಭದಲ್ಲಿ 7 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ಹಾಗೂ ಒಳಾಂಗಣ ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಅವರು ಹೇಳಿದರು.
ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಸರ್ಕಾರ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಘೋಷಿಸಿರುವುದು ವಿಶೇಷವಾಗಿದೆ ಎಂದರು.
ಸಹಕಾರ ಸಂಘಗಳ ಅಪರ ನಿಬಂಧಕರಾದ ಎ.ಸಿ.ದಿವಾಕರ ಅವರು ಮಾತನಾಡಿ ಇದುವರೆಗೆ ಸಹಕಾರ ಸಂಘದಲ್ಲಿ ಯಾರು ಸಾಲ ಪಡೆದಿಲ್ಲ ಅಂತಹವರಿಗೆ ಸಹಕಾರ ಸಂಘಗಳ ಮೂಲಕ ಸಾಲ ದೊರೆಯಲಿದೆ. ಖಾಸಗೀ ಮತ್ತು ಸಾರ್ವಜನಿಕ ಬ್ಯಾಂಕುಗಳಿಗೆ ಸರಿ ಸಮನಾಗಿ ಸಹಕಾರ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತವೆ ಎಂದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಡಿಸಿಸಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶತಮಾನೋತ್ಸವ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಡಿಸಿಸಿ ಬ್ಯಾಂಕ್‍ನ ಸಂಚಾರಿ ಬ್ಯಾಂಕ್ ವಾಹನಕ್ಕೆ ಶಾಸಕಾರದ ಕೆ.ಜಿ.ಬೋಪಯ್ಯ ಅವರು ಚಾಲನೆ ನೀಡಿದರು. ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎಂ.ಸಿ.ನಾಣಯ್ಯ, ಬಿ.ಕೆ.ಚಿಣ್ಣಪ್ಪ, ಕೆ.ಎ.ಉತ್ತಪ್ಪ, ಎಂ.ಎ.ರಮೇಶ್, ಬಿ.ಡಿ.ಮಂಜುನಾಥ್, ಮಾಜಿ ಉಪಾಧ್ಯಕ್ಷರಾದ ಶಾಂತಕುಮಾರ್. ಕೆ.ಎಂ.ಮಂದಣ್ಣ, ಭರತ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕಿನ ನಿರ್ದೇಶಕರು ಇತರರು ಇದ್ದರು.
ಸಭಾ ಕಾರ್ಯಕ್ರಮದ ಮೊದಲು ಬ್ಯಾಂಕಿನ ಇತಿಹಾಸ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಬ್ಯಾಂಕಿನ ಸಿಬ್ಬಂದಿಯಾದ ಬೋಜಮ್ಮ ಮತ್ತು ತಂಡದವರು ಪ್ರಾರ್ಥಿಸಿದರು, ಬ್ಯಾಂಕಿನ ಇಒ ಬಿ.ಕೆ ಸಲೀಂ ಸ್ವಾಗತಿಸಿದರು, ಡಾ.ವಿಜಯ ಅಂಗಡಿ ಮತ್ತು ಆರ್.ಮಂಜುಳ ನಿರೂಪಿಸಿದರು, ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು.
No comments
Post a Comment