✍ಜಗದೀಶ್ ಜೋಡುಬೀಟಿ...
ಗೋಣಿಕೊಪ್ಪ (Times Of Coorg) :- ತಮ್ಮ-ತಮ್ಮ ವಾರ್ಡ್ ಗಳ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಪರಿಹರಿಸಲು ಮುಂದಾಗಬೇಕಾಗಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಹಲವು ಸದಸ್ಯರು ತಮ್ಮ ಭಾಗದ ಜನರ ಸಮಸ್ಯೆಯನ್ನು ಆಲಿಸದೆ ಕೊರೊನಾ ಭೀತಿಯಿಂದ ನಾಪತ್ತೆಯಾಗಿರುವುದು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಕೋವಿಡ್-19 ಸೋಂಕನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೆ ತಂದು ಎಲ್ಲರೂ ಮನೆಯಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸೂಚಿಸಿದಾರ ಹಿನ್ನಲೆ ಹಲವು ಮಂದಿಗೆ ಕೆಲಸವಿಲ್ಲದೇ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ.
ಪಡಿತರ ಅಕ್ಕಿ, ಗೋಧಿಗಳನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಕೆಲವರಿಗೆ ಪಡಿತರ ಚೀಟಿ ಇಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ವಸ್ತುಗಳು ಸಿಗದೆ ಕಂಗಲಾಗಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಕೆಲವು ವಾರ್ಡುಗಳಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಇತ್ತ ಗಮನವೇ ಹರಿಸಿಲ್ಲ ಕನಿಷ್ಟ ಮಾನವೀಯ ನೆಲೆಯಿಂದಲ್ಲಾದರೂ ಕಷ್ಟದಲ್ಲಿರುವವರಿಗೆ ಸರ್ಕಾರದ ಸೌಲಭ್ಯ ದೊರಕಿಸಲು ಮುಂದೆ ಬರಬೇಕಾಗಿತ್ತು. ಆದರೆ,ಸದಸ್ಯರು ತಮ್ಮ ವಾರ್ಡಿನ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ.
ಲಾಕ್‌ಡೌನ್ ಆದಾಗಿನಿಂದ ಕೆಲವು ವಾರ್ಡ್‌ಗಳ ಸದಸ್ಯರು ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿದೆ.
ಗ್ರಾ.ಪಂ.ಸದಸ್ಯರು ತಮ್ಮ ವಾರ್ಡಿನ ಜನರೊಂದಿಗೆ ನಿಕಟ ಸಂಪರ್ಕ ಹೊಂದಿ ಯಾರು ಕಡುಬಡವರು, ಯಾರಿಗೆ ಪಡಿತರ ಚೀಟಿ ದೊರೆತ್ತಿಲ್ಲ, ಯಾವ ಮನೆಯಲ್ಲಿ ವಿಕಲಚೇತನರು, ಅನಾರೋಗ್ಯ ಪೀಡಿತರು, ವಯೋವೃದ್ಧರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕಬೇಕು. ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಕೆಲವು ಸದಸ್ಯರುಗಳು ಜನಸಂಪರ್ಕದಿಂದಲೇ ದೂರ ಉಳಿದಿದ್ದಾರೆ.
21 ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಯಲ್ಲಿ ಕೇವಲ ನಾಲ್ವರು ಸದಸ್ಯರು ಮಾತ್ರ ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ಒದಗಿಸುತ್ತಿದ್ದಾರೆ. ಉಳಿದ ಸದಸ್ಯರು ಮಾತ್ರ ಇದುವರೆಗೂ ತಮ್ಮ ವಾರ್ಡ್ಗಳತ್ತ ಸುಳಿದಿಲ್ಲ.
ಸದಸ್ಯ ಸುರೇಶ್ ರೈ ಅವರು ಲಾಕ್ಡೌನ್ ಆದ ದಿನದಿಂದ ವಿವಿಧ ಸಂಘ ಸಂಸ್ಥೆ ಮತ್ತು ಸ್ನೇಹಿತರ ಸಹಕಾರದೊಂದಿಗೆ ಪಟ್ಟಣದಲ್ಲಿರುವ ನಿರ್ಗತಿಕರಿಗೆ ಮಧ್ಯಾಹ್ನದ ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಉಳಿದ ಸದಸ್ಯರು ನಾಪತ್ತೆಯಗಿರುವುದು ಜನರ ವಿಶ್ವಾಸ ಕಳೆದುಕೊಳ್ಳಲು ಕಾರಣವಾಗಿದೆ.
No comments
Post a Comment