ದ.ಕ (web@timesofcoorg) : ಮಂಗಳೂರಿನ ಬಂದರ್ ನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಸ್ಫೋಟಕ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು, ಈ ಪ್ರಕರಣದ ಸಮಗ್ರ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.
ಜನನಿಬಿಡ ಪ್ರದೇಶದ ಅಂಗಡಿಯೊಂದರಿಂದ 1500 ಕೆ.ಜಿ.ಗೂ ಅಧಿಕ ಸ್ಫೋಟಕ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆನಂದ್ ಗಟ್ಟಿ ಎಂಬ ವ್ಯಕ್ತಿಯ ಬಂಧನದೊಂದಿಗೆ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಈತ ಗನ್ ಮಾರಾಟ ಮಾಡುವ ಪರವಾನಿಗೆ ಪಡೆದು ಅಕ್ರಮವಾಗಿ ಸ್ಫೋಟಕ ಸಾಮಗ್ರಿ ದಾಸ್ತಾನು ಇರಿಸಿರುವುದು ಆತಂಕಕಾರಿಯಾಗಿದೆ. ಪತ್ತೆ ಹಚ್ಚಲಾದ ಸ್ಫೋಟಕ ಗನ್ ತಯಾರಿಗೆ ಬಳಸುವಂತದ್ದಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿರುವಾಗ ಇದನ್ನು ಯಾವ ದುಷ್ಕ್ರತ್ಯಕ್ಕೆ ಬಳಸಲು ಯೋಜನೆ ಮಾಡಿರಬಹುದು ಎಂಬ ವಿಚಾರ ತನಿಖೆಯಿಂದಷ್ಟೇ ಬಹಿರಂಗವಾಗಬೇಕು.
ಮಡ್ಗಾಂವ್ ಸ್ಫೋಟದ ಗಂಭೀರ ಆರೋಪ ಹೊತ್ತು ಎನ್.ಐ.ಎ.ಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕಡಬ ನಿವಾಸಿ ಜಯ ಪ್ರಕಾಶ್ ದ.ಕ.ಕನ್ನಡದವನು. ಗೌರಿ ಲಂಕೇಶ್ ಹತ್ಯೆಯಲ್ಲೂ ಇದೇ ಜಿಲ್ಲೆಯ ಮೋಹನ್ ನಾಯಕ್ ಎಂಬಾತ ಆರೋಪಿಯಾಗಿದ್ದಾನೆ. ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಅತುಲ್ ರಾವ್ ನನ್ನು ನಂತರ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿತ್ತು. ಇದೀಗ ಭಾರೀ ಸ್ಫೋಟಕ ದಾಸ್ತಾನು ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಸ್ಫೋಟಕ ಸಾಮಗ್ರಿಯೊಂದಿಗೆ ಆರೋಪಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರ ಸಕಾಲಿಕ ಕ್ರಮ ಶ್ಲಾಘನೀಯ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿನ ಪಿತೂರಿಯನ್ನು ಅನಾವರಣಗೊಳಿಸಬೇಕು ಮತ್ತು ಈತನ ಹಿನ್ನೆಲೆಯನ್ನು ಸಮಾಜದ ಮುಂದೆ ಬಹಿರಂಗಪಡಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.
No comments
Post a Comment