ಕೊಡಗು-ಕೇರಳ ಗಡಿ ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಸ್ಪಂದನೆ ಅವಶ್ಯ: ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರ ಮನವಿ

No comments



ಮಡಿಕೇರಿ (Times Of Coorg)-
ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳ್ಳಲಿ, ಗಡಿ ಗ್ರಾಮಗಳ ಸಮಸ್ಯೆಗಳಿಗೆ ಇನ್ನಷ್ಟು ಸ್ಪಂದಿಸಬೇಕಿದೆ ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ. 

        ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬೆಂಗಳೂರಿನ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಕಾರ್ಯಗಾರ ಹಾಗೂ ಸಮಿತಿ ಸದಸ್ಯರ ಸಂವಾದ ಸಭೆಯಲ್ಲಿ ಜಿಲ್ಲೆಯ ಪ್ರತಿನಿಧಿಗಳಾದ ಎಸ್.ಮಹೇಶ್, ಕಲಾವಿದ ರಾಜು ಹಾಗೂ ರಂಜಿತ ಕಾರ್ಯಪ್ಪ ತಂಡ ಆಡಳಿತದಲ್ಲಿ ಕನ್ನಡ ಅನುಷ್ಠಾನ ಹಾಗೂ ಅಂತರ್ ರಾಜ್ಯ ಗಡಿಗ್ರಾಮಗಳ ಸಮಸ್ಯೆಯ ಬಗ್ಗೆ ಪ್ರಾಧಿಕಾರ ಮತ್ತಷ್ಟು ಗಮನ ಸೆಳೆಯಬೇಕು ಎಂದು ಕೋರಿದ್ದಾರೆ. 

ಕರ್ನಾಟಕ ಕೇರಳ ರಾಜ್ಯದ ಗಡಿ ಜಿಲ್ಲೆ ಕೊಡಗಿನ ಗಡಿ ಗ್ರಾಮಗಳಾದ ಕುಟ್ಟ, ಮಾಕುಟ್ಟ ಹಾಗೂ ಕರಿಕೆ ಗ್ರಾಮಗಳ ಜನತೆ ಕೆಲವೊಂದು ವಿಚಾರಗಳಿಗೆ ಹತ್ತಿರದ ರಾಜ್ಯವನ್ನು ಅವಲಂಬಿಸಬೇಕಿದೆ. ಆದ್ದರಿಂದ ಇಲ್ಲಿ ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಬೇಕಿದೆ. ಜೊತೆಗೆ ಜನಜೀವನ ಕನ್ನಡ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಮಹೇಶ್ ಅವರು ಸಲಹೆ ಮಾಡಿದರು.  

ಕನ್ನಡ ಅಭಿವೃದ್ಧಿಗೆ ಪೂರಕವಾಗಿ ಗಡಿ ಉತ್ಸವ ಹಾಗೂ ಕೊಡಗು ಉತ್ಸವಗಳು ಜರುಗಬೇಕು. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಗಮನ ಸೆಳೆದು ಜಿಲ್ಲೆಯಲ್ಲೂ ಕನ್ನಡ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದರು. 

ಜಿಲ್ಲೆಯಲ್ಲಿ ನಡೆಯುವ ಜಿಲ್ಲಾ ಹಾಗೂ ಕೆಡಿಪಿ ಸಭೆಗಳಿಗೆ ಕನ್ನಡ ಜಾಗೃತಿ ಸಮಿತಿಯ ಸದಸ್ಯರನ್ನು ಅಹ್ವಾನಿಸಬೇಕು. ಆಗ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳು ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು. 

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹಾಗೂ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಅವರು ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಬಗ್ಗೆ ಕ್ರೋಡೀಕರಿಸಿ ಲಿಖಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.   

ಈ ಸಂದರ್ಭ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ, ಸಂಸ್ಕøತಿ ಚಿಂತಕ ಸಚೇಂದ್ರ ಪ್ರಸಾದ್, ಯುವ ಬ್ರಿಗೇಡ್ ಸಂಘಟನೆಯ ಅಧ್ಯಕ್ಷ ಚಕ್ರವರ್ತಿ ಸೋಲಿಬೆಲೆ, ಸಾಮಾಜಿಕ ಕಾರ್ಯಕರ್ತ ವಾದಿರಾಜ, ಪ್ರಾಧಿಕಾರದ ಸದಸ್ಯರುಗಳಾದ ಡಾ.ವಿಜಯಲಕ್ಷ್ಮಿ ಬಾಳೆ ಕುಂದ್ರಿ, ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಶ, ಗುಬ್ಬಿಗೂಡು ರಮೇಶ್, ರೋಹಿತ್ ಚಕ್ರತೀರ್ಥ, ಡಾ ಸಿ.ಎ ಕಿಶೋರ್ ಇತರರು ಇದ್ದರು.



No comments

Post a Comment