ನಮ್ಮ ಕೊಡಗು ತಂಡ ಮತ್ತು ಬೆಂಗಳೂರಿನ ಸಂಸ್ಥೆಗಳಿಂದ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಕಿಟ್ ವಿತರಣೆ
ಸಿದ್ದಾಪುರ : ಮೂರು ವರ್ಷಗಳಿಂದ ಕೊಡಗಿನ ಜನತೆ ಮಳೆಗಾಲದಲ್ಲಿ ಹೇಳತೀರದ ಪರಿಪಾಟಲಗಳನ್ನು ಅನುಭವಿಸುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಈ ವರ್ಷದ ಮೊದಲ ಅವಾಂತರ ಎಂಬಂತೆ ಮಡಿಕೇರಿ ನಗರದಿಂದ ಎಂಟು ಕಿ. ಮೀ. ದೂರದಲ್ಲಿರುವ ಮೇಕೆರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬನ್ನೇಕಾಡು ಪೈಸಾರಿ ಎಂಬ ಗ್ರಾಮದಲ್ಲಿ ಮೂರು ದಿನಗಳಿಗೆ ಮೊದಲು ಸುರಿದ ಬಾರಿ ಗಾಳಿ ಮಳೆಗೆ ದೊಡ್ಡ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದಿದ್ದು ಬಾಣಂತಿ ಹೆಂಗಸು ಸೇರಿದಂತೆ ಕುಟುಂಬದ ಸದಸ್ಯರು ನೂಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಇದಾದ ನಂತರದಲ್ಲಿ ಕೆಲವು ವರ್ಷಗಳಿಗೆ ಮೊದಲು ಗಂಡ ಮತ್ತು ಮಗನನ್ನು ಕಳೆದುಕೊಂಡು ಒಂಟಿಯಾಗಿ ತನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿರುವ ಆ ಮನೆಯ ಪಾರ್ವತಿ ಎಂಬುವವರು ಕರೆ ಮಾಡಿ, ಮರ ಬಿದ್ದಾಗ ಒಳಗಡೆ ಇದ್ದ ದಿನಸಿ ಪದಾರ್ಥಗಳೆಲ್ಲಾ ಮಣ್ಣಿನಡಿಯಲ್ಲಿ ಸಿಲುಕಿ ಹಾಳಾಗಿ ಹೋಗಿದೆ. ಸದ್ಯ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು *ನಮ್ಮ ಕೊಡಗು ತಂಡ* ದವರಿಗೆ ಕರೆ ಮಾಡಿದ್ರೆ ಏನಾದರು ಸಹಾಯ ಸಿಗಬಹುದು ಎಂದು ನೆರೆಮನೆಯವರು ತಿಳಿಸಿದರು ಅದರಿಂದಾಗಿ ನಿಮಗೆ ಕರೆ ಮಾಡುತ್ತಿದ್ದೇವೆ ಎಂದು ತಂಡದ ಸದಸ್ಯರಿಗೆ ಕರೆ ಮಾಡಿ ಬೇಸರ ತೋಡಿಕೊಂಡರು. ತಕ್ಷಣ ಸ್ಪಂದಿಸಿದ ನಮ್ಮ ಕೊಡಗು ತಂಡದ ಪದಾಧಿಕಾರಿಗಳು ಬೆಂಗಳೂರಿನ ಬನವಾಸಿ ಕನ್ನಡಿಗರು ಮತ್ತು ಯು. ಎಸ್. ಟಿ. ಸಂಸ್ಥೆಯ ಸಹಕಾರದಿಂದ ಆ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಹೊತ್ತು, ವಾಹನ ಸಂಚಾರವಿಲ್ಲದ ದುರ್ಗಮ ಹಾದಿಯಲ್ಲಿ ಸುಮಾರು ನಾಲ್ಕು ಕಿ. ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿ ಧವಸದಾನ್ಯಗಳ ಕಿಟ್ ವಿತರಿಸಲಾಯಿತು. ಜೊತೆಗೆ ಪಂಚಾಯಿತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಅತೀ ಶೀಘ್ರದಲ್ಲಿ ಆ ಕುಟುಂಬಕ್ಕೆ ತಾತ್ಕಾಲಿಕವಾಗಿಯಾದರೂ ತಂಗಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ತಂಡದ ಅಜಿತ್ ಕೊಟ್ಟಕೇರಿಯನ ಮತ್ತು ನೌಶಾದ್ ಜನ್ನತ್ತ್ ಆಗ್ರಹಿಸಿದರು. ಸ್ಥಳದಲ್ಲಿ ತಂಡದ ಪದಾಧಿಕಾರಿಗಳಾದ ಉಮೇಶ್ ಗೌಡ, ಲೋಹಿತ್ ಬಿ. ಬಿ., ಮೋಹನ್ ಕುಶಾಲನಗರ ಹಾಜರಿದ್ದರು.
No comments
Post a Comment