ದೇವಾಲಯದ ವತಿಯಿಂದ ಸ್ಪಷ್ಟನೆ
ಮಡಿಕೇರಿ (Times Of Coorg):-ಹುಣಸೂರು ಮೂಲದ ಕುಟುಂಬವೊಂದು ಭಾಗಮಂಡಲಕ್ಕೆ ಜೂನ್, 23 ರಂದು ತೆರಳಿದ್ದು, ಪೂಜೆಗೆಂದು ದೇವಸ್ಥಾನಕ್ಕೆ ಹೋಗುವ ಮುಂಚಿತವಾಗಿ ಅವರ ಸಂಪ್ರದಾಯದಂತೆ ನೀರಿನಲ್ಲಿ ಮುಳುಗೆದ್ದು ದೇವಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ನದಿಗೆ ಇಳಿದಿರುತ್ತಾರೆ. ಈ ಬಗ್ಗೆ ದೇವಸ್ಥಾನದ ಸಂಪ್ರದಾಯ ಇರುವುದಿಲ್ಲ.
ಆಗಮಿತ ಕುಟುಂಬದ ಸದಸ್ಯರು ಪಿಂಡ ಪ್ರಧಾನ/ಕೇಶ ಮುಂಡನಕ್ಕಾಗಿ ಭಾಗಮಂಡಲಕ್ಕೆ ಆಗಮಿಸಿರುವುದಿಲ್ಲ. ಇವರ ಮನೆಯ ಓರ್ವ ಸದಸ್ಯ ಕಳೆದ ವರ್ಷ ಮೃತಪಟ್ಟಿದ್ದು, ಈ ಸಂಬಂಧ ವರ್ಷದ ಪೂಜೆಗೆಂದು ಭಾಗಮಂಡಲಕ್ಕೆ ಆಗಮಿಸಿ, ನದಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರ ಕುಟುಂಬದ ಸದಸ್ಯರು ಕಾಪಾಡಲು ನೀರಿಗೆ ಇಳಿದಿರುತ್ತಾರೆ. ನದಿಗೆ ಇಳಿದು ನೀರಿನಲ್ಲಿ ಮುಳುಗುತ್ತಿದ್ದ ಒಟ್ಟು ಮೂರು ಮಂದಿಯನ್ನು ದೇವಸ್ಥಾನ ಕಾವಲು ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಿಸಲು ಪ್ರಯತ್ನಿಸಿದರೂ ಸಹ ನೀರಿನಲ್ಲಿ ಮುಳುಗಿದ್ದ ಸುಬ್ರಮಣಿ ಎಂಬುವವರು ಅಷ್ಟರಲ್ಲೇ ಮೃತರಾಗಿರುವುದು ಕಂಡುಬಂದಿರುತ್ತದೆ.
ರಕ್ಷಿಸಲ್ಪಟ್ಟ ಇಬ್ಬರು ಸದಸ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಈ ಸಂಬಂಧ ಭಾಗಮಂಡಲ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ಭಾಗಮಂಡಲ ಶ್ರೀ ಭಗಂಡೇಶ್ವರ ಸಮೂಹ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.

No comments
Post a Comment