ಪತ್ರಕರ್ತ ಶ್ರೀಧರ್ ನೆಲ್ಲಿತಾಯನವರಿಗೆ ಸಿ.ಜಿ.ಕೆ ಪ್ರಶಸ್ತಿ
ವರದಿ : ಚಂದನ್ ನಂದರಬೆಟ್ಟು
@www.timesofcoorg.in
ಮಡಿಕೇರಿ (Times Of Coorg) : ಚಾನಲ್‌ಕೂರ್ಗ್ ವಾಹಿನಿಯ ಪ್ರಧಾನ ಸಂಪಾದಕರು, ಕೂರ್ಗ್ ಎಕ್ಸ್‌ಪ್ರೆಸ್ ವಾರಪತ್ರಿಕೆಯ ಸಂಪಾದಕರು, ಹಿರಿಯ ಪತ್ರಕರ್ತ, ರಂಗಭೂಮಿ ನಟ ಹಾಗು ಸಂಘಟಕರು, ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗು ಕೊಡಗು ತುಳು ಜನಪದ ಕೂಟದ ಸ್ಥಾಪಕ ಸದಸ್ಯರಲ್ಲಿ ಒಬ್ಬರು, ರಾಮಕೃಷ್ಣ ಹೆಗಡೆಯವರ ಮೌಲ್ಯಧಾರಿತ ಚಿಂತನೆಯ ಬೆಂಬಲಿಗರಾಗಿ ಸೇವೆ ಸಲ್ಲಿಸಿದ್ದ ಶ್ರೀಧರ್ ನೆಲ್ಲಿತಾಯನವರಿಗೆ ರಂಗಭೂಮಿ ಪರಿಷತ್ತು ಕರ್ನಾಟಕ ಮತ್ತು ರಂಗಭೂಮಿ ಪ್ರತಿಷ್ಠಾನ ಕೊಡಗು ಕೊಡಮಾಡುವ 2020 ನೇ ಸಾಲಿನ " ಪ್ರತಿಷ್ಠಿತ ಸಿ.ಜಿ.ಕೆ. ಪ್ರಶಸ್ತಿ " ಸಂದಿದೆ. ಖ್ಯಾತ ರಂಗಭೂಮಿ ನಿರ್ದೇಶಕ ದಿವಂಗತ ಸಿ.ಜಿ.ಕೃಷ್ಣಸ್ವಾಮಿ ಜನ್ಮ ದಿನವಾದ ಜೂನ್ 27 ರಂದು ಕರ್ನಾಟಕದ ಪ್ರತಿ ಜಿಲ್ಲೆಯ ಒಬ್ಬ ರಂಗಕರ್ಮಿಗೆ ಈ ಪ್ರಶಸ್ತಿ ನೀಡಲಾಗುವುದು. ಕೊಡಗು ಜಿಲ್ಲೆಯಿಂದ ಈ ಬಾರಿ ಶ್ರೀಧರ್ ರವರ ಹೆಸರನ್ನು ಅವರ ರಂಗಭೂಮಿಯಲ್ಲಿನ ಈವರೆಗಿನ ಸಾಧನೆಯನ್ನು ಪರಿಗಣಿಸಿ ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರು ಸೂಚಿಸಿದ್ದರು.
ಶ್ರೀಧರ್ ನೆಲ್ಲಿತ್ತಾಯ 1986 ರಲ್ಲಿ ರಂಗಭೂಮಿ ಪ್ರವೇಶ ಮಾಡಿ ಪೊನ್ನಂಪೇಟೆಯ "ಸೃಷ್ಟಿ" ತಂಡದಲ್ಲಿ ಬಾಲನಟನಾಗಿ ಸೇರಿ ನಂತರ ಶಿಕ್ಷಣ ಮುಗಿದ ಮೇಲೆ ಮಕ್ಕಳ ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ರಂಗಭೂಮಿ ಸಂಘಟನೆಗೆ ಒತ್ತು ನೀಡಿ ಕೊಡಗಿನ ರಂಗಭೂಮಿ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದಾರೆ. 1987 ರಲ್ಲಿ ಹಾಸನದಲ್ಲಿ ಬಾಲನಟ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡರು ನವೋದಯ ಬಾಲ ಕಲಾ ಸಂಘವನ್ನು ಗೋಣಿಕೊಪ್ಪ ಮತ್ತು ಪೊನ್ನಂಪೇಟೆಯಲ್ಲಿ ಆರಂಭಿಸಿ, ಹೆಸರಾಂತ ಬರಹಗಾರರಾದ ಬಿ.ವಿ ಕಾರಂತ , ಪ್ರಸನ್ನ, ನಾ ಶ್ರೀನಿವಾಸ್ ಅವರುಗಳ ಸೇರಿದಂತೆ ಐದು ನಾಟಕಗಳನ್ನು ನಿರ್ದೇಶಿಸಿ ರಾಜ್ಯದೆಲ್ಲೆಡೆ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ರಾಜ್ಯದಾದ್ಯಂತ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮೊದಲ ಹಾಗು ದ್ವಿತೀಯ ಸ್ಥಾನಗಳನ್ನೇ ಪಡೆಯುತ್ತಿದ್ದರೆನ್ನುವುದು ಅಂದಿನ ಕಾಲಕ್ಕೆ ಶ್ರೇಷ್ಠ ಸಾಧನೆಯೇ ಹೌದು. ರಾಜ್ಯ ಪತ್ರಕರ್ತರ ಸಂಘದಿಂದ ಡಿ.ವಿ.ಜಿ ಪ್ರಶಸ್ತಿ ಹಾಗು ಹಲವಾರು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಸ್ತುತ ಚಾನಲ್ ಕೂರ್ಗ್ ಸೇವಾ ಘಟಕವನ್ನಾರಂಭಿಸಿದ್ದು ತಮ್ಮದೇ ಆದ ಒಂದು ತಂಡವನ್ನು ಕಟ್ಟುವ ಮೂಲಕ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸ್ವಂತ ಅ?ಯಂಬುಲನ್ಸ್ ನಲ್ಲಿ ಧ್ವನಿವರ್ಧಕ ಅಳವಡಿಸುವ ಮುಖಾಂತರ ಕೊಡಗಿನಾದ್ಯಂತ ಕೊರೋನಾ ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಧ್ವನಿಸುರುಳಿ ತಯಾರಿಸಿ ಜಾಗೃತಿ ಕಾರ್ಯಕ್ರಮ ನಡೆಸಿದ್ದಲ್ಲದೆ, ವರ್ತಕರು ಕೊರೊನಾ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿದ್ದ ಸಮಯದಲ್ಲಿ, ಕಡಿಮೆ ಬೆಲೆಗೆ ತರಕಾರಿ ಉತ್ಪನ್ನಗಳು ಜನರಿಗೆ ದೊರಕಿಸುವ ಸಲುವಾಗಿ ತರಕಾರಿ ಮಳಿಗೆಗಳನ್ನು ಆರಂಭಿಸಿ ಕೈಗೆಟುಕುವ ದರದಲ್ಲಿ ತರಕಾರಿಯನ್ನು ಒದಗಿಸುವ ಮೂಲಕ ಸೇವಾ ಕಾರ್ಯ ನಡೆಸಿದ್ದರು. ಇದೀಗ ಕೊರೋನಾ ಹರಡದಂತಿರಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಆದೇಶ ನೀಡಿದ್ದು , ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಧರ್ ನೆಲ್ಲಿತಾಯನವರು ತಮ್ಮದೇ ಕೂರ್ಗ್ ಕೇರ್ ಮಾಸ್ಕ್ ತಯಾರಿಕಾ ಘಟಕವನ್ನು ಹಾಗು ಸರಬರಾಜನ್ನು ಆರಂಭಿಸಿದ್ದು, ಕಚ್ಚಾವಸ್ತುಗಳನ್ನು ತರಿಸಿ ಮಾಸ್ಕ್ ತಯಾರಿಸುವುದರೊಂದಿಗೆ, ಜನರಿಗೆ ಜಿಲ್ಲೆಯಾದ್ಯಂತ ಕಡಿಮೆ ಬೆಲೆಗೆ ಮಾಸ್ಕ್ ದೊರಕುವಂತೆ ಕೂರ್ಗ್ ಕೇರ್ ನಿಂದ ಸಹಾಯ ಹಸ್ತ ಚಾಚಿದ್ದಾರೆ.
ಪತ್ರಿಕೋದ್ಯಮ ಹಾಗು ದೃಶ್ಯಮಾಧ್ಯಮಕ್ಕೆ ಕರುನಾಡಿಗೆ ನೂರಾರು ಪತ್ರಕರ್ತರನ್ನು ಹಾಗು ಮಾಧ್ಯಮದವರನ್ನು ತಮ್ಮ ಗರಡಿಯಿಂದ ತಯಾರುಗೊಳಿಸಿ ನೀಡಿದ್ದು ಪ್ರಸ್ತುತ ಜಿಲ್ಲಾ, ರಾಜ್ಯ ಮಟ್ಟದ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳಲ್ಲಿ ಇವರ ಗರಡಿಯಿಂದ ಪಳಗಿದ ಹಲವರು ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕೆಯ ಮುಖಾಂತರ ಸುದ್ದಿಗಳನ್ನು ಜನರ ಮನೆ ಮನೆಗೆ ತಲುಪಿಸುವುದು ಇವರ ಜನಸೇವೆಗೆ ಮತ್ತೊಂದು ಗರಿ ಹೀಗೆ ಹತ್ತು ಹಲವು ಕೆಲಸ ಕಾರ್ಯ, ಸಮಾಜ ಸೇವೆಯನ್ನು ಯಾವುದೇ ಆಸೆ ಆಕಾಂಕ್ಷೆಗಳನ್ನು ಬಯಸದೆ ಮಾಡುತ್ತಿರುವುದು ಹೆಮ್ಮೆಯ ಹಾಗು ಶ್ಲಾಘನೀಯ ಕಾರ್ಯವಾಗಿದೆ.
ಇವರಿಗೆ 2020 ನೇ ಸಾಲಿನ " ಪ್ರತಿಷ್ಠಿತ ಸಿ.ಜಿ.ಕೆ. ಪ್ರಶಸ್ತಿ " ಸಂದಿದ್ದು. ಖ್ಯಾತ ರಂಗಭೂಮಿ ನಿರ್ದೇಶಕ ದಿವಂಗತ ಸಿ.ಜಿ.ಕೃಷ್ಣಸ್ವಾಮಿ ಜನ್ಮ ದಿನವಾದ ಜೂನ್ 27 ರಂದು ಶ್ರೀಧರ್ ನೆಲ್ಲಿತಾಯನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಭೂಮಿ ಪ್ರತಿಷ್ಠಾನದ ಸಂಚಾಲಕಿ ಅನಿತಾ ಕಾರ್ಯಪ್ಪನವರು ಮಾಹಿತಿ ನೀಡಿರುತ್ತಾರೆ.

No comments
Post a Comment