ನ್ಯೂಸ್ ಬ್ಯುರೋ (www.timesofcoorg.in): ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿರುವ CAA NRC ಕುರಿತು ಮೋದಿ - ಅಮಿತ್ ಷಾ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹೊರದೇಶಗಳಲ್ಲಿ ದೌರ್ಜನ್ಯಕ್ಕೊಳಗಾದ ಜನರಿಗೆ ಭಾರತದ ಪೌರತ್ವ ಕೊಡುವುದಕ್ಕಾಗಲೀ, ಇಲ್ಲಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಅವರನ್ನು ಈ ದೇಶದ ಪ್ರಜೆಗಳಾಗಿಸುವುದಕ್ಕಾಗಲೀ ನಮ್ಮ ವಿರೋಧವಿಲ್ಲ. ಹೀಗೆ ಪೌರತ್ವ ನೀಡುವುದರಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ನಿಯಮ ಜಾರಿಗೊಳಿಸಲು ಹೊರಟಿರುವುದಕ್ಕಷ್ಟೇ ನಮ್ಮ ವಿರೋಧ. 2014 ಡಿಸೆಂಬರ್ 31ರ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಂ ಹೊರತಾದ ಧರ್ಮಗಳ ಜನರಿಗೆ ಪೌರತ್ವ ನೀಡುವುದೇನೋ ಸರಿ, ಆದರೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ಈ ದೇಶಗಳಿಂದ ಭಾರತಕ್ಕೆ ವಲಸೆ ಬಂದವರನ್ನು ಈ ಕಾಯ್ದೆಯಿಂದ ಹೊರಗಿಡಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
.ಸಂವಿಧಾನ ರಚನಾ ಸಮಿತಿಯ 289 ಜನ ಸದಸ್ಯರಲ್ಲಿ ಆರ್‌ಎಸ್‌ಎಸ್ ಸಂಘಪರಿವಾರದವರು ಇದ್ದರು. ಮನುಸ್ಮೃತಿ ಆಧಾರದ ಮೇಲೆ ಸಂವಿಧಾನ ರಚನೆಯಾಗಬೇಕೆಂಬುದು ಅವರ ಆಲೋಚನೆಯಾಗಿತ್ತು, ಅಂದು ಈ ಆಲೋಚನೆಗೆ ಅವಕಾಶ ಸಿಗಲಿಲ್ಲ ಹಾಗಾಗಿ ಇಂದು ಅದನ್ನು ಕಾಯ್ದೆ ರೂಪದಲ್ಲಿ ಜಾರಿಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಒಂದು ಕಾಯ್ದೆ ಸಂಸತ್ತಿನ ಬಹುಮತ ಗಳಿಸಿ ಕಾನೂನಾಗಿ ಜಾರಿಗೆ ಬರಲು ಸಿದ್ಧವಾದರೂ, ಆ ಕಾನೂನು ನ್ಯಾಯಸಮ್ಮತವಲ್ಲ ಎಂದೆನಿದರೆ ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ಅಸಹಕಾರ ತೋರಿ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದರು. ರವೀಂದ್ರನಾಥ್ ಠಾಗೋರ್ ಅವರು ಭಾರತ ಸರ್ವಧರ್ಮ ಸಹಿಷ್ಣು ದೇಶವಾಗಬೇಕು, ಮುಕ್ತವಾದ ಶಿಕ್ಷಣ ಮತ್ತು ಅಭಿವ್ಯಕ್ತಿಗೆ ಅವಕಾಶಗಳಿರಬೇಕು, ಇಲ್ಲಿನ ಪ್ರತಿ ಪ್ರಜೆ ಧೈರ್ಯದಿಂದ, ಸ್ವಾಭಿಮಾನದ ಬದುಕು ಬಾಳಬೇಕು ಎಂದು ಹೇಳಿದ್ದರು, ಆದರೆ ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರದೊಂದಿಗೆ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
SOURCE : NANU GAURI.COM

No comments
Post a Comment