ಹಸಿರು ಕರ್ನಾಟಕ ಆಂದೋಲನಕ್ಕೆ ಚಾಲನೆ

No comments

ಮಡಿಕೇರಿ ಅ.22 (TOC ನ್ಯೂಸ್):-ಅರಣ್ಯ ಇಲಾಖೆ ವತಿಯಿಂದ ಹಸಿರು ಕರ್ನಾಟಕ ಅಭಿಯಾನದ ಪ್ರಯುಕ್ತ ‘ಅರಣ್ಯ ಉಳಿಸಿ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಂದ ಪರಿಸರ ಜಾಥಕ್ಕೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮ್‍ಕುಮಾರ್ ಅವರು ಮಂಗಳವಾರ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‍ಗಳ ಆಶ್ರಯದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಅರಣ್ಯ, ವನ್ಯ ಜೀವಿಗಳು ಮತ್ತು ಪರಿಸರ ಸಂರಕ್ಷಣೆಯ ಕುರಿತ ಭಿತ್ತಿ ಪತ್ರಗಳನ್ನು ಹಿಡಿದು ಜನರಿಗೆ ಪರಿಸರದ ಕುರಿತು ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಯಿರಿ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ಉಸಿರು ಜಲವೇ ಜೀವಜಲ, ಅರಣ್ಯ ಮರ್ದನ, ಮಾನವ ರೋದನ ಎಂಬ ಘೋಷಣೆಯ ಮೂಲಕ ಜಾಗೃತಿ ಮೂಡಿಸಿದರು.


ವಿದ್ಯಾರ್ಥಿಗಳಿಗೆ ಮನೆಯಿಂದಲೇ ಪರಿಸರದ ಕುರಿತ ಜಾಗೃತಿ ಮೂಡಿಸಬೇಕಾಗಿದೆ. ಮನೆಯಲ್ಲಿ ಗಾಜಿನ ವಸ್ತುಗಳನ್ನು ಬಳಸುವುದರ ಮೂಲಕ ಪ್ಲಾಸ್ಟಿಕ್ ತ್ಯಜಿಸುವ ಕಾರ್ಯ ಮಾಡಬೇಕಿದೆ. ಎಲ್ಲರೂ ಪರಿಸರ ಉಳಿಸಲು ಕೈಜೋಡಿಸಬೇಕಾಗಿದೆ. ಪರಿಸರವನ್ನು ಸ್ವಚ್ಚವಾಗಿಡುವುದರ ಮೂಲಕ ಅರಣ್ಯ ಸಂರಕ್ಷಿಸಬಹುದು ಎಂದು ಅವರು ಹೇಳಿದರು.

ಪರಿಸರ ಅಧಿಕಾರಿ ಗಣೇಶನ್ ಅವರು ಮಾತನಾಡಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬಹುದು. ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಏಕಕಾಲದಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ತಡೆಗಟ್ಟಬೇಕು ಎಂದು ಅವರು ಹೇಳಿದರು.

ಮಕ್ಕಳಿಗೆ ಗಿಡ ಕೊಡುವುದರ ಜೊತೆಗೆ ಮಕ್ಕಳು ಪರಿಸರವನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸಬೇಕು. ಅಂತರ್ಜಲನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಅಂಬಿ ಕಾರ್ಯಪ್ಪ ಅವರು ಮಾತನಾಡಿ ಹಸಿರು ಕರ್ನಾಟಕ ಆಂದೋಲನ ಅಂಗವಾಗಿ ಸಸಿ ನೆಡುವ ಕಾರ್ಯವನ್ನು ಆಯೋಜಿಸಲಾಗಿದ್ದು ಇದು ಒಂದು ಉತ್ತಮ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಪರಿಸರದ ಕುರಿತ ಜಾಗೃತಿ ಮೂಡಿಸುವಂತಾಗಬೇಕು ಎಂದರು. 
ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದರ ಮೂಲಕ ಪರಿಸರವನ್ನು ಸ್ವಚ್ಚವಾಗಿಡೋಣ, ಪರಿಸರದಲ್ಲಿ ಹೆಚ್ಚು ಮರ ಗಿಡಗಳನ್ನು ಬೆಳೆಸೋಣ ಎಂದು ಅವರು ಹೇಳಿದರು.




ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಆಂದೋಲನದ ಜಲ್ಲಾ ಸಂಯೋಜಕರಾದ ಟಿ.ಜಿ.ಪ್ರೇಮ್ ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೋಬ್ಬರೂ ಗಿಡ ಮರ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಬೇಕು ಎಂದು ಅವರು ಹೇಳಿದರು.
ಟಿ.ಜಿ.ಪ್ರೇಮ್‍ಕುಮಾರ್ ಅವರು ಹಸಿರು ಕರ್ನಾಟಕ ಆಂದೋಲನದ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಮೂಹಿಕವಾಗಿ ಗಿಡ ನೆಡುವ ಕಾರ್ಯಕ್ರಮವು ನಡೆಯಿತು. ಹಾಗೆಯೇ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಮೂಹಿಕ ಗಿಡ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷರಾದ ಸತೀಶ್, ಜಾನಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎನ್ ಗಾಯಿತ್ರಿ, ಮತ್ತಿತರರು ಪಾಲ್ಗೊಂಡಿದ್ದರು. ಟಿ.ಜಿ. ಪ್ರೇಮ್‍ಕುಮಾರ್ ಸ್ವಾಗತಿಸಿ, ವಂದಿಸಿದರು.

No comments

Post a Comment