ಬಿಜೆಪಿ ದುರಾಡಳಿತದ ವಿರುದ್ಧ ಆಕ್ರೋಶ. ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮೋದಿ ಸರಕಾರ : ಗುಣಶೇಖರ್.
ಸಿದ್ದಾಪುರ : ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹಾಕಿ ಜಾತಿ ರಾಜಕೀಯ ಕಾಲಹರಣ ಮಾಡುತ್ತಿರುವ ಬಿಜೆಪಿಯ ದುರಾಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಗುಣಶೇಖರ್ ಎಚ್ಚರಿಸಿದ್ದಾರೆ. ಸಿದ್ದಾಪುರದಲ್ಲಿ ನಡೆದ ಸಿಪಿಐ ಪಕ್ಷದ ರಾಷ್ಟ್ರೀಯ ಸಮ್ಮೇಳನ ನಡೆಸಲು ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಗುಣಶೇಖರ್ ಮಾತನಾಡಿ ಈ ದೇಶಕ್ಕೆ ಅಚ್ಚೇದಿನ್ ಬರುತ್ತದೆ ಎಂದು ನಂಬಿ ಜನಸಾಮಾನ್ಯರು ಬಿಜೆಪಿಗೆ ಮತ ಹಾಕಿದ್ದಾರೆ.ಜನಮತದಿಂದ ಗೆದ್ದ ಬಿಜೆಪಿ ಜನಸಾಮಾನ್ಯರ ವಿರುದ್ಧವಾಗಿಯೇ ನಡೆಯುತ್ತಿದೆ.ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ನೋಟು ಅಮಾನೀಕರಣ, ಜಿಎಸ್ ಟಿ, ರೈತ, ಕಾರ್ಮಿಕ ವಿರೋಧಿ ನೀತಿ,ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ,ನಿರುದ್ಯೋಗ ಸಮಸ್ಯೆ ಸೇರಿದಂತೆ ಹಲವಾರು ಸಂಕಷ್ಟವನ್ನು ಎದುರಿಸುತ್ತಿರುವ ದೇಶದ ಜನರು ಬಿಜೆಪಿ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಪ್ಪು ಹಣ ತಂದು ಕೊಡುವುದಾಗಿ ಸುಳ್ಳು ಹೇಳಿದ ಬಿಜೆಪಿ ಇದೀಗ ಭ್ರಷ್ಟಾಚಾರ ಆರೋಪದಲ್ಲಿ ನಿಂತಿದೆ.ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ನಿರ್ವಹಿಸುತ್ತಿರುವ ಬಿಜೆಪಿ ಬಹುತೇಕ ಇಲಾಖೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ.ಜನ ಸಾಮಾನ್ಯರಿಗೆ ನೆರವಾಗಬೇಕಾಗಿದ್ದ ಸರಕಾರಗಳು ಅಭಿವೃದ್ಧಿ ಕಾಳಜಿ ಬಗ್ಗೆ ಚಿಂತಿಸದೆ ಕೋಮು ಜಾತಿ ರಾಜಕೀಯ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಅಮ್ಜದ್ ಮಾತನಾಡಿ ಜನಪರ ಚಳವಳಿ ಮೂಲಕ 97 ವರ್ಷ ಪೂರೈಸಿರುವ ಸಿಪಿಐ ಪಕ್ಷದ ಸಂಸ್ಥಾಪನಾ ದಿನ ಅಂಗವಾಗಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸಲು ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದ್ದು ವಿಜಯವಾಡದಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮುಂದಾಗಬೇಕೆಂದು ಮನವಿ ಮಾಡಿದ ಅವರು ಕಾಂಗ್ರೆಸ್ ಆಡಳಿತದಿಂದ ಬೇಸತ್ತ ಜನ ಪರ್ಯಾಯವಾಗಿ ಬಿಜೆಪಿಗೆ ಅಧಿಕಾರ ಕೊಟ್ಟರು.ಬಿಜೆಪಿ 7ವರ್ಷಗಳ ಆಡಳಿತದ ಅವಧಿಯಲ್ಲಿ ಜನರಿಗೆ ದ್ರೋಹ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಜನ ವಿರೋಧಿ ನೀತಿಗಳನ್ನು ತರುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಸೋಮಪ್ಪ ಮಾತನಾಡಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರುಗಳು ಸಲಹೆ ನೀಡಿದ್ದು ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದ ಅವರು ಸಿಪಿಐ ರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲೆಯಲ್ಲೂ ಸಮ್ಮೇಳನ ನಡೆಸಲು ಚರ್ಚಿಸಲಾಗಿದೆ ಎಂದರು.ಸಿಪಿಐ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯಕೆ .ವಿ ಸುನೀಲ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಬಿಜೆಪಿಯ ಜನಪ್ರತಿನಿಧಿಗಳು ರಾಜಕೀಯ ಕಾಲಹರಣ ಮಾಡುತ್ತಿದ್ದಾರೆ.ಬೆಳೆಗಾರರು ಕಾರ್ಮಿಕರ ಗಂಭೀರ ಸಮಸ್ಯೆಗಳಿದ್ದರೂ ಜನರ ಪರವಾಗಿ ಸ್ಪಂದಿಸಬೇಕಾದ ಸರ್ಕಾರಗಳು ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಹೇಳಿದರು.ಈ ಸಂದರ್ಭ ಎಐಟಿಯುಸಿ ಉಪಾಧ್ಯಕ್ಷ ಮಣಿ,ಪ್ರಮುಖರಾದ ಕೃಷ್ಣ ಕರಡಿಗೋಡು,ಸೀತಾರಾಂ, ರಮೇಶ್ ,ಕುಮಾರ್, ಪ್ರಕಾಶ್,ಆನಂದ್ ಸೇರಿದಂತೆ ಮತ್ತಿತರರು ಇದ್ದರು.
No comments
Post a Comment