ಪರಿಸರ ಸ್ನೇಹಿ ಅರಿಶಿಣ ಗಣೇಶೋತ್ಸವ ಆಚರಣೆ ಜಾಗೃತಿ ಅಭಿಯಾನ

No comments

ಮಡಿಕೇರಿ ಆ.30(web@timesofcoorg):-ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್,  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಶ್ರಯದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಪೂರ್ವಭಾವಿಯಾಗಿ ಸೋಮವಾರ ನಗರದ ಡಿಡಿಪಿಐ ಕಚೇರಿಯಲ್ಲಿ 'ನಮ್ಮ ನಡೆ ಹಸಿರೆಡೆಗೆ' 'ಗ್ರೋ ಗ್ರೀನ್' ಅಭಿಯಾನದಡಿ ಪರಿಸರ ಸ್ನೇಹಿ ಅರಿಶಿಣ ಗಣೇಶೋತ್ಸವ ಆಚರಣೆ ಜಾಗೃತಿ ಅಭಿಯಾನದ ಜನಜಾಗೃತಿ ಮೂಡಿಸಲಾಯಿತು. 

ಅರಿಶಿಣ ಗಣೇಶೋತ್ಸವ ಆಚರಣೆ ಕುರಿತು ಮಾಹಿತಿ ನೀಡಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿμÁ್ಠಪಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಅರಿಶಿಣ ಮತ್ತಿತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಅರಿಶಿಣ ಗಣೇಶ ಮೂರ್ತಿ ತಯಾರಿಸಬೇಕಿದೆ ಎಂದರು. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ರಾಜ್ಯದಲ್ಲಿ 10 ಲಕ್ಷ ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಅಭಿಯಾನದ ಮೂಲಕ ವಿಶ್ವ ದಾಖಲೆಯ ಪ್ರಯತ್ನ ಮಾಡಲಾಗಿದೆ. ಈ ಅಭಿಯಾನಕ್ಕೆ ಜಿಲ್ಲೆಯ ಶಾಲಾ-ಕಾಲೇಜಿನ ಅಧ್ಯಾಪಕ ವೃಂದ, ಸ್ವಯಂ ಸೇವಕರು ಹಾಗೂ ನಾಗರಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ಈ ಬಾರಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿಣದಿಂದ ಗಣೇಶ ಮೂರ್ತಿಯನ್ನು ಮನೆಯಲ್ಲೇ ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿಸುವ ಕುರಿತು ಶಿಕ್ಷಕರು ಜನಜಾಗೃತಿ ಮೂಡಿಸಬೇಕು ಎಂದು ಗಣೇಶನ್ ಮನವಿ ಮಾಡಿದರು.

ಅರಿಶಿಣ ಗಣೇಶ ಅಭಿಯಾನದ ಭಿತ್ತಿಪತ್ರ ಮತ್ತು ಸ್ಟಿಕ್ಕರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಿಡಿಪಿಐ ಎ.ಶ್ರೀಧರನ್, ಶಾಲೆಗಳಲ್ಲಿ ಶಿಕ್ಷಕರು ಇಕೋ ಕ್ಲಬ್, ಎನ್‍ಎಸ್‍ಎಸ್ ಘಟಕಗಳು, ಶಾಲಾಭಿವೃದ್ಧಿ ಸಮಿತಿಗಳ ವತಿಯಿಂದ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಲು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಅರಿಶಿಣ ಗಣೇಶೋತ್ಸವ ಆಚರಣೆ ಜಾಗೃತಿ ಕುರಿತು ಶಾಲಾ-ಕಾಲೇಜಿನ ಇಕೋ ಕ್ಲಬ್ ಮತ್ತು ಎನ್.ಎಸ್.ಎಸ್.ಘಟಕಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.

ಕೊಡಗಿನ ಶಾಲೆಗಳಲ್ಲಿ ಪರಿಸರ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿರುವ ಬಗ್ಗೆ ಶ್ಲಾಘಿಸಿದರು. ಶಿಕ್ಷಕರು ಮಕ್ಕಳಲ್ಲಿ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಕ್ರಿಯಾಶೀಲತೆ ಬೆಳೆಸಬೇಕು ಎಂದರು.

ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಹಾಗೂ ಆಚರಣೆ ಕುರಿತು ಮಾಹಿತಿ ನೀಡಿ, ಅರಿಶಿಣ ಗಣೇಶ ಅಭಿಯಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಅಭಿಯಾನದ ಸಂಚಾಲಕರೂ ಆದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದರೊಂದಿಗೆ ಅವರು ಭವಿಷ್ಯದಲ್ಲಿ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಕೊಡಗಿನಲ್ಲಿ ಕಳೆದ 12 ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಶಿಕ್ಷಣ ಇಲಾಖೆಗಳ ವತಿಯಿಂದ ಶಾಲೆಗಳ ಇಕೋ ಕ್ಲಬ್ ಗಳ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಮೂಲಕ ಅವರನ್ನು ಭವಿಷ್ಯದಲ್ಲಿ ಪರಿಸರ ಸಂರಕ್ಷಕರಾಗಿ ರೂಪಿಸಲು ಈ ಅಭಿಯಾನವನ್ನು ಸಂಘಟಿಸಲಾಗುತ್ತಿದೆ ಎಂದರು.

       ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಪರಿಸರ ಸ್ನೇಹಿ ಜೊತೆಗೆ ‘ಆರೋಗ್ಯ ಸ್ನೇಹಿ’ ಅರಿಶಿಣ ಗಣೇಶೋತ್ಸವ ಆಚರಿಸಲು ಶಿಕ್ಷಕರು ಜಾಗೃತಿ ಮೂಡಿಸಲು ಮನವಿ ಮಾಡಲಾಗಿದೆ ಎಂದರು.

ಮಡಿಕೇರಿ ಬಿಇಒ ಎಚ್.ಟಿ.ಮಂಜುನಾಥ್, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಉಪ ಯೋಜನಾ ಸಮನ್ವಯಾಧಿಕಾರಿ ಎಂ..ಕೃಷ್ಣಪ್ಪ,  ಬಿ.ಆರ್.ಸಿ.ನಳಿನಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತ ಜಿಮ್ಮಿ ಸಿಕ್ವೇರಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್,

ಶಿಕ್ಷಕರ ಸಂಘಟನೆಗಳ ವಿವಿಧ ಘಟಕಗಳ ಪ್ರಮುಖರಾದ ಮನೋಹರ್ ನಾಯಕ್, ಸಿ.ಟಿ.ಸೋಮಶೇಖರ್,  ಎಚ್.ಎನ್.ಮಂಜುನಾಥ್, ಎಚ್.ಕೆ.ಕುಮಾರ್, ಮೋಹನ್ ಪೆರಾಜೆ, ಡಿ.ಎಂ.ರೇವತಿ, ವಿಲ್ಫ್ರೆಡ್ ಕ್ರಾಸ್ತಾ, ಎಚ್.ಆರ್.ರಾಜು, ಇಸಿಓ ಎಂ.ಎಚ್.ಹರೀಶ್ ಇತರರು ಇದ್ದರು. ಪರಿಸರ ಸ್ನೇಹಿ ಅರಿಶಿಣ ಗಣೇಶ ಆಚರಣೆ ಕುರಿತ ಭಿತ್ತಿಪತ್ರ ಮತ್ತು ಸ್ಟಿಕ್ಕರ್‍ಗಳನ್ನು ಶಾಲೆಗಳಿಗೆ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಶಿಕ್ಷಕರಿಗೆ ತಿಳಿಸಲಾಯಿತು.

No comments

Post a Comment