ಕೊಡಗು-ಕೇರಳ ಗಡಿ ಪ್ರದೇಶ ಕುಟ್ಟ ಗ್ರಾಮದ ಚೆಕ್‍ಪೋಸ್ಟ್ ಗೆ ಶಾಸಕರಾದ ಕೆ.ಜಿ.ಬೋಪಯ್ಯ ಭೇಟಿ - ಪರಿಶೀಲನೆ

No comments

  ಮಡಿಕೇರಿ ಆ.03(Times Of Coorg):-ಕೇರಳ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕುಟ್ಟ ಗ್ರಾಮದ ಚೆಕ್‍ಪೋಸ್ಟ್‍ಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.   

      ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರಿಂದ ಮಾಹಿತಿ ಪಡೆದ ಶಾಸಕರು, ಪ್ರತೀ ದಿನ ಕೇರಳ ಭಾಗದಿಂದ ಕುಟ್ಟ ಗಡಿ ಮಾರ್ಗದಲ್ಲಿ 40 ರಿಂದ 50 ವಾಹನಗಳು ಹಗಲು ವೇಳೆಯಲ್ಲಿ ಸಂಚಾರ ಮಾಡುತ್ತಿವೆ. ಈ ಹಿನ್ನೆಲೆ ಆರ್‍ಟಿಪಿಸಿಆರ್ ಪರೀಕ್ಷಿಸಿದ 72 ಗಂಟೆಯೊಳಗಿನ ನೆಗೆಟಿವ್ ವರದಿ ಸಲ್ಲಿಸಿದವರಿಗೆ ಮಾತ್ರ ಗಡಿ ಪ್ರವೇಶಿಸಲು ಅವಕಾಶ ಮಾಡಲಾಗುತ್ತಿದೆ ಎಂದರು. 

      ಜಿಲ್ಲೆಯ ಗಡಿ ಕುಟ್ಟ ಗ್ರಾಮ ವ್ಯಾಪ್ತಿಯ ತೋಟದ(ಎಸ್ಟೇಟ್) ಕೆಲಸಕ್ಕೆ ನೆರೆಯ ಕೇರಳ ರಾಜ್ಯದ ತೋಳ್ಪಟ್ಟಿ ಪ್ರಾಂತ್ಯದಿಂದ ನಡೆದುಕೊಂಡು ಕಾರ್ಮಿಕರು ಬರುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ತೋಟದ ತುರ್ತು ಕೆಲಸ ಇದ್ದಲ್ಲಿ, ಕಾರ್ಮಿಕರಿಗೆ ಅಗತ್ಯ ವಸತಿ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.       

      ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಬೇಕು. ಕೂಲಿ ಕೆಲಸಕ್ಕಾಗಿ ಪ್ರತೀ ದಿನ ಓಡಾಡುವುದನ್ನು ತಪ್ಪಿಸಬೇಕು. ಇದರಿಂದ ಕೋವಿಡ್-19 ಪ್ರಕರಣವನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಸ್ಥಳೀಯರು ಕೈಜೋಡಿಸುವಂತೆ ಕೆ.ಜಿ.ಬೋಪಯ್ಯ ಅವರು ಕೋರಿದರು.   

      ಕೇರಳ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಜಿಲ್ಲೆಯ ಗಡಿಭಾಗ ಕುಟ್ಟ, ಮಾಕುಟ್ಟ, ಕರಿಕೆ, ಸಂಪಾಜೆ ಚೆಕ್‍ಪೋಸ್ಟ್ ಮೂಲಕ ಕೇರಳದಿಂದ ಆಗಮಿಸುವವರ ಬಗ್ಗೆ ಎಚ್ಚರವಹಿಸಬೇಕು. ಯಾವುದೇ ಕಾರಣಕ್ಕೂ ಸುಖಾ ಸುಮ್ಮನೆ ಓಡಾಡುವುದು ತಪ್ಪಬೇಕು. ಕೋವಿಡ್-19 ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಸರ್ಕಾರದ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಕೆ.ಜಿ.ಬೋಪಯ್ಯ ಅವರು ಒತ್ತಿ ಹೇಳಿದರು. 

     ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19 ಮೂರನೇ ಅಲೆ ಕಂಡುಬರುತ್ತಿರುವ ಹಿನ್ನೆಲೆ, ರಾಜ್ಯದ ಗಡಿ ಜಿಲ್ಲೆಗಳಾದ ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಿಸುವ ಸಂಬಂಧ ಜಿಲ್ಲೆಯ ಗಡಿಭಾಗದ ಚೆಕ್‍ಪೋಸ್ಟ್‍ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಆದೇಶ ಹೊರಡಿಸಿದೆ. ಆ ದಿಸೆಯಲ್ಲಿ ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ, ಸಂಪಾಜೆ ಈ ನಾಲ್ಕು ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ವಾಹನಗಳನ್ನು ತಪಾಸಣೆ ಮಾಡದೆ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.  

      ಕೋವಿಡ್-19 ನಿಯಂತ್ರಣ ಲಸಿಕೆ ಪಡೆದಿದ್ದರೂ ಸಹ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ಪ್ರಮಾಣ ಪತ್ರ ನೀಡಿ ಪ್ರವೇಶ ಮಾಡಬೇಕುª ಎಂದು ಅವರು ಹೇಳಿದರು.  

     ಕೋವಿಡ್ 19 ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಾಗಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೋವಿಡ್ 19 ನಿಯಂತ್ರಿಸಲು ಬಿಗಿಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು. 

      ಜಿಲ್ಲೆಯ 4 ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.      ಕೋವಿಡ್-19 ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಹಕಾರ ನೀಡಿ, ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.   

      ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5 ರೊಳಗೆ ಇರುವುದರಿಂದ ರಾಜ್ಯ ಸರ್ಕಾರ ನಿರ್ದೇಶನಗಳನ್ನು  ಮುಂದುವರೆಸಿಕೊಂಡು ಹೋಗಬೇಕು. ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಹೆಚ್ಚು ಕಂಡುಬಂದಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರ ವಹಿಸಬೇಕು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.  

       ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭ ಹೊರತುಪಡಿಸಿ, ಯಾವುದೇ ಪ್ರವಾಸಿ ವಾಹನಗಳನ್ನು ಗಡಿ ಪ್ರದೇಶದಿಂದ ಒಳಗೆ ಪ್ರವೇಶಿಸಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.

     ಜಿಲ್ಲೆಯ ನಾಲ್ಕು ಚೆಕ್‍ಪೋಸ್ಟ್‍ಗಳಲ್ಲಿ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಗ್ರಾ.ಪಂ.ಸಿಬ್ಬಂದಿಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ನಿಯಂತ್ರಣ ಸಂಬಂಧ ಅಗತ್ಯ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಕೊಡಗು ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್-19 ಹೆಚ್ಚಳವಾಗುತ್ತಿರುವ ಹಿನ್ನೆಲೆ ಮತ್ತಷ್ಟು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದರು.   

      ಜಿ.ಪಂ.ಮಾಜಿ ಅಧ್ಯಕ್ಷರಾದ ಚೋಡುಮಾಡ ಶರೀನ್ ಸುಬ್ಬಯ್ಯ, ಕುಟ್ಟ ಗ್ರಾ.ಪಂ.ಉಪಾಧ್ಯಕ್ಷರಾದ ದಿವ್ಯ, ಸದಸ್ಯರಾದ ತೀತಿರ ಎಂ.ತೀರ್ಥ, ಮಣಿ, ಕರ್ಪಯ್ಯ, ಪ್ರಮುಖರಾದ ರಾಜು, ನವೀನ್, ಮಲ್ಲಂಡ ಮಧು ದೇವಯ್ಯ, ಕುಟ್ಟ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಂಜಪ್ಪ, ಚಂದ್ರಪ್ಪ, ಗ್ರಾ.ಪಂ.ಪಿಡಿಒ ಅನಿಲ್ ಕುಮಾರ್ ಇತರರು ಇದ್ದರು.

No comments

Post a Comment