ಕೋವಿಡ್ 3ನೇ ಅಲೆಯಿಂದ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್

No comments

ಮಡಿಕೇರಿ (web@timesofcoorg):-ಸಂಭಾವ್ಯ ಕೋವಿಡ್ 3ನೇ ಅಲೆ ಎದುರಿಸಲು ಸಲಹೆ, ಮಾರ್ಗದರ್ಶನ ನೀಡುವುದಕ್ಕೆ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ತಜ್ಞರ ಸಮಿತಿ ಸಭೆಯು ಬುಧವಾರ ನಡೆಯಿತು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕೋವಿಡ್ 3ನೇ ಅಲೆಯು ಅಕ್ಟೋಬರ್, ನವೆಂಬರ್ ತಿಂಗಳ ಅವಧಿಯಲ್ಲಿ ಬರಬಹುದು ಎಂದು ತಜ್ಞರ ಸಮಿತಿ ವರದಿಗಳು ಹೇಳುತ್ತಿವೆ. ಆ ದಿಸೆಯಲ್ಲಿ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯು ನಿಯಮಿತವಾಗಿ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತಕ್ಕೆ ಸಲಹೆ ಮಾರ್ಗದರ್ಶನ ನೀಡುವಂತೆ ಸಮಿತಿ ಸದಸ್ಯರಿಗೆ ನಿರ್ದೇಶನ ನೀಡಿದರು.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಾಧಿಕಾರಿಗಳು, ಕಾಲ ಕಾಲಕ್ಕೆ ಮಾಹಿತಿ ನೀಡುವುದರ ಜೊತೆಗೆ ಕೋವಿಡ್ 3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.   

ಜಿಲ್ಲಾ ಮಟ್ಟದ ಸಮಿತಿಯು ನಿರಂತರವಾಗಿ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಮಾಲೋಚನೆ ನಡೆಸಬೇಕಿದೆ. ಜೊತೆಗೆ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ಸಮಿತಿ ಸದಸ್ಯರು ಕೋವಿಡ್ 3ನೇ ಅಲೆ ಎದುರಿಸುವ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಬಗ್ಗೆ ಈಗಿನಿಂದಲೇ ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಕೋವಿಡ್ 3ನೇ ಅಲೆಯಿಂದ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕಿದೆ. ಜಿಲ್ಲೆಯ ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬರುವ ಗ್ರಾಮಗಳಲ್ಲಿ ವಿಶೇಷ ನಿಗಾವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  

ಜಿಲ್ಲೆಯ ಕೇರಳ ರಾಜ್ಯಕ್ಕೆ ಹೊಂದಿರುವ ಗ್ರಾಮಗಳ 18 ವರ್ಷ ಮೇಲ್ಪಟ್ಟ ಜನರಿಗೆ ಆದ್ಯತೆ ಮೇಲೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಸರ್ಕಾರ ಕೋವಿಡ್-19 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲು ಆದೇಶ ಹೊರಡಿಸಿದೆ ಎಂದರು.    

ಸಮಿತಿಯಲ್ಲಿ  ಸಾರ್ವಜನಿಕ ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ವಿಲೆನ್ಸ್ ಅಧಿಕಾರಿ, ಹಿರಿಯ ಶ್ವಾಸಕೋಶ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ, ಸೂಕ್ಷ್ಮಾಣು ಜೀವಿ, ಆಯುಷ್, ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಅವರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ ಎಂದು ಅವರು ಹೇಳಿದರು.

‘ಸಮುದಾಯ ಆರೋಗ್ಯ ಅಧಿಕಾರಿ ಡಾ.ಮಹೇಶ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಆಗಸ್ಟ್, 08 ರಿಂದ 17 ರವರೆಗೆ 34,754 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 589 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಕಳೆದ ಹತ್ತು ದಿನದಲ್ಲಿ ಪಾಸಿಟಿವಿಟಿ ದರವು 1.69 ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.’ 

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥರಾದ ಡಾ.ನಜೀಮ ಅವರು ಪ್ರತೀ ದಿನ 2,500 ಪರೀಕ್ಷೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್, ಮಕ್ಕಳ ತಜ್ಞರಾದ ಡಾ.ಪುರುಷೋತ್ತಮ, ಸ್ತ್ರೀರೋಗ ತಜ್ಞರಾದ ಡಾ.ಹರ್ಷ, ಆಯುಷ್ ಫಿಸಿಷಿಯೇನ್ ಅರುಣ್ ಅಶೂಟಿ, ಡಾ.ಪ್ರದೀಪ್ ಅವರು ಕೋವಿಡ್-19 3 ನೇ ಅಲೆ ಸಂಬಂಧ ಹಲವು ಮಾಹಿತಿ ನೀಡಿದರು.

No comments

Post a Comment