ನಾಗರಹೊಳೆ. ಚೊಟ್ಟೆಪಾರೆ ಹಾಡಿ ನಿವಾಸಿಗಳಿಗೆ ಕಿಟ್ ವಿತರಣೆ.
ಸಿದ್ದಾಪುರ :ಬೆಂಗಳೂರಿನ ಯು ಎಸ್ ಟಿ ಸಂಸ್ಥೆ , ಬನವಾಸಿ ಕನ್ನಡಿಗರ ತಂಡ,ಸ್ವಸ್ಥ ರಂಗತಂಡದಿಂದ ನಮ್ಮ ಕೊಡಗು ತಂಡದ ನೇತ್ರತ್ವದಲ್ಲಿ ನಾಗರಹೊಳೆ ಸುತ್ತಮುತ್ತಲ ಹಾಡಿ ಹಾಗೂ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿಯ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಆದಿವಾಸಿ ಸಂಘಟನೆಯ ಮುಖಂಡ ಜೆ. ಕೆ ಅಪ್ಪಾಜಿ ಮಾತನಾಡಿ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿ, ದಿಡ್ಡಳ್ಳಿ ಹಾಡಿ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯ ಹಾಡಿಗಳಲ್ಲಿರುವ ನೂರ ಐವತ್ತು ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಸ್ಯಾನಿಟೈಸರ್, ಮಾಸ್ಕ್, ಬೆಡ್ ಶೀಟ್,ಸ್ವೆಟರ್ , ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದ್ದಾರೆ.ಕೋವಿಡ್ ಲಾಕ್ ಡೌನ್ ನಿಂದ ಕೂಲಿ ಕೆಲಸವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಆದಿವಾಸಿ ಕುಟುಂಬಗಳ ಬಗ್ಗೆ ಮಾಹಿತಿ ತಿಳಿದು ಬೆಂಗಳೂರಿನಿಂದ ಹಾಡಿಗೆ ಬಂದು ಕಿಟ್ ಗಳನ್ನು ನೀಡಿರುವ ಸಂಘಟನೆ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡದ ಜೈಕಿರಣ್ ಮಾತನಾಡಿ ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸಮಾಜಸೇವಾ ಸಂಘಟನೆಗಳ ಸಹಕಾರದಿಂದ ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗಿದೆ.ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವುದನ್ನು ಅರಿತು ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ದಿಂದ ಇದುವರೆಗೂ ಸಾವಿರಕ್ಕೂ ಹೆಚ್ಚು ಮಂದಿಗೆ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು. ಬೆಂಗಳೂರಿನ ಸ್ವಸ್ಥ ರಂಗ ತಂಡದ ಶಮಂತ್ ಮಾತನಾಡಿ ಕೊಡಗು ಜಿಲ್ಲೆಯ ಸಂತ್ರಸ್ತ ಕುಟುಂಬಗಳು ಲಾಕ್ ಡೌನ್ ಸಂಕಷ್ಟದಲ್ಲಿರುವುದನ್ನು ಅರಿತು ಯು.ಎಸ್ ಟಿ ಸಂಸ್ಥೆ ಆಹಾರ ಪದಾರ್ಥಗಳ ಕಿಟ್ ಗಳನ್ನು ನೀಡಿದ್ದಾರೆ.ಹಲವಾರು ದಾನಿಗಳು ಕೈಜೋಡಿಸಿದ್ದಾರೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಕೊಡಗು ಜಿಲ್ಲೆಯನ್ನ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಬರುವವರು ಪ್ರವಾಸಿಗರಿಗಷ್ಟೇ ಸೀಮಿತರಾಗದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಹಾಯ ಮಾಡಿದಲ್ಲಿ ಸಂತ್ರಸ್ತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.ಸೇವಾ ಮನೋಭಾವದಿಂದ ಎಲ್ಲರೂ ಕೈ ಜೋಡಿಸಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭ ಬನವಾಸಿ ಕನ್ನಡಿಗರ ತಂಡದ ಕಿರಣ್ ಮಾಯಿ ಶರ್ಮಾ, ನಮ್ಮ ಕೊಡಗು ತಂಡದ ಲೋಹಿತ್,ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ನಿರ್ವಾಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು
No comments
Post a Comment