ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ : ಮಡಿಕೇರಿ ಪೋಲಿಸರಿಂದ ಯಶಸ್ವಿ ಕಾರ್ಯಾಚರಣೆ

No comments

ಮಡಿಕೇರಿ (Times Of Coorg.in) ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಜಾಗದಲ್ಲಿ ಸಿ.ಆರ್.ತಿಮ್ಮಯ್ಯ ಎಂಬುವವರು ದಿನಾಂಕ 30-10-2020 ರಂದು ತಮ್ಮ ಬಾಪ್ತು ಟಿವಿಎಸ್ ಅಪಾಚೆ ಮೋಟಾರು ಸೈಕಲನ್ನು ನಿಲ್ಲಿಸಿದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಈ ಸಂಬಂಧ ಸಿ.ಆರ್.ತಿಮ್ಮಯ್ಯರವರು ನೀಡಿದ ದೂರಿನ ಮೇರೆಗೆ  ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆಗಾಗಿ ಮಡಿಕೇರಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಮಡಿಕೇರಿಯ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಕಳ್ಳತನವಾಗಿದ್ದ ಟಿ.ವಿ.ಎಸ್. ಆಪಾಚೆ ಮೋಟಾರು ಸೈಕಲನ್ನು ಸೇರಿದಂತೆ ರಾಜ್ಯದ ಬೆಂಗಳೂರು ಹಾಗೂ ಮಂಡ್ಯ ನಗರದಲ್ಲಿ ಮತ್ತು ಆಂತರ್ ರಾಜ್ಯವಾದ ಕೇರಳದ ಕಣ್ಣೂರಿನಲ್ಲಿ ಕಳುವಾಗಿದ್ದ ಒಟ್ಟು 5 ವಿವಿಧ ಸಂಸ್ಥೆಯ ಮೋಟಾರು ಸೈಕಲ್ ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದು, ವಶಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ 2,25,000/- ರೂ.ಗಳಾಗಿರುತ್ತದೆ.  ಸದರಿ ಮೊಟಾರು ಸೈಕಲ್ ಗಳನ್ನು ಕಳ್ಳತನ ಮಾಡಿದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದುಕೊಂಡು ಬಾಲ ಅಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಕಾರ್ಯಾಚರಣೆಯನ್ನು ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ದಿನೇಶ್ ಕುಮಾರ್ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಕಾರ್ಯಾಚರಣೆ ಯಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಮಡಿಕೇರಿ ನಗರ ಪೊಲೀಸ್ ಠಾಣಾ ಎಎಸ್ಐರವರಾದ ಗೋವಿಂದ ರಾಜು, ಕೆ.ಜಿ. ಹೊನ್ನಪ್ಪ,  ಮೊಹಮ್ಮದ್ ಅಕ್ಮಲ್, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ. ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ. ನಂದಕುಮಾರ್, ಎ.ಆರ್. ಮನು ಮತ್ತು ಭವಾನಿ ರವರುಗಗಳು ಪಾಲ್ಗೊಂಡಿದ್ದರು.  ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯವನ್ನು ಪ್ರಶಂಶಿಸಲಾಗಿದೆ. 


     ಇತ್ತೀಚೆಗೆ ವಾಹನ ಕಳ್ಳರು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಯಾವುದೇ ದ್ವಿ ಚಕ್ರ ವಾಹನದ ಲಾಕನ್ನು ನಕಲಿ ಕೀ ಬಳಸಿ ವಾಹನಗಳನ್ನು ಕಳವು ಮಾಡುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಲು ಕೋರಲಾಗಿದೆ.

No comments

Post a Comment