ಕಡಮ್ಮಕಲ್ಲು ಎಸ್ಟೇಟ್... ಹೌದು ಇತ್ತೀಚಿನ ಕೊಡಗು ಜಿಲ್ಲೆಯಲ್ಲಿ ಮಾತ್ರವಲ್ಲದೆ ಕರ್ನಾಟಕದ್ಯಂತ ಹೆಸುರುವಾಸಿಯಾದ ಕಾದಂಬರಿ. ಈ ಕಾದಂಬರಿಯ ಲೇಖಕರ ಕುರಿತು ಸಣ್ಣ ಮಾಹಿತಿ - ಹೆಸರು ನೌಶಾದ್ ಜನ್ನತ್ತ್, ಹುಟ್ಟೂರು ಮಡಿಕೇರಿ ಬಳಿಯ ಬೋಯಿಕೇರಿ, ಪಿ. ಯು. ಸಿ. ನಂತರದಲ್ಲಿ ಓದುವುದನ್ನು ಬಿಟ್ಟು ಬದುಕಿನ ಸಲುವಾಗಿ ವ್ಯಾಪಾರ ಆರಂಭ ಮಾಡಿ ನಂತರ ದೂರಶಿಕ್ಷಣದಲ್ಲಿ ಬಿ. ಎ. ಪದವಿ ಪೂರ್ಣಗೊಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಸ್ನೇಹಿತರ ಬಳಗವನ್ನು ಕಟ್ಟಿ, ನಮ್ಮ ಕೊಡಗು ತಂಡ ಎಂಬ ಹೆಸರಿನಡಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಕೂಡ ಆಗಿದ್ದಾರೆ. ಸದ್ಯ ಕುಶಾಲನಗರದ ನಿವಾಸಿಯಾದ ಇವರು ಗಡಿಭಾಗ ಕೊಪ್ಪದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.
ಹಲವಾರು ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದು ಕೆಲವೊಂದು ಬಾರಿ ಪತ್ರಿಕೆಗಳಿಗೂ ಲೇಖನ ಬರೆಯುತ್ತಿದ್ದಾರೆ.
ಸಮಾಜ ಸೇವೆ ಮತ್ತು ಸೇವೆಯ ಹೆಸರಿನಲ್ಲಿ ಜಲಪ್ರಳಯದ ಪ್ರತಿ ಮಜಲುಗಳನ್ನು ಹತ್ತಿರದಿಂದ ನೋಡಿದ್ದ ಇವರು ಆ ಅನುಭವಗಳನ್ನು ಕೃತಿಯಾಗಿ ಹೊರತರಬೇಕು ಎಂದು ಅಂದುಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಆ ಕಥೆ ಪುಸ್ತಕದ ಹಳೆಯ ಮೇಲೆ ಬಾಕಿಯುಳಿದಿರುವಾಗಲೇ 1965 ನೇ ಇಸವಿಯ ಆಜುಬಾಜಿನಲ್ಲಿ ಕೇರಳ ಮೂಲದ ಒಂದು ಬಡ ಕುಟುಂಬ, ಬದುಕು ಕಟ್ಟಿಕೊಳ್ಳುವ ಸಲುವಾಗಿ ಕೊಡಗಿನ ಗಡಿಭಾಗವಾದ ಕಡಮ್ಮಕಲ್ಲು ಎಸ್ಟೇಟ್ ಗೆ ಬಂದು ನೆಲೆಗೊಳ್ಳುತ್ತಾರೆ. ಆ ನಂತರದಲ್ಲಿ ಆ ಕುಟುಂಬ ಅನುಭವಿಸುವ ನೋವು-ನಲಿವು, ಸುಖ-ದುಃಖಗಳನ್ನೊಳಗೊಂಡ ಸಂಪೂರ್ಣ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಅವರು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ.
ಹೆಣ್ಣು, ಹೊನ್ನು, ಮಣ್ಣು ಈ ಕಾದಂಬರಿಯ ವಸ್ತುಗಳು. ಈ ಮೂರಕ್ಕಾಗಿ ಜನರು ಯಾವ ರೀತಿ ಪರದಾಡುತ್ತಾರೆ, ಯಾವ ರೀತಿಯಲ್ಲಿ ಯಾರು ಯಾರಿಗೆ ಟೋಪಿ ಹಾಕುತ್ತಾರೆ. ಬದುಕಿನ ಅನಿವಾರ್ಯತೆಗಳು ಯಾವ ರೀತಿ ಹೆಣ್ಣು ಮಕ್ಕಳನ್ನು ಹಾಸಿಗೆಗೆ ಕರೆತರುತ್ತದೆ. ಭಾಷೆ ಅನ್ನುವುದೋ ಅಥವಾ ನಮ್ಮವರು ಅನ್ನುವವರೋ ಯಾವ ರೀತಿಯಲ್ಲಿ ಸಮಾಜದಲ್ಲಿ ಕಂದಕ ಸೃಷ್ಟಿ ಮಾಡುತ್ತದೆ ಅನ್ನುವುದರ ಸಂಪೂರ್ಣ ಚಿತ್ರಣ ಈ ಕಾದಂಬರಿಯಲ್ಲಿ ಬರುತ್ತದೆ. ತಂತ್ರಜ್ಞಾನದ ಹೊಡೆತಕ್ಕೆ ನಲುಗಿ ಯುವಸಮೂಹ ಮೊಬೈಲ್ ಕಂಪ್ಯೂಟರ್ ಗಳಲ್ಲಿ ಮೈಮರೆತಿರುವಾಗ ಒಬ್ಬ ಲೇಖಕ ಒಂದು ಕಥೆ ಬರೆಯುತ್ತಾನೆ ಅಥವಾ ಪುಸ್ತಕ ಈ ಕಾಲದಲ್ಲಿ ಬಿಡುಗಡೆ ಮಾಡುತ್ತಾನೆ ಎಂದರೆ ಪ್ರತಿಯೊಬ್ಬರು ನಗುತ್ತಾರೆ. ಜೊತೆಗೆ ಈ ಕಾಲದಲ್ಲಿ ಯಾರು ಪುಸ್ತಕ ಓದುತ್ತಾರೆ ಎಂದು ಗೇಲಿ ಮಾಡುತ್ತಾರೆ. ಆದರೆ ಒಂದು ಒಳ್ಳೆಯ ವಿಷಯವನ್ನಿಟ್ಟುಕೊಂಡು, ಕಣ್ಣಿಗೆ ಕಟ್ಟುವಂತೆ ಕಥೆ ಹೆಣೆದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಿದ್ದರೆ ಇಂದಿಗೂ ಜನಸಾಮಾನ್ಯರು ಪುಸ್ತಕ ಕೊಂಡು ಓದಿ ಆ ಪುಸ್ತಕವನ್ನು ಗೆಲ್ಲಿಸುತ್ತಾರೆ ಎಂಬುದಕ್ಕೆ ಈ ಕಡಮ್ಮಕಲ್ಲು ಎಸ್ಟೇಟ್ ಕಾದಂಬರಿಯೇ ಉತ್ತಮ ನಿದರ್ಶನ.
ಅವರು ಸಿದ್ಧವಾಗಿದೆ ಎಂದು ತಿಳಿಸಿದ 48 ಗಂಟೆಗಳಲ್ಲಿ ಪುಸ್ತಕದ 95% ಭಾಗವನ್ನು ಓದುಗರು ಕಾಯ್ದಿರಿಸಿ, ಒಳ್ಳೆ ಕಥೆಗಳು ಬಂದರೆ ಇಂದಿಗೂ ಕೊಂಡು ಓದಿ ಲೇಖಕರನ್ನು ಮತ್ತು ಪ್ರಕಾಶನಗಳನ್ನು ಜನರು ಪ್ರೋತ್ಸಾಹಿಸುತ್ತಾರೆ ಎಂದು ಸಾಬೀತುಪಡಿಸಿದ್ದಾರೆ.
ಜೊತೆಗೆ ಈ ಕಾದಂಬರಿ ಈ ಸಾಲಿನ ಕನ್ನಡ ಪುಸ್ತಕ ಪ್ರಾದಿಕಾರದ ಬಹುಮಾನವನ್ನು ಸಹ ಪಡೆದಿದ್ದು ಜನರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸುವಲ್ಲಿ ಪ್ರಮುಖ ಕಾರಣವಾಗಿತ್ತು.
ಒಂದು ರೀತಿಯಲ್ಲಿ ಬಿಡುಗಡೆಗೂ ಮುನ್ನವೇ ಮರುಮುದ್ರಣಕ್ಕೆ ಹೋದ ಮತ್ತು 48 ಗಂಟೆಯಲ್ಲಿ ಮುದ್ರಿಸಿದ ಅಷ್ಟು ಪ್ರತಿಗಳು ಖಾಲಿಯಾದ ದಾಖಲೆಯನ್ನು ನೌಶಾದ್ ಜನ್ನತ್ತ್ ರ ಕಡಮ್ಮಕಲ್ಲು ಎಸ್ಟೇಟ್ ಎಂಬ ಈ ಕಾದಂಬರಿ ಬರೆದಿದೆ.


No comments
Post a Comment