ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ

No comments

       ಮಡಿಕೇರಿ (Times Of Coorg):-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ‘ಪೋಷಣ ಅಭಿಯಾನ ಯೋಜನೆಯಡಿ’ ಅಂಗನವಾಡಿ ಸೇವೆಗಳ ಡಿಜಿಟಲೀಕರಣಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಗರದ ಜಿ.ಪಂ.ಭವನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸಾಂಕೇತಿಕವಾಗಿ ಸ್ಮಾರ್ಟ್ ಫೋನ್ ವಿತರಿಸಿದರು.

      ಈ ವೇಳೆ ಪೋಷಣ್ ಅಭಿಯಾನ್ ಸಂಬಂಧಿಸಿದಂತೆ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಸಚಿವರು ಕೇಂದ್ರ ಸರ್ಕಾರ ರಾಜ್ಯಕ್ಕೆ 129 ಕೋಟಿ ರೂ.ಬಿಡುಗಡೆ ಮಾಡಿದ್ದು, ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ. ರಾಜ್ಯದ 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಉಚಿತ ಮೊಬೈಲ್ ನೀಡಲಾಗುತ್ತಿದೆ ಎಂದರು.

      ಅಲ್ಲದೆ ಜಿಲ್ಲೆಯ 921 ಅಂಗನವಾಡಿಗಳಿಗೆ ಸ್ಯಾಮ್‍ಸಂಗ್ ಕಂಪೆನಿಯ 10 ಸಾವಿರ ರೂ. ಮೌಲ್ಯದ ಮೊಬೈಲ್‍ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. 

      ರಾಜ್ಯದಲ್ಲಿ ಯಾವುದೇ ಮಕ್ಕಳು, ತಾಯಂದಿರು ಅಪೌಷ್ಠಿಕತೆಯಿಂದ ಬಳಲಬಾರದು. ಅಂಗನವಾಡಿಗಳಲ್ಲಿ ನೀಡುವ ಔಷಧೋಪಚಾರ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಮೊಬೈಲ್ ಮೂಲಕ ಮಾಹಿತಿ ಸಂಗ್ರಹಿಸಬಹುದಾಗಿದೆ ಎಂದರು.

     ಅಲ್ಲದೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ಚುಚ್ಚುಮದ್ದು, ದಾಖಲಾತಿ ಸಂಖ್ಯೆಗಳ ಬಗ್ಗೆಯೂ ಸಹ ಮೊಬೈಲ್ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

      ಮಾತೃಪೂರ್ಣ, ಮಾತೃ ವಂದನ ಸೇರಿದಂತೆ 40 ಬಗೆಯ ಕಾರ್ಯಕ್ರಮ ಕಡತಗಳ ನಿರ್ವಹಣೆ ಮಾಡಬಹುದು ಎಂದು ವಿ.ಸೋಮಣ್ಣ ಅವರು ತಿಳಿಸಿದರು.

      ನೆಟ್‍ವರ್ಕ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಗಮನ ಸೆಳೆದರು. ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿ.ಇ.ಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿಸಿಎಫ್ ಗಳಾದ ಪ್ರಭಾಕರನ್, ಮಹೇಶ್ ಕುಮಾರ್ ಇತರರು ಇದ್ದರು.



No comments

Post a Comment