ರಾಜ್ಯ ಸರಕಾರದ ವೈಫಲ್ಯತೆ ಹಾಗು ಭ್ರಷ್ಟಾಚಾರದ ವಿರುದ್ಧ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಅಮ್ಮತ್ತಿ (Times Of Coorg): ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗು ತಾಲೂಕು ಮಟ್ಟದ "ಜನಧ್ವನಿ" ಕಾರ್ಯಕ್ರಮವು ಕಾಂಗ್ರೇಸ್ ಪಕ್ಷದ ಮೇರು ನಾಯಕರಾದ ದಿವಂಗತ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನಾಚರಣೆಯ ಪ್ರಯುಕ್ತ ಇಂದು ವಿರಾಜಪೇಟೆ ನಗರದ ಗಣಪತಿ ಆರ್ಕೇಡ್‌ನ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಮಾಜೀ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ವಿದಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಈ ದಿನ ಕಾಂಗ್ರೇಸ್ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಒಂದು ವಿಶಿಷ್ಟವಾದ ದಿನ. ಗಾಂಧಿಯಿಂದ ನೆಹರೂ ತನಕ ಭಾರತಕ್ಕಾಗಿ ಅನೇಕ ತ್ಯಾಗ, ಬಲಿದಾನಗಳನ್ನು ಮಾಡಲಾಗಿದೆ. ನೆಹರೂರವರು ಭಾರತದಲ್ಲಿ ಕೈಗಾರಿಕೆ ಮತ್ತು ಕೃಷಿಗೆ ಬಹಳ ಒತ್ತು ನೀಡಿದರು. ಪಾಶ್ಚಾತ್ಯ ರಾಷ್ಟ್ರಗಳಿಂದ ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಂಡು ಹಸಿದವರ ಹಸಿವು ನೀಗಿಸಿದರು. ನಂತರದ ದಿನಗಳಲ್ಲಿ ದೇಶದಲ್ಲಿ ಹಸಿರುಕ್ರಾಂತಿಯಾಗಿ ಇಲ್ಲಿನ ಆಹಾರವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಸದಾವಕಾಶವನ್ನು ಕಾಂಗ್ರೇಸ್ ನಿರ್ಮಾಣ ಮಾಡಿತು.
ದೇಶದಲ್ಲಿ ನಡೆದಿರುವ ಹಸಿರು ಕ್ರಾಂತಿ ಮತ್ತು ಆಹಾರ ಕ್ರಾಂತಿಯಲ್ಲಿ ಕಾಂಗ್ರೇಸಿಗರ ಅಪಾರ ಪಾಲಿದೆ. ವೈಜ್ಞಾನಿಕ ನೆಲೆಗಟ್ಟಿನ್ನಲ್ಲಿ ರಾಜೀವ್ ಗಾಂಧಿ ದೇಶವನ್ನು ಕಟ್ಟಿದರು. ಭಾರತೀಯ ರೈಲ್ವೆಯನ್ನು ಗಣಕೀಕರಣ ಮಾಡಿದವರು ರಾಜೀವ್ ಗಾಂಧಿ, ನೆರೆಯ ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆ ಮಾಡಹೋಗಿ ತಮಿಳರ ನಿಷ್ಠುರ ಕಟ್ಟಿಕೊಂಡರು. ಸಂವಿಧಾನ ೭೩ ಮತ್ತು ೭೪ನೇ ಅನುಚ್ಛೇದಗಳಿಗೆ ತಿದ್ದುಪಡಿ ತಂದು ಗಾಂಧಿಯವರ ಗ್ರಾಮಸ್ವರಾಜ್ಯ ಕನಸನ್ನು ನಿಜವಾಗಿ ನನಸು ಮಾಡಿದವರು ರಾಜೀವ್ ಗಾಂಧೀ ಎಂದರು. ಅಲ್ಲದೇ ದೇವರಾಜ್ ಅರಸ್ ಅವರ ಜೀವನ ಸಾಧನೆಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.
ಮತ್ತೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡುತ್ತಾ, ಕಾಂಗ್ರೇಸ್ ಪಕ್ಷಕ್ಕೆ ಮಾತ್ರವೆ ಇಂಥ ಧೀಮಂತ ನಾಯಕರ ಹುಟ್ಟುಹಬ್ಬವನ್ನು ಆಚರಿಸುವ ಸೌಭಾಗ್ಯವಿರುವುದು. ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿ ದಶಕಗಳ ಕಾಲ ದೇಶವನ್ನಾಳಿದ ಇಂಥ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂಥೇ ನಡೆದುಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರ ಹೊಣೆ ಎಂದರು. ಕೊಡಗಿನ ಹಿರಿಯ ಕಾಂಗ್ರೇಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅನುಭವವನ್ನು ಬಳಸಿಕೊಂಡು ಬ್ಲಾಕ್ ಅಧ್ಯಕ್ಷರುಗಳು ಮುನ್ನಡೆಯಿರಿ ಎಂದರು.
ನಂತರ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಸಾರ ಚಂಗಪ್ಪ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ರಂಜಿ ಪೂಣಚ್ಚ ವಹಿಸಿದ್ದರು. ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನವೀನ್, ಮಹಿಳಾ ಘಟಕದ ತಾರ ಅಯ್ಯಮ್ಮ, ಭಾರತಿ, ಜಮ್ಮಡ ಸೋಮಣ್ಣ, ಪಂಕಜಾ, ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಯುವ ಕಾಂಗ್ರೇಸ್ ಅಧ್ಯಕ್ಷ ರಕ್ಷಿತ್ ಚಂಗಪ್ಪ, ನಗರಾಧ್ಯಕ್ಷ ಜಿ.ಜಿ ಮೋಹನ್, ಸೋನಿಯಾ ಬ್ರಿಗೇಡಿನ ಜಾನ್ಸನ್, ಗಾಯಿತ್ರಿ ನರಸಿಂಹನ್, ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಪೊನ್ನಕ್ಕಿ, ಕಾಂಗ್ರೇಸ್ ಮುಖಂಡರಾದ ಧರ್ಮಜ, ಪಟ್ಟಣ ಪಂಚಾಯತ್ ಚುನಾಯಿತ ಸದಸ್ಯರುಗಳಾದ ಮೊಹಮ್ಮದ್ ರಾಫಿ, ಅಗಸ್ಟಿನ್, ರಾಜೇಶ್ ಪದ್ಮನಾಭ ಉಪಸ್ಥಿತರಿದ್ದರು. ಶಶಿಧರ್ ಅವರು ಕಾರ್ಯಕ್ರಮ ನಿರೂಪಿಸಿದರು.
ನಂತರ ವಿರಾಜಪೇಟೆ ತಾಲ್ಲೂಕು ಕಛೇರಿಯ ಮುಂದೆ ರಾಜ್ಯ ಸರ್ಕಾರದ ವೈಫಲ್ಯತೆ ಹಾಗು ಭ್ರಷ್ಟಾಚಾರ ವಿರೋಧಿಸಿ ಭಾರಿ ಪ್ರಾತಿಭಟನೆ ಮಾಡಲಾಯಿತು.
ರಾಜ್ಯ ಸರ್ಕಾರವು ಮಾಡಿರುವ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ , ಕೊರೋನ ಹೆಸರಿನಲ್ಲಿ ನಡೆದಿರುವ ಹಗಲು ದರೋಡೆ ಹಗರಣ , ಕೊರೋನ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯತೆ ಸೇರಿದಂತೆ ಹಲವು ವಿಷಯದ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದರು.



No comments
Post a Comment