ಭಾಗಮಂಡಲ- ತಲಕಾವೇರಿ ಮಾರ್ಗ ಸಾರಿಗೆ ಸಂಚಾರಕ್ಕೆ ಮುಕ್ತ
ಮಡಿಕೇರಿ (Times Of Coorg):- ಜಿಲ್ಲೆಯಲ್ಲಿ ಕಳೆದ ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆ ಭಾನುವಾರ ಬೆಳಗ್ಗಿನ ವೇಳೆಗೆ ಸಂಪೂರ್ಣ ಕಡಿಮೆಯಾಗಿದೆ. ಈ ಮೂಲಕ ಜಿಲ್ಲೆಯ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಧಾರಾಕಾರವಾಗಿ ಸುರಿದ ಮಳೆಗೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇವಾಲಯದಲ್ಲಿ ನದಿಯ ಹರಿವು ತಗ್ಗಿದೆ.
ಅಲ್ಲದೆ ಭಾಗಮಂಡಲ-ತಲಕಾವೇರಿ ಮಾರ್ಗ ಸಾರಿಕೆ ಸಂಪರ್ಕ ಮುಕ್ತವಾಗಿದೆ. ಭಾಗಮಂಡಲದ ತ್ರೀವೇಣಿ ಸಂಗಮ ಸಮೀಪ ಮುಳುಗಡೆಗೊಂಡಿದ್ದ ಅಂಗಡಿಗಳನ್ನು ವರ್ತಕರು ಸ್ವಚ್ಛಗೊಳಿಸುತ್ತಿರುವ ದೃಶ್ಯವೂ ಕಂಡು ಬಂದಿತು. ಅಂಗಡಿಯಲ್ಲಿದ್ದ ಸರಕು ಪದಾರ್ಥಗಳು ನಷ್ಟವಾಗಿದ್ದು ಸಂಕಷ್ಟದ ಬದುಕು ದೂಡುವಂತಾಗಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡರು.
ಮತ್ತೊಬ್ಬ ಪೆಟ್ಟಿ ಅಂಗಡಿ ಇಟ್ಟಿದ್ದ ವೃದ್ಧೆಯೊಬ್ಬರು 10 ವರ್ಷಗಳಿಂದ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ದೂಡುತ್ತಿದ್ದೆ. ಬಾಗಮಂಡಲದಲ್ಲಿ ಪ್ರವಾಹದಿಂದ ಆಕಾಶ ನೋಡುವಂತಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಭಾಗಮಂಡಲದಲ್ಲಿಯೇ ಹುಟ್ಟಿ ಬೆಳೆದು ಬದುಕು ಸವೆಸುತ್ತಿದ್ದೇವೆ. ಇನ್ನೆಲ್ಲಿ ಹೋಗುವುದು ಎಂದು ಅವರು ನೋವು ತೋಡಿಕೊಂಡರು.

No comments
Post a Comment