ಕೊಡಗು - ಕೇರಳ ಗಡಿ ರಸ್ತೆಯಲ್ಲಿನ ಮಣ್ಣು ತೆರವುಗೊಳಿಸಿದ ಕೊಡಗು ಜಿಲ್ಲಾಡಳಿತ: 4 ತಿಂಗಳುಗಳ ನಂತರ ಸಂಚಾರಕ್ಕೆ ಅವಕಾಶ.

No comments

- ಕೊರೋನಾ ಸಂಬಂಧಿಸಿದ ಸಿದ್ಧತೆಗಳನ್ನು ಪೂರ್ತಿಗೊಳಿಸಿದ ನಂತರ ಸಂಚಾರಕ್ಕೆ ಅವಕಾಶ: ಕಣ್ಣೂರು ಜಿಲ್ಲಾಡಳಿತ

ವರದಿ :ಮುಸ್ತಫ ಸಿದ್ದಾಪುರ
ಸಿದ್ದಾಪುರ (Times Of Coorg): ಕೊರೋನಾ ಹಿನ್ನೆಲೆಯಲ್ಲಿ ಕಳೆದ 4 ತಿಂಗಳುಗಳಿಂದ ಕೊಡಗು - ಕೇರಳ ಗಡಿಯಲ್ಲಿ ಮಣ್ಣು ಸುರಿದು ಮುಚ್ಚಿದ್ದ ರಸ್ತೆಗಳನ್ನು ಕೊಡಗು ಜಿಲ್ಲಾಡಳಿತ ತೆರವುಗೊಳಿಸುವ ಮೂಲಕ ಅಂತರರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.

ಕುಟ್ಟ - ಮಾನಂದವಾಡಿ ಹಾಗೂ   ಮಾಕುಟ್ಟ - ಕಣ್ಣೂರು ರಸ್ತೆಯಲ್ಲಿ ಸುರಿದಿದ್ದ ಮಣ್ಣಿನ ರಾಶಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಅಂತರರಾಜ್ಯ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಶನಿವಾರ ರಾತ್ರಿ ಮಾಕುಟ್ಟ ರಸ್ತೆಯಲ್ಲಿನ ಮಣ್ಣನ್ನು ಕೊಡಗು ಜಿಲ್ಲಾಡಳಿತ ತೆರವುಗೊಳಿಸುತ್ತಿದ್ದಂತೆ ಕಣ್ಣೂರು ಜಿಲ್ಲೆಯ ಇರಿಟಿ ಸಮೀಪದ ಕೂಟುಪುಯ ಎಂಬಲ್ಲಿ ಕೇರಳ ಪೊಲೀಸರು ಬ್ಯಾರಿಕೇಡ್ ಮೂಲಕ ರಸ್ತೆಯನ್ನು ಬಂದ್ ಮಾಡಿದ್ದರು.

ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗಡಿಯಲ್ಲಿ ಪ್ರಯಾಣಿಕರ ಕೊರೋನಾ ತಪಾಸಣೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿದ ನಂತರವಷ್ಟೆ ಪ್ರಯಟಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಕಣ್ಣೂರು ಜಿಲ್ಲಾಧಿಕಾರಿ ಟಿ.ವಿ ಸುಭಾಶ್ ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆ, ಪೊಲೀಸ್ ಹಾಗೂ ಸಾರಿಗೆ ಇಲಾಖೆಯನ್ನು ಒಳಗೊಂಡ ತಂಡವನ್ನು ಗಡಿಯಲ್ಲಿ ನಿಯೋಜಿಸಲಾಗುವುದು. ಪ್ರಯಾಣಿಕರ ಕೋವಿಡ್ ಸಂಬಂಧಿಸಿದ ಪ್ರಯಾಣದ ಅನುಮತಿ ಪತ್ರವನ್ನು (ಪಾಸ್) ಪರಿಶೀಲಿಸಲಾಗುವುದು. ಕೇರಳಕ್ಕೆ ಆಗಮಿಸುವ ಪ್ರಯಾಣಿಕರ ಕೋವಿಡ್ ರೋಗ ಲಕ್ಷಣಗಳ ತಪಾಸಣೆಗೆ ಆರೋಗ್ಯ ಇಲಾಖೆಯ ತಂಡ ಕೂಡ ಗಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಕರ್ನಾಟಕದಿಂದ ಬರುವವರು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಬೇಕಾಗಿದೆ ಎಂದು ಕಣ್ಣೂರು‌ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅದುವರೆಗೆ ಈ ಮಾರ್ಗದಲ್ಲಿ ಸರಕು ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಕಣ್ಣೂರು ಪೊಲಿಸರು ಮಾಹಿತಿ ನೀಡಿದ್ದಾರೆ.

"ಕುಟ್ಟ - ಮಾನಂದವಾಡಿ ಗಡಿ ರಸ್ತೆಯನ್ನು ಅಂತರರಾಜ್ಯ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಮುಕ್ತಗೊಳಿಸಲಾಗಿದೆ. ಆದರೆ ಕೇರಳ ಪ್ರವೇಶಿಸಲು ಮಾನಂದವಾಡಿ ಗಡಿಯಲ್ಲಿ ಅವಕಾಶ ಲಭಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಇದರ ಬಗ್ಗೆ ಅಲ್ಲಿಯ ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ."
-ನಂದೀಶ್. ವಿರಾಜಪೇಟೆ ತಾಲ್ಲೂಕು ತಹಶಿಲ್ದಾರ್.

" ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮಾಕುಟ್ಟ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಪ್ರಯಾಣಿಕರ ವಾಹನಗಳಿಗೆ ತುರ್ತು ಪರಿಸ್ಥಿಗೆ ಅನುಗುಣವಾಗಿ ಅವಕಾಶ ಕಲ್ಪಿಸಲಾಗುವುದು."
- ಕೆ.ಕೆ ದಿವಾಕರನ್. ಇರಿಟಿ ತಹಶಿಲ್ದಾರ್



No comments

Post a Comment