ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಬಲಿ : ಮೃತರ ಸಂಖ್ಯೆ 14ಕ್ಕೆ ಏರಿಕೆ

No comments

ಮಡಿಕೇರಿ (Times Of Coorg): ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಎರಡು ಸಾವು ಸಂಭವಿಸಿದ್ದು, ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 14 ಕ್ಕೇರಿದೆ.

ಸೋಮವಾರಪೇಟೆ ತಾಲ್ಲೂಕು ಮಾದಾಪುರ ನಿವಾಸಿ 65 ವರ್ಷದ ಮಹಿಳೆಯೊಬ್ಬರು ಕಳೆದ 04 ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು, 03 ದಿನಗಳ ಹಿಂದೆ ಇವರಿಗೆ ಕೆಮ್ಮು ಕಾಣಿಸಿಕೊಂಡಿದೆ.  ಈ ಬಗ್ಗೆ ಇವರು ಕುಶಾಲನಗರದ ಖಾಸಗಿ ಕ್ಲಿನಿಕ್ ನಲ್ಲಿ ತೋರಿಸಿದ್ದು, ಸದರಿ ಕ್ಲಿನಿಕ್ ನಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿರುತ್ತಾರೆ.
ದಿನಾಂಕ:18-08-2020 ರಂದು ಸದರಿಯವರಿಗೆ ಕೆಮ್ಮು ಜಾಸ್ತಿಯಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿ ತೋರಿಸಿದ್ದು, ಅಲ್ಲಿ ಅವರಿಗೆ ಇ.ಸಿ.ಜಿ ಪರೀಕ್ಷೆ ಮಾಡಿದ್ದು, ಸದರಿ ವರದಿಯಲ್ಲಿ ಇವರಿಗೆ ಹೃದಯಘಾತವಾಗಿರುವುದು ಕಂಡು ಬಂದಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯರು ತಕ್ಷಣವೇ  ಉನ್ನತ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದಂತೆ  ಅದೇ ದಿನ ಸಂಜೆ 7.30 ಗಂಟೆಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಿರುತ್ತಾರೆ.

ತಕ್ಷಣವೇ ಅವರಿಗೆ ರಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಮತ್ತು ಇವರಿಗೆ ಹೃದಯಾಘಾತವಾಗಿದ್ದರಿಂದ ಇವರನ್ನು ಐ.ಸಿ.ಯು ಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ದಿನಾಂಕ:19-08-2020 ರ ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.


ವಿರಾಜಪೇಟೆ ತಾಲ್ಲೂಕು ಮರೂರು ತಿತಿಮತಿ ನಿವಾಸಿ 36 ವರ್ಷದ ಪುರುಷರೊಬ್ಬರು ಈ ಹಿಂದಿನಿಂದಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಹೃದಯ ಮತ್ತು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.

ಇವರಿಗೆ ದಿನಾಂಕ:05-08-2020 ರಂದು ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಿದ್ದು, ದಿನಾಂಕ:07-08-2020 ರಂದು ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪ ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಕೋವಿಡ್ ಸೋಂಕು ದೃಢಪಟ್ಟಿರುತ್ತದೆ.  ದಿನಾಂಕ:09-08-2020 ರಂದು ಇವರಿಗೆ ಬೇಧಿ ಪ್ರಾರಂಭವಾಗಿದ್ದು, ಸುಸ್ತು ಕಾಣಿಸಿಕೊಂಡಿತ್ತು.  ಇವರಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇದ್ದುದರಿಂದ ಇವರನ್ನು ಕೋವಿಡ್ ಐ.ಸಿ.ಯು ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆದರೆ ಇಂದು (ದಿ:19-08-2020) ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 11.30 ಗಂಟೆಗೆ ಮೃತ ಪಟ್ಟಿರುತ್ತಾರೆ.

ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಮೃತ ದೇಹದ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ‌ ಜಾಯ್ ತಿಳಿಸಿದ್ದಾರೆ.

No comments

Post a Comment