ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸಿ ಭಾರತದ ತ್ರಿವರ್ಣ ಧ್ವಜ ಹಾರಿಸದ ರಾಜ್ಯ..!
ಇವತ್ತು ನಾವು ಭಾರತದ 74 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆವು. ಆದರೆ ಭಾರತದ ಕೆಲವು ಭಾಗಗಳಲ್ಲಿ, ಕೆಲ ಜನರು ನಿನ್ನೆ, ಅಂದರೆ ಆಗಸ್ಟ್ 14, 2020 ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು, ಅದೂ ತ್ರಿವರ್ಣ ಧ್ವಜ ಹಾರಿಸಿ ಅಲ್ಲ ಬದಲಾಗಿ ತಮ್ಮದೇ ಆದ ಧ್ವಜ ಹಾರಿಸಿ. ಅದು ಎಲ್ಲೆಂದು ಗೊತ್ತೇ?
ಹೌದು ಆಗಸ್ಟ್ 14 ಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ಕೇವಲ ಪಾಕೀಸ್ಥಾನದಲ್ಲಲ್ಲ. ಬದಲಾಗಿ ಭಾರತದ ನಾಗಾಲ್ಯಾಂಡ್ ಹಾಗೂ ಮಣಿಪುರದ ಕೆಲ ಭಾಗಗಳಲ್ಲಿ, ಹಾಗೂ ವಿಶ್ವದೆಲ್ಲೆಡೆ ನೆಲೆಸುವ ನಾಗಾ ಜನರು ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಪೀಪಲ್ಸ್ ರಿಪಬ್ಲಿಕ್ ಆಫ್ ನಾಗಾಲಿಮ್ ಹೆಸರಿನಲ್ಲಿ ತಮ್ಮನ್ನು ತಾವೇ ಸಾರ್ವಭೌಮರು ಎಂದು ಸಾರಿರುವ ನಾಗಾ ಜನರು ಹಲವಾರು ವರುಷಗಳಿಂದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಪಾಸ್‍ಪೋರ್ಟ್ ಬೇಕೆಂದು ಕೇಳಿಕೊಂಡೇ ಬಂದಿದ್ದಾರೆ. ನಾಗಾ ವಿದ್ಯಾರ್ಥಿ ಫೆಡರೇಷನ್ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳು ವರ್ಷಂಪ್ರತೀ ಪ್ರತ್ಯೇಕ ನಾಗಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಲೇ ಬಂದಿದ್ದಾರೆ. ಅಸಲಿಗೆ ನಾಗಾಲ್ಯಾಂಡ್ ಭಾರತಕ್ಕೆ ಬ್ರಿಟೀಷರಿಂದ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆಯುವ ಒಂದು ದಿನ ಮೊದಲು, ಅಂದರೆ, ಆಗಸ್ಟ್ 14, 1947 ರಂದು ತಮ್ಮನ್ನು ತಾವು ಸ್ವತಂತ್ರರೆಂದು ಘೋಷಿಸಿ, ತಾವು ಭಾರತವನ್ನು ಸೇರುವುದಿಲ್ಲ ಎಂದು ಘೋಷಿಸಿದ್ದರು. ಭಾರತದ ಮೊದಲ ಮೂರು ಚುನಾವಣೆಗಳಲ್ಲೂ ನಾಗಾಲ್ಯಾಂಡ್ ಭಾಗವಹಿಸಿರಲಿಲ್ಲ. ಆದರೆ ಅರವತ್ತರ ಆರಂಭದಲ್ಲಿ ನಾಗಾಲ್ಯಾಂಡ್ ವಿಧಿವತ್ತಾಗಿ ಭಾರತದ ಹೊಸ ರಾಜ್ಯವಾಯಿತು. ಆದರೂ ಇವತ್ತಿಗೂ ನಾಗಾಲ್ಯಾಂಡ್ ನ ಬಹುತೇಕ ಜನರು, ಮಣಿಪುರದಲ್ಲಿ ನೆಲೆಸಿರುವ ನಾಗಾಗಳು ಪ್ರತ್ಯೇಕ್ ನಾಗಾ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಅದರಡಿಯಲ್ಲೇ ಪ್ರತೀ ವರುಷ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಒಂದು ದಿನ ಮೊದಲು ಅವರು ನಾಗಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರೆ.
ಆದರೆ ಇದರ ಬಗ್ಗೆ ಬಿಜೆಪಿ ಹಾಗೂ ಸಂಘಪರಿವಾರ ಎಷ್ಟೊಂದು ಮೌನವನ್ನು ಹೊದ್ದುಕೊಂಡಿದೆ ನೋಡಿ. ನಾಗಾಲ್ಯಾಂಡ್‍ನಲ್ಲಿ ಸದ್ಯಕ್ಕೆ ಅಧಿಕಾರದಲ್ಲಿರೋದು ಬಿಜೆಪಿ/ಎನ್‍ಡಿಎ ಬೆಂಬಲಿತ ಸರ್ಕಾರ. ಆದರೆ ನಾಗಾಲ್ಯಾಂಡಿನ ಬಹುತೇಕ ಕಡೆ (ಈ ಸಲ ಕೋವಿಡ್ ಕಾರಣಕ್ಕೆ ಜನರು ಹೊರಗೆ ಬಂದು, ಧ್ವಜ ಹಾರಿಸಿ ಸಂಭ್ರಮಿಸುವ ಬಹಳಷ್ಟು ಸಂಭ್ರಗಳಿದ್ದಿಲ್ಲ. ಆದರೂ ಕೆಲವೆಡೆ ಸಂಭ್ರಮದಿಂದಲೇ ನಾಗಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ) ಪ್ರತ್ಯೇಕ ಧ್ವಜ ಹಾರಿಸಿ, ಪ್ರತೇಕ ದೇಶದ ಬೇಡಿಕೆ ಇದ್ದರೂ, ಅನೇಕ ಸಲ ಈ ಬೇಡಿಕೆ ಹಿಂಸಾರೂಪವನ್ನು ಪಡೆದಿದ್ದರೂ ನಾಗಾ ಜನರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿಲ್ಲ. ಅವರನ್ನು ಉಗ್ರರೆಂದು ಪರಿಗಣಿಸಿಲ್ಲ. ಜಸ್ಟ್ ಒಮ್ಮೆ ಇಂಥಹದ್ದೇ ಒಂದು ಪರಿಸ್ಥಿತಿಯನ್ನು ಜಮ್ಮು-ಕಾಶ್ಮೀರದಲ್ಲಿ ಊಹಿಸಿ. ಒಂದ್ವೇಳೆ ಕಾಶ್ಮೀರಿಗಳು ತಮ್ಮದೇ ಆದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ, ತಮ್ಮದೇ ಆದ ಧ್ವಜ ಹಾರಿಸಿದ್ದರೆ? ಪ್ರತ್ಯೇಕ ಪಾಸ್‍ಪೋರ್ಟಿಗಾಗಿ, ಪ್ರತ್ಯೇಕ ಸಂವಿಧಾನಕ್ಕಾಗಿ ಬೇಡಿಕೆ ಇಟ್ಟಿದ್ದರೆ? ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿತ್ತು. ನೆನಪಿರಲಿ ಕಾಶ್ಮೀರಕ್ಕೆ ಆರ್ಟಿಕಲ್ 370 ರಡಿಯಲ್ಲಿ ವಿಶೇಶ ಅಧಿಕಾರಗಳಿದ್ದ ಹಾಗೆ ನಾಗಾಲ್ಯಾಂಡಿಗೂ ಆರ್ಟಿಕಲ್ 371A ರಡಿಯಲ್ಲಿ ಪ್ರತ್ಯೇಕ ಹಕ್ಕುಗಳಿವೆ. ನಾಗಾ ಜನರಿಗಾಗಿ ಪ್ರತ್ಯೇಕ ಕ್ರಿಮಿನಲ್ ಹಾಗೂ ಸಿವಿಲ್ ಕಾನೂನಿದೆ, ಹೊರಗಿನವರು ನಾಗಾಲ್ಯಾಂಡಿನಲ್ಲಿ ಜಮೀನು ಖರೀದಿಸುವಂತಿಲ್ಲ. ನಾಗಾ ಮಹಿಳೆಯರು ನಾಗಾ ಜನರನ್ನು ಬಿಟ್ಟು ಇತರರನ್ನು ಮದುವೆಯಾಗುವ ಬಗ್ಗೆಯೂ ಅನೇಕ ಕಟ್ಟಳೆಗಳಿವೆ...ಹೀಗೆ ಆರ್ಟಿಕಲ್ 371A ನಾಗಾಲ್ಯಾಂಡಿಗೆ ಪ್ರತ್ಯೇಕ ಹಾಗೂ ವಿಶೇಷ ಅಧಿಕಾರಗಳನ್ನು ಕೊಡುತ್ತೆ. ಇಂಥಹದ್ದೇ ಒಂದು ವಿಶೇಷ ಸಾಂವಿಧಾನಿಕ ಸೌಲಭ್ಯ ಮಣಿಪುರಕ್ಕೂ ಇದೆ. ಆದರೆ ನಮ್ಮ ಕಣ್ಣಿಗೆ ಕಂಡಿದ್ದು ಕೇವಲ ಕಾಶ್ಮೀರ ಮಾತ್ರ. ಕಾಶ್ಮೀರಿಗಳು ಮಾತ್ರ ದೇಶದ್ರೋಹಿಗಳಾದರು. ಆರ್ಟಿಕಲ್ 370 ರ ಬಗ್ಗೆ ಪುಂಖಾನುಪುಂಖವಾಗಿ ಮಾತಾನಾಡುವವರು ಸಂವಿಧಾನದಲ್ಲಿ ಅಡಕವಾಗಿರುವ ಅಂಥಹದ್ದೇ ಸಾಂವಿಧಾನಿಕ ವಿನಾಯತಿಗಳ ಬಗ್ಗೆ ಮಾತಾನಾಡುವುದೇ ಇಲ್ಲ. ಯಾಕೆ ಹೀಗೆ ಎಂದು ಹೇಳಬೇಕಾಗಿಲ್ಲ. ಸ್ವಾತಂತ್ರ್ಯ ಬಂದು ಎಪ್ಪತ್ತು ವರುಷಗಳಲ್ಲಿ ದೇಶ ಬೆಳೆದಿರುವುದಕ್ಕಿಂತಾ ಹೆಚ್ಚು ದ್ವೇಷ ಬೆಳೆದಿದೆ ನಮ್ಮಲ್ಲಿ. ನಿನ್ನೆಯ ಹಾಗೂ ಕಳೆದ ವರುಷದ ನಾಗಾ ಸ್ವಾತಂತ್ರ್ಯ ದಿನಾಚರಣೆಯ ಕೆಲ ಚಿತ್ರಗಳನ್ನ ಇಲ್ಲಿ ರೆಫರೆನ್ಸಿಗೆಂದು ಹಾಕಿದ್ದೇನೆ.
ಬರಹ : Almedia Gladson



No comments
Post a Comment