ದಲಿತ ಸಂಘರ್ಷ ಸಮಿತಿ ವತಿಯಿಂದ ಚೆನ್ನಯ್ಯನಕೋಟೆ ಪ್ರದೇಶದಲ್ಲಿ ಆಹಾರ ಕಿಟ್ ವಿತರಣೆ
✒️ವರದಿ : ಚಂದನ್ ನಂದರಬೆಟ್ಟು
ಮಡಿಕೇರಿ (Times Of Coorg) : ಶಿಕ್ಷಣ, ಸಂಘಟನೆ, ಹೋರಾಟ, ರಾಜ್ಯಾಧಿಕಾರವನ್ನು ಧ್ಯೇಯವನ್ನಾಗಿಸಿಕೊಂಡಿರುವ ಕರ್ನಾಟಕ
ದಲಿತ ಸಂಘರ್ಷ ಸಮಿತಿಯ ವತಿಯಿಂದ
ಚೆನ್ನಯ್ಯನಕೋಟೆಯಲ್ಲಿ ಅಗತ್ಯ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಲಾಕ್ ಡೌನ್ ನಿಂದ ಜನರು ಕೆಲಸವಿಲ್ಲದೆ, ಹಣಕಾಸಿನ ಸಮಸ್ಯೆಗೆ ಸಿಲುಕಿ ದಿನಸಿ ಆಹಾರದ ಕೊರತೆಗೆ ಒಳಗಾಗಿದ್ದರು. ಇದನ್ನು ತಿಳಿದುಕೊಂಡ ಡಿ ಎಸ್ ಎಸ್ ನ ವಿಭಾಗೀಯ ಸಂಚಾಲಕರಾದ ವೀರಭದ್ರಯ್ಯ ಅವರು ಕೊಡಗು ಜಿಲ್ಲಾ ಸಂಚಾಲಕರ ಸಹಕಾರದೊಡನೆ ಬಡಜನರಿಗೆ ಆಹಾರ ಕಿಟ್ ಒದಗಿಸಬೇಕೆನ್ನುವ ಆಶಯ ವ್ಯಕ್ತಪಡಿಸಿ ಅದನ್ನು ಕಾರ್ಯರೂಪಕ್ಕೂ ತಂದರು. ಸುಮಾರು 50 ಮಂದಿಗೆ ಆಹಾರದ ಕಿಟ್ ವಿತರಿಸಲಾಯಿತು.
ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದ ಎನ್. ವೀರಭದ್ರಯ್ಯ ಅವರು, ಸಮಸ್ಯೆಗೆ ಸಿಲುಕಿದ ಜನರಿಗೆ ತಮ್ಮಿಂದ ಆದ ಸಹಾಯ ಮಾಡುವುದು ನಮ್ಮ ಸಂಘದ ಉದ್ದೇಶ. ಇದು ಬಡ ಜನರ ಜೀವನಕ್ಕೆ ನೆರವಾಗಬಹುದು ಎಂದರು. ಹೆಚ್.ಎಲ್. ದಿವಾಕರ್ ಅವರು ಮಾತನಾಡಿ ಕೊಡಗಿನೆಲ್ಲೆಡೆ ನಾವು ಈ ರೀತಿಯಾಗಿ ಸಮಾಜಿಕ ಕಳಕಳಿಯಿಂದ ಹಾಗು ಬಡಜನರ ಸಂಕಷ್ಟವನ್ನರಿತು ಈ ಕಿಟ್ ವಿತರಣೆಯನ್ನು ನಡೆಸುತ್ತಿರುವೆವು ಎಂದರು. ಜಿ.ಪಂ ಸದಸ್ಯರಾದ ಲೀಲಾವತಿ ಅವರು ಡಿ.ಎಸ್.ಎಸ್ ನ ಕಿಟ್ ವಿತರಣೆಯ ಕಾರ್ಯವನ್ನು ಶ್ಲಾಘಿಸಿ ಸಂಘದ ಸದುದ್ದೇಶವನ್ನು ಹಾಗು ಸಮಾಜ ಸೇವೆಯನ್ನು ಮೆಚ್ಚಿಕೊಂಡರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಡಿ.ಎಸ್.ಎಸ್ ನ ಮಾನವೀಯ ನಡೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸರಳವಾಗಿ ನಡೆಸಿದ ಈ ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕರಾದ ದೀಪಕ್.ಎ.ಪಿ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್ ಸದಸ್ಯರಾದ ಶಿಲ್ಪಾ, ಮಾಜಿ ಜಿ.ಪಂ. ಸದಸ್ಯರಾದ ಸಣ್ಣಯ್ಯ ಹಾಗು ಇತರರು ಹಾಜರಿದ್ದರು.

No comments
Post a Comment