ನಾಳೆ ತ್ಯಾಗ ಬಲಿದಾನದ ಸಂಕೇತ ಪವಿತ್ರ ಹಬ್ಬ ಬಕ್ರೀದ್

No comments

ಲೇಖನ: ಬಶೀರ್ ಚೇರಂಬಾಣೆ ( ಎಸ್.ಕೆ.ಎಸ್.ಎಸ್.ಎಫ್, ಜಿ.ಸಿ.ಸಿ‌‌ ಕೊಡಗು ಸದಸ್ಯ)

ಹಿಜಿರಿ ವರುಷ ದುಲ್ ಹಜ್ಜ್ 10 ರಂದು  ಪ್ರತೀ ವರುಷವು ಆಚರಿಸಿಕೊಂಡು ಬರುವ ಪ್ರಮುಖವಾದ ಹಬ್ಬವಾಗಿದೆ
ಬಕ್ರೀದ್ .ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ.

ಪ್ರವಾದಿ ಇಬ್ರಾಹಿಮ್ (ಸ.ಅ)ತಮ್ಮ ಮಗನಾದ ಇಸ್ಮಾಯಿಲ್‌ ರನ್ನು ಅಲ್ಲಾಹುವಿನ ಆಜ್ಞೆಯ ಪ್ರಕಾರ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅಥವಾ ಬಕ್ರೀದ್ ಎನ್ನಲಾಗುತ್ತದೆ.

ಹಜರತ್ ಇಬ್ರಾಹಿಂ ಖಲೀಲುಲ್ಲಾಹ್‌ರವರ ಸತ್ವಪರೀಕ್ಷೆ ಮಾಡಲು ಅಲ್ಲಾಹು ಒಮ್ಮೆ ಅವರಿಗೆ "ನಿನ್ನ ಅತಿ ಪ್ರೀತಿ ಪಾತ್ರವಾದ ಜೀವ ಒಂದನ್ನು ಬಲಿ ಕೊಡಬಲ್ಲೆಯೋ?" ಎಂದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಬಲಿದಾನ ಮಾಡಬೇಕೆಂಬುದು ಅಲ್ಲಾಹುವಿನ ಇಚ್ಛೆ ಎಂದು ಅವರಿಗೆ ಮನವರಿಕೆಯಾಯಿತು. ಮಗನನ್ನು ಬಲಿ ಕೊಡಲು ಸಿದ್ಧರಾದರು.

ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಇದನ್ನು ಕಂಡ ಮಗ ಇಸ್ಮಾಯಿಲ್, ತನ್ನ ತಂದೆಗೆ ಹೀಗೆ ಹೇಳಿದರು: "ಅಪ್ಪಾ, ನಿಮ್ಮನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿಂದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಕತ್ತಿ ಹರಿಸು". ಇದನ್ನು ಕೇಳಿದ ತಂದೆ ಇಬ್ರಾಹಿಮ್ ಖಲೀಲುಲ್ಲಾಹ್‌ರವರು ತಮ್ಮ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ "ಬಿಸ್ಮಿಲ್ಲಾ" ಎಂದು ಹೇಳಿ ಒಮ್ಮೆಲೇ ಮಗನ ಮೇಲೆ ಕತ್ತಿಯನ್ನು ಜೋರಾಗಿ ಹರಿಸಿದರು. ಕತ್ತಿ ಎಷ್ಟೇ ಹರಿಸಿದರು ದೈವಿ ಕಾರಣದಿಂದ ಕತ್ತಿ ಇಸ್ಮಾಯಿಲರ ಕತ್ತನ್ನು ಕುಯ್ಯುವುದಿಲ್ಲ.

ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರೀಲ್ ಅಲೈಹಿಸಲಾಂ ಇಸ್ಮಾಯಿಲ್‌ರನ್ನು ದೂರಮಾಡಿ ಅವರ ಬದಲು ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಈ ಕಾರಣ ಬಲಿ ಕೊಡಲ್ಪಟ್ಟ ಜೀವ ಒಂದು ಕುರಿ ಆಗುತ್ತದೆ. ಜತೆಗೆ ಪ್ರವಾದಿ ಇಬ್ರಾಹಿಮರು ಸೃಷ್ಟಿಕರ್ತನಾದ ಅಲ್ಲಾನಲ್ಲಿಟ್ಟಿರುವ ಸತ್ಯನಿಷ್ಠೆಯ ಸತ್ವಪರೀಕ್ಷೆಯೂ ನಡೆದಿರುತ್ತದೆ.
ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಅತಿದೊಡ್ಡ ಹಬ್ಬ. ಬಕ್ರೀದ್ ಸಂದರ್ಭದಲ್ಲಿ  ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ.
ಪ್ರಪಂಚದ ಎಲ್ಲ ದೇಶಗಳ ಪ್ರಜೆಗಳು ವರ್ಣಭೇದ ಇಲ್ಲದೆ, ಬಡವ ಬಲ್ಲಿದರನ್ನದೆ, ಸಮನಾಗಿ ನಿಂತು ನಮಾಝ್ ಮಾಡಿ ಪರಸ್ಪರ ಹಸ್ತಲಾಗ ಮಾಡುವ ಒಂದೆ ಜಾಗ ಅದು ಪವಿತ್ರ ಕಾಬಾ
ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಅತ್ಯಂತ ಪ್ರಮುಖವಾದದ್ದು.

ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಒಟ್ಟಾರೆ, ಹಜ್ಜ್ ಯಾತ್ರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕ್ರಿಯೆ. ಇದೇ ವೇಳೆ ಬಕ್ರೀದ್ ಹಬ್ಬವನ್ನು ವಿಶ್ವದ್ಯಂತ ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾರೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಸರ್ವ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂದುಭಾಂದವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ. ಒಟ್ಟಿನಲ್ಲಿ ಈ ಹಬ್ಬವನ್ನು ಬಲಿದಾನದ ಮೂಲಕ ಆಚರಿಸಲ್ಪಡುತ್ತದೆ.
ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒಂಟೆಗಳನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು "ಖುರ್ಬಾನಿ" ಎಂದು ಕರೆಯುತ್ತಾರೆ.
ಇಬ್ರಾಹಿಮ್‌ ಅ.ಸ ರವರ ಆ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಾನದ ಮೂಲಕ ಆಚರಿಸುತ್ತಾರೆ.

ಈ ಹಬ್ಬದ ದಿವಸ ಮುಸ್ಲಿಮರು ಮಸೀದಿ ಹಾಗೂ "ಈದ್ಗಾಹ್"ಗೆ ಹೋಗಿ ಪ್ರಾರ್ಥನೆಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಹಬ್ಬಗಳ ಆಚರಣೆಯಲ್ಲಿ ಒಂದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒಂದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉಂಟು ಮಾಡುತ್ತದೆ. ಈದ್‌ಗಾಹ್‌ಗಳಲ್ಲಿ ಇಮಾಮರ ಹಿಂದೆ ಸಾಲುಸಾಲಾಗಿ ನಿಂತು "ಅಲ್ಲಾಹು ಅಕ್ಬರ್", "ಅಲ್ಲಾಹು ಅಕ್ಬರ್" ಎಂದು ಘೋಷಣೆ ಮಾಡುತ್ತಾ ಸಂವ್ಯೂಹಕವಾಗಿ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣು ಹೋಗುವ ಆ ಅಭೂತಪೂರ್ವ ದೃಶ್ಯ ರೋಮಾಂಚನಕಾರಿಯಾಗಿಯೂ, ನಯನ ಮನೋಹರವಾಗಿಯೂ ಇರುತ್ತದೆ. ನಮಾಜ್ ನಂತರ ಒಬ್ಬರನೊಬ್ಬರು ಆಲಿಂಗನ ಮಾಡಿಕೊಳ್ಳುವುದು, ಕೈ ಕುಲುಕುವುದು, "ಈದ್ ಮುಬಾರಕ್" ಅಂದರೆ "ಈ ಹಬ್ಬ ನಿಮಗೆ ಶುಭವನ್ನುಂಟು ಮಾಡಲಿ" ಎನ್ನುವುದು ಗಮನಾರ್ಹ.
ಪ್ರಾರ್ಥನೆಯಿ೦ದ ಹಿಂದಿರುಗಿದ ನಂತರ ಕಿರಿಯರು ಸಾಮಾನ್ಯವಾಗಿ ತಮ್ಮ ತಂದೆ, ತಾಯಿ, ಅಣ್ಣ, ಅಕ್ಕಂದಿರು ಮೊದಲಾದ ಹಿರಿಯರ ಬಳಿ ಹೋಗೂದು ಮುಸ್ಲಿಮರಲ್ಲಿ ಒಂದು ಸಂಪ್ರದಾಯ. ಆಗ ಹಿರಿಯರು ಅವರನ್ನು ಯಥೇಚ್ಛವಾಗಿ ಹರಸುತ್ತಾರೆ.
ಹಾಗೆ ಈ ಹಬ್ಬದಲ್ಲಿ ಬಡವ ಬಲ್ಲಿದ ಎಂಬ ಬೇದವಿಲ್ಲದೇ ಎಲ್ಲರೂ ಸಮಾನರೂ ಎಂಬ ದ್ಯೇಯದೊಂದಿಗೆ ಸಂತೋಷದಿಂದ ಆಚರಿಸುತ್ತಾ ಬರುತ್ತಿದೆ.

ಈದ್ ನಮಾಜ಼್ (ಪೆರುನಾಲ್ ನಿಸ್ಕಾರಂ)
ಮುಸ್ಲಿಂ ಸಮೂಹಕ್ಕೆ ಅಲ್ಲಾಹನು ನೀಡಿದ ಪ್ರಮುಖ ಹಬ್ಬವಾಗಿದೆ ಈದ್, ಈ ಹಬ್ಬಗಳ ದಿನಗಳಲ್ಲಿ ಹಲವು ಒಳಿತುಗಳನ್ನು ಮಾಡಬೇಕಿದೆ. ದಾನ ಧರ್ಮ ನೀಡುವುದು, ತಕ್ಬೀರ್ ಹೆಚ್ಚುಸುವುದು, ಪ್ರತ್ಯೇಕವಾಗಿ ಎರಡು ರಕ್‍ಅತ್ ಈದ್ ನಮಾಝ್ ನಿರ್ವಹಿಸುವುದು ಆ ದಿನದ ಪ್ರಮುಖ ಆರಾಧನೆಯಾಗಿದೆ. ಕೆಲವೊಂದು ವೈಶಿಷ್ಟ್ಯತೆಗಳನ್ನು ಹೊರತುಪಡಿಸಿದರೆ ಈ ನಮಾಝ್ ಇತರ ನಮಾಝ್‍ಗಳಂತೆ ನಿರ್ವಹಿಸಲ್ಪಡುತ್ತದೆ. ಈದ್ ನಮಾಝ್ ಪ್ರಬಲ ಸುನ್ನತ್ತಾಗಿದೆ. ಫರ್ಲ್ ಕಿಫಾಯ (ಸಾಮೂಹ್ಯ ಬಾಧ್ಯತೆ) ಎಂಬ ಅಭಿಪ್ರಾಯ ಕೂಡಾ ಇದೆ. ಪೆರ್ನಾಲ್ ನಮಾಝನ್ನು ಜಮಾಅತ್ತಾಗಿ ನಿರ್ವಹಿಸಲು ಸುನ್ನತ್ತಿದೆ. ಹಾಜಿಗಳಿಗೆ ಬಲಿ ಪೆರ್ನಾಲ್ ನಮಾಝನ್ನು ಏಕಾಂಗಿಯಾಗಿ ನಿರ್ವಹಿಸುವುದೇ ಉತ್ತಮ. ಅಗತ್ಯವಿಲ್ಲದೆ ಒಂದಕ್ಕಿಂತ ಹೆಚ್ಚು ಈದ್ ಜಮಾಅತನ್ನು ನಡೆಸುವುದು ಕರಾಹತ್ತಾಗಿದೆ.

ಯಾರಿಗೆ ಸುನ್ನತ್: ಪುರುಷರು, ದಾಸರು, ಯಾತ್ರಿಕರು ಇವರಿಗೆಲ್ಲಾ ಪೆರ್ನಾಲ್ ನಮಾಝ್ ನಡೆಸಲು ಸುನ್ನತ್ತಿದೆ. ಏಕಾಂಗಿಯಾಗಿ ನಮಾಝ್ ನಡೆಸುವವನು ‘ಖುತುಬ’ ನಿರ್ವಹಿಸಬೇಕೆಂದಿಲ್ಲ.

ಸಮಯ: ಪೆರ್ನಾಳ್ ನಮಾಝಿನ ಸಮಯ ಸೂರ್ಯೋದಯದಿಂದ ಹಿಡಿದು ನಡು ಮಧ್ಯಾಹ್ನ (ಝವಾಲ್) ದ ತನಕ. ಸೂರ್ಯನು ಉದಯಿಸಿ ಏಳು ಗೇಣುದ್ದದಷ್ಟು ಮೇಲೆ ಬರುವ ತನಕ ನಮಾಝನ್ನು ಮುಂದೂಡುವುದು ಸುನ್ನತ್ತಾಗಿದೆ. ಇನ್ನು ಸೂರ್ಯೋದಯದ ತಕ್ಷಣ ಒಬ್ಬ ನಮಾಝ್ ನಿರ್ವಹಿಸಿದರೆ ಆತ ಕರಾಹತ್‍ನ ಸಮಯದಲ್ಲಿ ನಮಾಝ್ ನಿರ್ವಹಿಸಿದ ಎಂಬ ವಿಧಿ ಅನ್ವಯಿಸುವುದಿಲ್ಲ. ಏಕೆಂದರೆ ಕಾರಣ ಸಹಿತವಿರುವ ನಮಾಝ್ ಇದಾಗಿರುತ್ತದೆ. ನಮಾಝಿನ ರೂಪ ಪೆರ್ನಾಳ್ ನಮಾಝ್ ಎರಡು ರಕಅತಾಗಿದೆ. ಇತರ ನಮಾಝ್‍ಗಳಂತೆ ಕಡ್ಡಾಯ ಕರ್ಮಗಳನ್ನು, ಐಚ್ಚಿಕ ಕರ್ಮಗಳನ್ನು ಇಲ್ಲಿಯೂ ಪಾಲಿಸಲ್ಪಡುತ್ತದೆ. ಈದುಲ್ ಅಳ್‍ಹಾದ ನಮಾಝನ್ನು ನಾನು ನಿರ್ವಹಿಸುತ್ತೇನೆ’ ಎಂದು ಸಂಕಲ್ಪಿಸಿ ನಮಾಝಿಗೆ ಪ್ರವೇಶಿಸಬೇಕು. ನಂತರ ಸಾಧಾರಣ ನಮಾಝಿನಂತೆ ‘ವಜ್ಜಹ್ತು’ ಓದಬೇಕು. ಬಳಿಕ ಏಳು ತಕ್ಬೀರ್‍ಗಳನ್ನು ಹೇಳಬೇಕು. ಪ್ರತಿಯೊಂದು ತಕ್ಬೀರ್‍ನೆಡೆಯಲ್ಲಿ ‘ಸುಬ್‍ಹಾನಲ್ಲಾಹ್, ವಲ್‍ಹಂದುಲಿಲ್ಲಾಹಿ ವಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್’ ಎಂಬ ದ್ಸಿಕ್ರನ್ನು ಹೇಳುವುದು ಸುನ್ನತ್ತಿದೆ. ಏಳು ತಕ್ಬೀರ್‍ಗಳು ಮುಗಿದ ಬಳಿಕ ಫಾತಿಹಾ ಓದಬೇಕು. ಎರಡನೇ ರಕ್‍ಅತ್‍ನಲ್ಲಿ ಫಾತಿಹಾಕ್ಕಿಂತ ಮೊದಲು ಐದು ತಕ್ಬೀರ್ ಉಚ್ಚರಿಸಬೇಕು. ಪ್ರತೀ ತಕ್ಬೀರಿನ ಎಡೆಯಲ್ಲಿ ಮೇಲಿನ ದ್ಸಿಕ್ರನ್ನು ಪುನರಾವರ್ತಿಸಬೇಕು.

ಖಲಾ ಆದರೆ?: 
ಪೆರ್ನಾಳ್ ನಮಾಝ್ ಖಳಾ ಆದರೆ ಅದನ್ನು ಖಳಾ ಪೂರೈಸುವ ಸಮಯದಲ್ಲಿ ಮೇಲೆ ವಿವರಿಸಿದ ರೂಪದಲ್ಲಿ ತಕ್ಬೀರ್ ಸಹಿತ ನಿರ್ವಹಿಸಬೇಕು. ಕಾರಣ ಪೆರ್ನಾಳ್ ನಮಾಝ್‍ನ ತಕ್ಬೀರ್ ಸಮಯದ ಚಿಹ್ನೆಯಲ್ಲ. ಅದು ನಮಾಝ್‍ನ ಪ್ರತ್ಯೇಕತೆಯಾಗಿದೆ. ಎಲ್ಲಾ ತಕ್ಬೀರ್‍ಗಳಲ್ಲೂ ಕೈ ಮೇಲಕ್ಕೆತ್ತಿ ಕಟ್ಟಬೇಕು. ಎರಡು ರಕಅತಿನಲ್ಲಿರುವ ಈ ತಕ್ಬೀರ್‍ಗಳು ಸುನ್ನತ್ತೇ ಹೊರತು ಕಡ್ಡಾಯವಲ್ಲ. ಮರೆತರೆ ಸುಜೂದ್‍ನಿಂದ ಪರಿಹರಿಸಲ್ಪಡುವ ‘ಅಬ್‍ಆಳ್’ ಸುನ್ನತ್ ಕೂಡಾ ಅಲ್ಲ. ತಕ್ಬೀರ್‍ಗಳನ್ನು ಉಪೇಕ್ಷಿಸುವುದು ಮತ್ತು ನಿಶ್ಚಿತ ತಕ್ಬೀರ್‍ಗಳಿಗಿಂತ ಹೆಚ್ಚು ಹೇಳುವುದು ಕರಾಹತ್ತಾಗಿದೆ. ಒಂದನೇ ರಕ್‍ಅತ್‍ನಲ್ಲಿ ಏಳು ತಕ್ಬೀರ್‍ಗಳನ್ನು ಉಪೇಕ್ಷಿಸಿದರೆ ಅದನ್ನು ಎರಡನೇ ರಕ್‍ಅತ್‍ನಲ್ಲಿ ಹೇಳುವಂತಿಲ್ಲ. ತಕ್ಬೀರ್ ಮರೆತರೆ? ತಕ್ಬೀರ್‍ಗಳನ್ನು ಹೇಳಲು ಮರೆತು ಫಾತಿಹಾದಲ್ಲಿ ಪ್ರವೇಶಿಸಿದರೆ ಬಳಿಕ ಮತ್ತೆ ತಕ್ಬೀರ್‍ಗೆ ಮರಳುವಂತಿಲ್ಲ. ಫಾತಿಹಾದಲ್ಲಿ ಪ್ರವೇಶಿಸುವುದರೊಂದಿಗೆ ತಕ್ಬೀರ್‍ನ ಪುಣ್ಯವು ನಷ್ಟ ಹೊಂದುತ್ತದೆ. ತಕ್ಬೀರ್ ಹೇಳದೆ ‘ಅಊದ್ಸ್’ ಮಾತ್ರ ಓದಿದ್ದಾದರೆ ಬಳಿಕ ತಕ್ಬೀರನ್ನು ಉಚ್ಚರಿಸಬಹುದು. ಇಮಾಂ ತಕ್ಬೀರ್ ಹೇಳದೆ ಫಾತಿಹಾದಲ್ಲಿ ಪ್ರವೇಶಿಸಿದರೂ ಮಅಮೂಮನಿಗೆ ತಕ್ಬೀರ್‍ನ ಪುಣ್ಯವು ನಷ್ಟವಾಗುತ್ತದೆ. ತಕ್ಬೀರ್‍ಗಳನ್ನು ಇಮಾಂ ಮತ್ತು ಮಅಮೂಮ್ ಜೋರಾಗಿ ಹೇಳಬೇಕು. ಸೂರತ್ ಪ್ರಥಮ ರಕ್‍ಅತ್‍ನಲ್ಲಿ ಸೂರತುಲ್ ಖಾಫ್ ಮತ್ತು ಎರಡನೇ ರಕ್‍ಅತ್‍ನಲ್ಲಿ ಸೂರತ್ ಇಖ್‍ತರಬ ಓದಲು ಸುನ್ನತ್ತಿದೆ. ಸೂರತು ಸಬ್ಬಿಹಿಸ್ಮ, ಸೂರತುಲ್ ಹಲ್ ಅತಾಕ ಅದೇ ರೀತಿ ಸೂರತುಲ್ ಕಾಫಿರೂನ ಮತ್ತು ಸೂರತುಲ್ ಇಖ್ಲಾಸನ್ನೂ ಓದಬಹುದು. ಈದ್ ಖುತ್ಬಾ ಪೆರ್ನಾಳ್ ನಮಾಝ್ ನಿರ್ವಹಣೆಯ ಬಳಿಕ ಎರಡು ಖುತ್ಬಾ ಓದಲು ಸುನ್ನತ್ತಿದೆ. ಜುಮುಅ ಖುತ್ಬಾದಂತೆ ಕಡ್ಡಾಯ ಮತ್ತು ಐಚ್ಚಿಕ ಕಾರ್ಯಗಳನ್ನು ಇಲ್ಲೂ ಪಾಲಿಸಬೇಕು. ಹಂದ್, ಸ್ವಲಾತ್, ತಕ್ವಾದ ವಸಿಯ್ಯತ್ ಎರಡೂ ಖುತ್ಬಾಗಳಲ್ಲಿರಬೇಕು. ಯಾವುದಾದರೊಂದರಲ್ಲಿ ಆಯತೊಂದನ್ನು ಓದಬೇಕು. ಎರಡನೇ ಖುತ್ಬಾದಲ್ಲಿ ವಿಶ್ವಾಸಿಗಳಿಗೆ ಪ್ರಾರ್ಥಿಸಬೇಕು. ನಿಲ್ಲುವಿಕೆ, ಖುತ್ಬಾಗಳೆಡೆಯಲ್ಲಿನ ಕುಳಿತ, ಶುದ್ದಿ, ಔರತ್ ಮುಚ್ಚುವಿಕೆ ಯಾವುದೂ ಪೆರ್ನಾಳ್ ಖುತ್ಬಾಕ್ಕೆ ಕಡ್ಡಾಯವಿಲ್ಲ. ಇದೆಲ್ಲವೂ ಸುನ್ನತ್ ಮಾತ್ರ. ಆಯತ್ ಓದುವ ವೇಳೆ ಅವನು ಹಿರಿಯ ಅಶುದ್ದಿಯುಳ್ಳವನಾಗಿದ್ದರೆ ಅವನ ಖುತ್ಬಾ ಅಸಿಂಧುವಾಗುತ್ತದೆ. ಖುತ್ಬಾ ಅರಬಿ ಭಾಷೆಯಲ್ಲಾಗಿರಬೇಕು, ಖುತ್ಬಾದ ಸ್ಥಳದಲ್ಲಿ ಹಾಜರಿರುವವರಿಗೆ ಕೇಳುವಂತಿರಬೇಕು. ಆದರೆ ಪೆರ್ನಾಳ್ ಖುತ್ಬಾ ಒಬ್ಬನಿಗೆ ಕೇಳಿಸಿದರೂ ಸಾಕಾಗುತ್ತದೆ.ಈದುಲ್ ಅಳ್‍ಹಾದ ಖುತ್ಬಾದಲ್ಲಿ ಉಳ್‍ಹಿಯ್ಯತ್ ಕುರಿತಾದ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಒಂದನೇ ಖುತ್ಬಾವನ್ನು ಒಂಭತ್ತು ತಕ್ಬೀರ್‍ನಿಂದಲೂ, ಎರಡನೇ ಖುತ್ಬಾವನ್ನು ಏಳು ತಕ್ಬೀರ್‍ನಿಂದಲೂ ಆರಂಭಿಸಬೇಕು.
ಇತರ ಸುನ್ನತ್‍ಗಳು ಸ್ನಾನ: ಸ್ನಾನದ ಸಮಯವು ಪೆರ್ನಾಳ್‍ನ ಅರ್ಧ ರಾತ್ರಿಯ ಬಳಿಕ ಪ್ರಾರಂಭವಾಗುತ್ತದೆ.

ಸುಗಂಧ ಲೇಪನೆ : ತನ್ನ ಬಳಿ ಇರುವ ಅತ್ಯುತ್ತಮವಾದ ಸುಗಂಧ ದ್ರವ್ಯಗಳನ್ನು ಲೇಪಿಸಬೇಕು.

ಸೌಂದರ್ಯತೆ:
ಹೊಸ ಉಡುಪುಗಳನ್ನು ಧರಿಸಿ, ಉಗುರು, ಕೂದಲು ( ಉಲುಹಿಯತ್ ಕೊಡಲು ಉದ್ದೇಶಿಸಿರುವವರು ಉಲುಹಿಯತ್ ಕೊಟ್ಟು ಮುಗಿಯುವ ತನಕ ಶರೀರದಿಂದ ಉಗುರು ಕೂದಲು ತೆಗೆಯುವಂತಿಲ್ಲ ) ಮತ್ತು ಮಲಿನ ವಾಸನೆಗಳನ್ನೆಲ್ಲಾ ಶುದ್ದೀಕರಿಸಿ ಶರೀರ ಸೌಂದರ್ಯವನ್ನು ಹೆಚ್ಚಿಸುವುದು. ಪ್ರತಿಯೊಬ್ಬ ಮುಸ್ಲಿಮನಿಗೂ ಪೆರ್ನಾಳ್ ದಿನದಂದು ಈ ಎಲ್ಲಾ ಕರ್ಮಗಳು ಸುನ್ನತ್ತಾಗಿರುತ್ತದೆ. ನಮಾಝ್‍ಗೆ ನಡೆದು ಸಾಗುವುದು ಒಂದು ದಾರಿಯಲ್ಲಿ ಸಾಗಿ ಇನ್ನೊಂದು ದಾರಿಯಲ್ಲಿ ಮರಳಿ ಬರುವುದು. ನಡೆದು ಸಾಗಬಹುದಾದ ಎಲ್ಲಾ ಆರಾಧನೆಗಳಲ್ಲೂ (ಹಜ್ಜ್, ರೋಗಿಯ ಸಂದರ್ಶನ…) ಹೀಗೆ ದಾರಿ ಬದಲಾಯಿಸಿ ಸಂಚರಿಸುವುದು ಸುನ್ನತ್ತಾಗಿದೆ. ಈದ್ಗಾಗಿಂತ ಮಸೀದಿಯಲ್ಲೇ ನಮಾಝ್ ನಿರ್ವಹಿಸುವುದು ಉತ್ತಮ. ಮಸೀದಿ ಇಕ್ಕಟ್ಟಾಗಿ ಅಲ್ಲಿ ನಮಾಝ್ ನಿರ್ವಹಿಸಲು ಸ್ಥಳ ಸಾಕಾಗುವುದಿಲ್ಲವೆಂದಾದರೆ ವಿಶಾಲವಾದ ಈದ್ಗಾದತ್ತ ಸಾಗಬಹುದು. ತಕ್ಬೀರ್ ಈದುಲ್ ಫಿತ್ರ್‍ನಲ್ಲಿ ಮುನ್ನಾ ದಿನ ಸೂರ್ಯಾಸ್ತ ಸಮಯದಿಂದ ಹಿಡಿದು ಮರುದಿನ ಇಮಾಂ ಈದ್ ನಮಾಝ್‍ಗೆ ಕೈಕಟ್ಟುವ ತನಕ ನಿರಂತರವಾಗಿ ತಕ್ಬೀರ್ ಹೇಳಲು ಸುನ್ನತ್ತಿದೆ. ಇದಕ್ಕೆ ‘ಅತ್ತಕ್ಬೀರುಲ್ ಮುರ್ಸಲ್’ ಎನ್ನಲಾಗುತ್ತದೆ. ಈದುಲ್ ಫಿತ್ರ್‍ನಲ್ಲಿ ನಮಾಝ್‍ನ ಬಳಿಕ ತಕ್ಬೀರ್ ಹೇಳಲು ಸುನ್ನತ್ತಿಲ್ಲ. ಈದುಲ್ ಅಳ್‍ಹಾದಲ್ಲಿ ಇದು ಸುನ್ನತ್ತಿದೆ. ಈ ತಕ್ಬೀರ್‍ಗೆ ‘ಅತ್ತಕ್ಬೀರುಲ್ ಮುಖಯ್ಯದ್’ ಎನ್ನಲಾಗುವುದು.


( ಚಿತ್ರ : ಬಶೀರ್ ಚೇರಂಬಾಣೆ )

No comments

Post a Comment