ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ (Times Of Coorg) :: ಕೊಡಗು ಜಿಲ್ಲೆಯಿಂದ ಕೇರಳದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರಯಾಣಿಸಿದ್ದ ಮಹಿಳೆಯೊಬ್ಬರಿಗೆ ಹಾಗೂ 01 ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವಯನಾಡ್ ಮತ್ತು ಕಣ್ಣೂರು ಜಿಲ್ಲಾಡಳಿತದಿಂದ ಮಾಹಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯ ವಿರಾಜಪೇಟೆ ಟಿ.ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಕಳೆದ ತಿಂಗಳು 23ರಂದು ಬಸ್ಸಿನಲ್ಲಿ ಕೇರಳ ರಾಜ್ಯದ ತಿರುನಲ್ವೇಲಿ ಪಂಚಾಯತ್ ನ ಅರುಣಾಪುರ ಕಾಲೋನಿಗೆ ಕೊಡಗು ಜಿಲ್ಲೆಯ ಗೋಣಿಕೊಪ್ಪ-ಹುಣಸೂರು-ಮೈಸೂರು-ಹೆಚ್.ಡಿ.ಕೋಟೆ-ಬಾವಲಿ ಮಾರ್ಗವಾಗಿ ತೆರಳಿದ್ದಾರೆ.
ಕಳೆದ ತಿಂಗಳು 24 ರಂದು ಕೇರಳದ ಮುತ್ತಂಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ದಿನಾಂಕ 29 ರಂದು ಬಂದ ವರದಿಯಲ್ಲಿ ಮಹಿಳೆಗೆ ಸೋಂಕು ತಗುಲಿರುವುದು ಧೃಡಪಟ್ಟಿದ್ದು, ನಂತರ ಇವರನ್ನು ಮಾನಂದವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳ ರಾಜ್ಯಕ್ಕೆ ಪ್ರಯಾಣ ಬೆಳೆಸಿ ಸೋಂಕು ಧೃಡಪಟ್ಟಿದ್ದ, ಮಹಿಳೆಯು ನೆಲೆಸಿದ್ದ ವಿರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟದ ಮಾಲೀಕರು ಮತ್ತು ಕುಟುಂಬದವರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು|ಮೂಗು ದ್ರವ ಮಾದರಿಯನ್ನು ಈಗಾಗಲೇ ಸಂಗ್ರಹಿಸಿ ಪರೀಕ್ಷೆಗೆ ಕಳುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
01 ವರ್ಷದ ಹೆಣ್ಣು ಮಗು ತಾಯಿಯೊಂದಿಗೆ ಕೊಡಗಿನ ವಿರಾಜಪೇಟೆಯ ರಾಮನಗರದಲ್ಲಿ ತನ್ನ ಅಜ್ಜನ ಮನೆಯಲ್ಲಿ ನೆಲೆಸಿದ್ದು ಕಳೆದ ತಿಂಗಳು 18ರಂದು ಕೇರಳದ ಇರಿಟ್ಟಿಗೆ ತಾಯಿಯೊಂದಿಗೆ ತೆರಳಿದ್ದಾರೆ.
ಜೂನ್ 28 ರಂದು ಮಗುವಿನ ಗಂಟಲು|ಮೂಗು ದ್ರವ ಸಂಗ್ರಹಿಸಿ ಪರೀಕ್ಷೆ ಕಳುಹಿಸಿದ್ದಿ, ಮಗುವಿನ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಇರುವುದು ಧೃಡಪಟ್ಟಿದ್ದು, ಒಂದು ವರ್ಷದ ಹೆಣ್ಣು ಇದೀಗ ಕೇರಳದ ಕಣ್ಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗುವಿನ ತಂದೆ ಮತ್ತು ತಾಯಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.
ಕೊರೊನಾ ಪಾಸಿಟಿವ್ ಬಂದ ಮಗು ನೆಲೆಸಿದ್ದ ವಿರಾಜಪೇಟೆಯ ರಾಮನಗರದಲ್ಲಿರುವ ಮಗುವಿನ ತಾತನ ಮನೆಯ ಸದಸ್ಯರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು |ಮೂಗು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ.
ಹಾಗೂ ಈ ಎರಡು ಪ್ರಕರಣಗಳಲ್ಲಿ ಸಂಪರ್ಕದ ವ್ಯಕ್ತಿಗಳ ಗಂಟಲು|ಮೂಗಿನ ದ್ರವ ಮಾದರಿ ಪರೀಕ್ಷೆಗೆ ಕ್ರಮ ವಹಿಸಲಾಗಿದೆ. ಮತ್ತು ಅವರನ್ನು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಸೂಚಿಸಲಾಗಿದ್ದು, ಆದ್ದರಿಂದ ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

No comments
Post a Comment