ಪ್ರಕೃತಿ ವಿಕೋಪ ಮಾಹಿತಿ ಪಡೆದ ವಿಧಾನ ಪರಿಷತ್ ಸದಸ್ಯರು

No comments
      ಮಡಿಕೇರಿ TOC:-ಕೊಡಗು ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಅತೀ ಹೆಚ್ಚು ಹಾನಿಗೀಡಾದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳು ಯಾವುವು? ಎಂದು ಸದಸ್ಯರಾದ  ಎಸ್. ವೀಣಾ ಅಚ್ಚಯ್ಯ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಮಾಹಿತಿ ಪಡೆದಿದ್ದಾರೆ. 
 ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಅತೀ ಹೆಚ್ಚು ಹಾನಿಗೀಡಾದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ 166 ಕಾಮಗಾರಿಗಳು ಮತ್ತು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ 17 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
 ಈ ಕಾಮಗಾರಿಗಳು ಪೂರ್ಣಗೊಂಡಿವೆಯೇ, ಪೂರ್ಣಗೊಂಡಿದಲ್ಲಿ ವಿನಿಯೋಗಿಸಿದ ಅನುದಾನವೆಷ್ಟು ಎಂದು ಸದಸ್ಯರಾದ ವೀಣಾ ಅಚ್ಚಯ್ಯ ಅವರು ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವರು 2018-19ನೇ ಸಾಲಿನಲ್ಲಿ ರೂ 2800 ಲಕ್ಷಗಳ ಅನುದಾನವು ಜಿಲ್ಲಾಧಿಕಾರಿಗಳಿಂದ ಪಂಚಾಯತ್‍ರಾಜ್ ಎಂಜಿನಿಯರಿಂಗ್ ಇಲಾಖೆಗೆ ಬಿಡುಗಡೆಗೊಂಡಿದ್ದು, ಇದರಲ್ಲಿ 166 ಕಾಮಗಾರಿಗಳನ್ನು ಕೈಗೊಂಡಿದ್ದು. ಈ ಪೈಕಿ ರೂ.2402.37 ಲಕ್ಷ ಬಿಡುಗಡೆಯಾಗಿದೆ. ಒಟ್ಟು ರೂ.2328.84 ಲಕ್ಷಗಳ ವೆಚ್ಚವನ್ನು ಭರಿಸಲಾಗಿದೆ. ರೂ.546.21  ಲಕ್ಷಗಳ ಅನುದಾನದಲ್ಲಿ  17 ಕಾಮಗಾರಿಗಳನ್ನು  ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮಡಿಕೇರಿ ರವರು ಅನುಮೋದಿಸಿದ್ದು. ಈ ಪೈಕಿ ರೂ 424.68 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ರೂ. 421.41 ಲಕ್ಷ ವೆಚ್ಚವಾಗಿದೆ ಎಂದರು.
ಪೂರ್ಣಗೊಂಡ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆಯೇ ? ಎಂದು ಸದಸ್ಯರಾದ ಎಸ್.ವೀಣಾ ಅಚ್ಚಯ್ಯನವರು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವರು ಪೂರ್ಣಗೊಂಡ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ 3ನೇ ವ್ಯಕ್ತಿ ಹಾಗೂ ಗುಣನಿಯಂತ್ರಣ ವಿಭಾಗ ಪಿಆರ್‍ಇಡಿ ಅವರಿಂದ ತಪಾಸಣೆಗೆ ಒಳಪಡಿಸಲಾಗಿದೆ ಎಂದರು.

No comments

Post a Comment