ಕೋವಿಡ್-19 ಸೋಂಕು ಹರಡದಂತೆ ಗಮನಹರಿಸಲು ನಿಯಂತ್ರಿತ ಪ್ರದೇಶ ಸ್ಥಾಪನೆ : ಡಾ.ಎಸ್.ಎಚ್ ಮಹೇಶ್
ಮಡಿಕೇರಿ (Times Of Coorg):-ಕೋವಿಡ್-19 ನಿಯಂತ್ರಿತ ಪ್ರದೇಶದಲ್ಲಿ 14 ದಿನಗಳ ಕಾಲ ಸೀಲ್‍ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ (ಪ್ರಭಾರ) ಡಾ.ಎಸ್.ಎಚ್.ಮಹೇಶ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವೀಡಿಯೋ ಸಂವಾದದಲ್ಲಿ ಮಾಹಿತಿ ನೀಡಿದ ಅವರು ನಿಯಂತ್ರಿತ ಪ್ರದೇಶದಲ್ಲಿ ಸೀಲ್‍ಡೌನ್ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದು, ಈ ಬಗ್ಗೆ ಸೋಂಕಿತ ಪಾಸಿಟಿವ್ ಪ್ರಕರಣದ ವ್ಯಕ್ತಿ ಕಂಡುಬಂದಲ್ಲಿ, ಸೋಂಕಿತ ವ್ಯಕ್ತಿ ಓಡಾಡಿರುವುದರಿಂದ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷಿಸಿದ ವ್ಯಕ್ತಿಗಳಲ್ಲೂ ಸಹ ಪಾಸಿಟಿವ್ ಬಂದಲ್ಲಿ ಮತ್ತೆ ಅಂದಿನಿಂದ 14 ದಿನಗಳ ಕಾಲ ನಿಯಂತ್ರಿತ ಪ್ರದೇಶದಲ್ಲಿ ಸೀಲ್‍ಡೌನ್ ಮುಂದುವರೆಸಲಾಗುತ್ತದೆ ಎಂದರು.
ಇತರೆ ಕಡೆಗಳಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಪ್ರಥಮ ಆದ್ಯತೆಯಾದ್ದರಿಂದ ಕಂಟೈನ್‍ಮೆಂಟ್ ವಲಯ ಸ್ಥಾಪಿಸಲಾಗುತ್ತದೆ ಎಂದರು.
ಯಾವುದಾದರೂ ಒಂದು ಸೋಂಕಿತ ಪ್ರಕರಣ ಕಂಡುಬಂದಾಗ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಅಥವಾ ಹೋಂ ಐಸೋಲೇಷನ್‍ಗೆ ದಾಖಲಿಸಲಾಗುತ್ತದೆ. ಒಂದು ವೇಳೆ ಕೋವಿಡ್ ಕೇರ್ ಸೆಂಟರ್ ಅಥವಾ ಕೋವಿಡ್ ಆಸ್ಪತ್ರೆಗೆ ದಾಖಲಾದವರಲ್ಲಿ ರೋಗ ಲಕ್ಷಣಗಳು ಕಂಡುಬರದಿದ್ದಲ್ಲಿ ಅವರ ಮೂಗು ಮತ್ತು ಗಂಟಲು ದ್ರವ ತೆಗೆದ 10 ದಿನಗಳ ನಂತರ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ಮಾಡುವ ಸಂದರ್ಭದಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಬೇಕು ಎಂದು ಅವರು ಹೇಳಿದರು.
ಹಾಗೆಯೇ 10 ದಿನಗಳ ಕಾಲ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ನಲ್ಲಿ ಮತ್ತು 14 ದಿನಗಳ ಕಾಲ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿದ್ದಲ್ಲಿ ಕೋವಿಡ್ 19 ಸೋಂಕನ್ನು ನಿವಾರಿಸಬಹುದು ಎಂದು ಡಾ.ಮಹೇಶ್ ಅವರು ತಿಳಿಸಿದರು.
ಸೋಂಕು ಪ್ರಕರಣ ಕ್ಲಿನಿಕ್ ಅಥವಾ ಆಸ್ಪತ್ರೆಗಳಲ್ಲಿ ಕಂಡುಬಂದಲ್ಲಿ ಅಂತಹ ಆಸ್ಪತ್ರೆಯನ್ನು ಸೋಂಕು ನಿವಾರಣೆ ಮಾಡಲಾಗುತ್ತದೆ. ಮರುದಿನ ಬಳಸಬಹುದಾಗಿದೆ. ಸೋಂಕು ಪ್ರಕರಣ ಪ್ರಾಥಮಿಕ ಸಂಪರ್ಕದಲ್ಲಿ ಬಂದ ವೈದ್ಯರು, ಶ್ರೂಶ್ರೂಷಕರು ಮತ್ತು ಇತರರು ಕಡ್ಡಾಯವಾಗಿ 7 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರಬೇಕು. 7 ದಿನಗಳ ನಂತರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಲ್ಲಿ ವೃತ್ತಿ ಆರಂಭಿಸಬಹುದಾಗಿದೆ ಎಂದು ಡಾ.ಮಹೇಶ್ ಅವರು ತಿಳಿಸಿದರು.

No comments
Post a Comment