ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಅರ್ಹತೆ ಅನುಸಾರ ಪರಿಹಾರ ಧನ

No comments

     ಮಡಿಕೇರಿ (Times Of Coorg):-ಸರ್ಕಾರದ ಆದೇಶದನ್ವಯ ಕೋವಿಡ್-19 ರ ಲಾಕ್‍ಡೌನ್ ಸಂಬಂಧ ಸಂಕಷ್ಟಕ್ಕೊಳಗಾದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಅರ್ಹತೆ ಅನುಸಾರ ಪರಿಹಾರ ಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುವುದು.

    ಸಹಾಯ ಧನ ನೀಡಲಾಗುವ ಹಣ್ಣು ಮತ್ತು ತರಕಾರಿ ಬೆಳೆಗಳು: ಬಾಳೆ, ಪಪ್ಪಾಯ, ಅಂಜೂರ, ಅನಾನಸ್ಸು, ಕಲ್ಲಂಗಡಿ, ಕರಬೂಜ ಹಣ್ಣಿನ ಬೆಳೆಗಳು ಮತ್ತು ಹಸಿಮೆಣಸಿನಕಾಯಿ, ಟೊಮೆಟೋ, ಎಲೆಕೋಸು, ಸಿಹಿಕುಂಬಳ, ಬೂದುಕುಂಬಳ, ಕ್ಯಾರೇಟ್, ಈರುಳ್ಳಿ, ದಪ್ಪಮೆಣಸಿನಕಾಯಿ ತರಕಾರಿ ಬೆಳೆಗಳು

    ಸಹಾಯ ಧನದ ವಿವರ: ಪ್ರತಿ ಫಲಾನುಭವಿಗಳಿಗೆ ಗರಿಷ್ಠ 1 ಹೆಕ್ಟೇರ್ ಪ್ರದೇಶಕ್ಕೆ 15000 ರೂ. ಮೀರದಂತೆ ಅಥವಾ ನಿಗಧಿಪಡಿಸಿದ ಹಣ್ಣು ಮತ್ತು ತರಕಾರಿ ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ನೀಡಲಾಗುವುದು.  ಕನಿಷ್ಠ ಪರಿಹಾರದ ಮೊತ್ತ 2000 ರೂ. ನಿಗಧಿಪಡಿಸಲಾಗಿದೆ.

     ಫಲಾನುಭವಿಗಳ ಆಯ್ಕೆ ಮತ್ತು ಅರ್ಹತೆ: ಮೇಲೆ ನಮೂದಿಸಿದ ಹಣ್ಣಿನ ಬೆಳೆಗಳಿಗೆ ಪರಿಹಾರ ಪಡೆಯಲು ಕಡ್ಡಾಯವಾಗಿ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರು ಮಾತ್ರ  ಅರ್ಹರಾಗಿರುತ್ತಾರೆ.

     ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರ ಪಟ್ಟಿಯನ್ನು ತಾಲ್ಲೂಕು ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಲಾಗುವುದು.  ಮತ್ತು ಸದರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಲಾಗುವುದು. ಮೇಲೆ ನಮೂದಿಸಿದ ತರಕಾರಿ ಬೆಳೆಗಳಿಗೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ರೈತರು ಅರ್ಜಿಯೊಂದಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.

    ಬೆಳೆ ಸಮೀಕ್ಷೆಯಲ್ಲಿ ನಮೂದಾಗದೆ ಇರುವ ತರಕಾರಿ ಬೆಳೆಗಾರರು ಅರ್ಜಿ ನಮೂನೆಯೊಂದಿಗೆ ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

    ಬೆಳೆಗಾರರ ಹೆಸರಿನಲ್ಲಿರುವ ಆರ್‍ಟಿಸಿಯ ಮೂಲ ಪ್ರತಿ, ಜಂಟಿ ಖಾತೆಯಾಗಿದ್ದಲ್ಲಿ, ಒಪ್ಪಿಗೆ ಪತ್ರ, ಸ್ವಯಂ ಘೋಷಿತ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಬ್ಯಾಂಕ್ ಅಕೌಂಟ್ ನಂಬರ್, ಐಎಫ್‍ಎಸ್‍ಸಿ ಕೋಡ್, ಹೆಸರು, ವಿಳಾಸ ಇರುವ ಬ್ಯಾಂಕ್ ಪಾಸ್ ಪುಸ್ತಕದ ಪುಟದ ಸ್ಪಷ್ಟವಾಗಿ ಕಾಣುವ ಪ್ರತಿ, ಆರ್.ಟಿ.ಸಿದಾರರು ಮರಣ ಹೊಂದಿದಲ್ಲಿ ಅವರ ಕುಟುಂಬದವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

    ನಿಗಧಿತ ಅರ್ಜಿ ನಮೂನೆ ಪಡೆಯುವ ಸ್ಥಳ: ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಇಲಾಖೆಯ ಕಚೇರಿಗಳು, ಎಲ್ಲಾ ಕಂದಾಯ ನಾಡ ಕಚೇರಿಗಳಲ್ಲಿ ಅರ್ಜಿ ಲಭ್ಯವಿರುತ್ತದೆ.

     ಅರ್ಜಿ ಸಲ್ಲಿಸಲು ಜೂನ್ 17 ಕೊನೆಯ ದಿನಾಂಕವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಮಡಿಕೇರಿ-ದೂರವಾಣಿ ಸಂಖ್ಯೆ:9448336863, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಸೋಮವಾರಪೇಟೆ-ದೂರವಾಣಿ ಸಂಖ್ಯೆ:855393335, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪೆÇನ್ನಂಪೇಟೆ-ದೂರವಾಣಿ ಸಂಖ್ಯೆ:9448049020 ಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment