CAA, NRC, NPR | ಸರಕಾರ v/s ಪೌರರು ✍️ ಮುಸ್ತಫ ಸಿದ್ದಾಪುರ
ಮುಸ್ತಫ ಸಿದ್ದಾಪುರ
1955 ರ ಭಾರತೀಯ ಪೌರತ್ವದ ಈಗಿನ ತಿದ್ದುಪಡಿ, 2019ರ ಡಿಸೆಂಬರ್ 9 ರಂದು ಲೋಕಸಭೆ ಹಾಗೂ ಡಿಸೆಂಬರ್ 11 ರಂದು ರಾಜ್ಯಸಭೆಯಲ್ಲೂ ಅಂಗೀಕಾರವಾಗಿ ಡಿಸೆಂಬರ್ 12 ಕ್ಕೆ ರಾಷ್ಟ್ರಪತಿಗಳು ಸಹಿ ಮಾಡುವ ಮೂಲಕ ಕಾಯ್ದೆಯಾಗಿ ರೂಪುಗೊಂಡಿದ್ದು, ಇದಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೆ, 2020 ರ ಜನವರಿ 10 ರಂದು ಕಾಯ್ದೆಯನ್ನು ಅನುಷ್ಠಾನಿಸಿ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ಕ್ಕಿಂತ ಮುಂಚಿತವಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರರನ್ನು ಅಕ್ರಮ ವಲಸಿಗರ ಪಟ್ಟಿಯಿಂದ ಹೊರಗಿಟ್ಟು ಅವರಿಗೆ ಭಾರತೀಯ ಪೌರತ್ವವನ್ನು ನೀಡುವುದಾಗಿದೆ ಈ ನಿಯಮ.
ಈ ಮೂರು ದೇಶಗಳಿಂದ ಬಂದಿರುವ ಮುಸ್ಲಿಮೇತರರ ಪೌರತ್ವದ ಅರ್ಜಿಗಳನ್ನು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಅವರಿಗೆ ಬೇಕಾದ ಸರ್ಟಿಫಿಕೇಟನ್ನು ಕೇಂದ್ರ ಸರಕಾರ ನೀಡಬೇಕು. ಜೊತೆಗೆ ಇವರು ಸಾಮಾನ್ಯ ಪೌರತ್ವದ ನಿಯಮಗಳನ್ನು ಪಾಲಿಸಬೇಕಾಗಿದೆ. ಇದೀಗ ಸಾಮಾನ್ಯ ಪೌರತ್ವದ ನಿಯಮದಲ್ಲೂ ಸೇರ್ಪಡೆ ಮಾಡಲಾಗಿದೆ. ಪೌರತ್ವಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಸಲ್ಲಿಸುವ ದಿನದ ಹಿಂದಿನ 12 ತಿಂಗಳು ಸತತವಾಗಿ ಹಾಗೂ ಇದರ ಹಿಂದಿನ 11 ವರ್ಷಗಳು (11+1= 12 ವರ್ಷ) ಅರ್ಜಿದಾರನು ಭಾರತದಲ್ಲಿ ವಾಸ ಮಾಡಿರಬೇಕು ಎಂಬುದಾಗಿತ್ತು ಹಿಂದಿನ ನಿಯಮ. ಈಗ ಮೂರು ದೇಶಗಳ 6 ಧರ್ಮದವರು 5 ವರ್ಷ ಭಾರತದಲ್ಲಿ ವಾಸ ಮಾಡಿದ್ದರೆ ಸಾಕು ಎಂದು ವಿನಾಯಿತಿ ನೀಡಲಾಗಿದೆ.
ನಮ್ಮ ಸಂವಿಧಾನ ರಚನೆಯ ಸಂದರ್ಭ ಪೌರತ್ವದ ನಿಯಮಗಳ ಹಾಗೂ ಅದರ ಕಾನೂನಿನ ಬಗ್ಗೆ ಬಹಳ ಸುದೀರ್ಘವಾದ ಚರ್ಚೆಗಳು ನಡೆದು, ತುಂಬಾ ಸಮಯಗಳ ಚರ್ಚೆಯ ನಂತರವಾಗಿದೆ ಪೌರತ್ವ ಕಾಯ್ದೆಯನ್ನು ರಚಿಸಿರುವುದು. ಅಂದರೆ ಇಡೀ ಸಂವಿಧಾನದಲ್ಲಿ ಅತೀ ಹೆಚ್ಚು ಸಮಯ ಹಾಗೂ ಚರ್ಚೆ ನಡೆದಿರುವ ಅತ್ಯಂತ ಗಂಭೀರ ವಿಚಾರವಾಗಿದೆ ಭಾರತೀಯ ಪೌರತ್ವದ ನಿಯಮ.
ನಮ್ಮ ಸಂವಿಧಾನದಲ್ಲಿ ಸಮಾನತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತದೊಳಗೆ ಯಾವುದೇ ವ್ಯಕ್ತಿಗು ಸಮಾನವಾದ ನ್ಯಾಯ ಹಾಗೂ ರಕ್ಷಣೆಯನ್ನು ನಿಷೇಧಿಸಬಾರದು ಎಂಬುದಾಗಿದೆ. ಅಂದರೆ ಇದುವರೆಗಿನ ಪೌರತ್ವ ತಿದ್ದುಪಡಿಗಳಲ್ಲಿ ಹಾಗೂ ಸಂವಿಧಾನದಲ್ಲಿ ಎಲ್ಲಿಯೂ ಸಹ ಪೌರತ್ವಕ್ಕೆ ಸಂಬಂಧಿಸಿದಂತೆ ಧರ್ಮಾದಾರಿತವಾಗಿ ಕಾನೂನು ತಿದ್ದುಪಡಿಯನ್ನು ಮಾಡಿಯೇ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಈ ಮೂರು ದೇಶಗಳನ್ನು ಮಾತ್ರ ಆಯ್ಕೆ ಮಾಡಲಿಕಿರುವ ಕಾರಣ ಏನು? ನಮ್ಮ ಪಕ್ಕದ ದೇಶಗಳು ಎಂಬ ಕಾರಣಕ್ಕಾಗಿದ್ದಲ್ಲಿ ಬೂಟಾನ್, ಚೀನಾ, ಮ್ಯಾನ್ಮಾರ್, ನೇಪಾಳ, ಶ್ರೀಲಂಕವನ್ನು ಯಾಕೆ ಸೇರಿಸಲಿಲ್ಲ? ಅಖಂಡ ಭಾರತದ ಕಾರಣ ಆಗಿದ್ದಲ್ಲಿ ಮ್ಯಾನ್ಮಾರನ್ನು ಯಾಕೆ ಸೇರಿಸಲಿಲ್ಲ? ಅಫ್ಘಾನಿಸ್ತಾನವನ್ನು ಹೇಗೆ ಸೇರಿಸಿದ್ದು? ಇನ್ನು ಅದಲ್ಲ ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ದೇಶಗಳು ಎಂಬ ಕಾರಣಕ್ಕಾದರೆ ಕೇವಲ 106 ಕಿ.ಮೀ ಗಡಿ ಹಂಚಿಕೊಳ್ಳುವ ಅಫ್ಘಾನಿಸ್ತಾನವನ್ನು ಸೇರಿಸುವಾಗ, 3488 ಕಿ.ಮೀ ಗಡಿ ಹಂಚಿಕೊಳ್ಳುವ ಚೀನಾ, 1751 ಕಿ.ಮೀ ಗಡಿ ಹಂಚಿಕೊಳ್ಳುವ ನೇಪಾಳ, 1643 ಕಿ.ಮೀ ಗಡಿ ಹಂಚಿಕೊಳ್ಳುವ ಮ್ಯಾನ್ಮಾರ್, 699 ಕಿ.ಮೀ ಗಡಿ ಹಂಚಿಕೊಳ್ಳುವ ಬೂಟಾನ್ ಯಾಕೆ ಈ ದೇಶಗಳನ್ನು ಸೇರಿಸಲಿಲ್ಲ?
ಪಕ್ಕದ ಧರ್ಮ ಆಧಾರಿತ ದೇಶಗಳಲ್ಲಿ ಧಾರ್ಮಿಕ ಶೋಷಣೆಗೆ ಒಳಗಾಗುತ್ತಿರುವವರು ಎಂಬ ಕಾರಣಕ್ಕೆ ಆಗಿದ್ದಲ್ಲಿ ಧರ್ಮ ಆಧಾರಿತ ದೇಶಗಳಾದ ಮ್ಯಾನ್ಮಾರ್ ಮತ್ತು ಬೂಟಾನ್ ದೇಶಗಳಲ್ಲಿ ಧಾರ್ಮಿಕ ಶೋಷಣೆಗೆ ಒಳಗಾಗುತ್ತಿರುವವರನ್ನು ಯಾಕೆ ಸೇರಿಸಲಿಲ್ಲ?
ಪಕ್ಕದ ಇಸ್ಲಾಂ ದೇಶಗಳಲ್ಲಿ ಧಾರ್ಮಿಕ ಶೋಷಣೆಗೆ ಒಳಗಾಗುತ್ತಿರುವ 6 ಧರ್ಮದವರಿಗೆ ರಕ್ಷಣೆ ನೀಡಿ ಪೌರತ್ವ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳುತ್ತಿದ್ದಾರೆ. ಆದರೆ ಇದೇ ದೇಶಗಳಲ್ಲಿಯೇ ಧಾರ್ಮಿಕ ಶೋಷಣೆಗೆ ಒಳಗಾಗುತ್ತಿರುವ ಅಹ್ಮದೀಯಾ ಮತ್ತು ಶಿಯಾಗಳು ಹಾಗೂ ಯಾವುದೇ ಧರ್ಮದಲ್ಲಿ ಗುರುತಿಸಿಕೊಳ್ಳದವರೂ ಇದ್ದಾರೆ ಇವರನ್ನು ಯಾಕೆ ಕೈ ಬಿಡಲಾಗಿದೆ? ಇವರು ಈ 6 ಧರ್ಮದವರಲ್ಲ ಎಂಬ ಕಾರಣಕ್ಕಾಗಿ ಅವರನ್ನು ಪಟ್ಟಿಯಿಂದ ಹೊರಗಿಟ್ಟು ಕೋಮು ವರ್ಗೀಕರಣ ಮಾಡಲು ಜಾತ್ಯಾತೀತ ದೇಶದಲ್ಲಿ ಹೇಗೆ ಸಾಧ್ಯ? ಭಾಷೆಯ ಹೆಸರಿನಲ್ಲಿ ಹಾಗೂ ಜನಾಂಗೀಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳು ಯಾಕೆ ವಿಷಯವಾಗಿಲ್ಲ?
ಪಕ್ಕದ ದೇಶಗಳಿಂದ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುವವರನ್ನು ಏನಂತ ಕರೆಯುವುದು? ವಲಸಿಗರು ಅಂತನ? ಅದಲ್ಲ ನಿರಾಶ್ರಿತರು ಅಂತನ? ಜೀವನ ಮಾರ್ಗಕ್ಕಾಗಿ ಕೆಲಸ ಹುಡುಕಿ ಸ್ವ ಇಚ್ಛೆಯಿಂದ ಬರುವವರನ್ನು ವಲಸಿಗರು ಅಂತಾರೆ. ಸಂದಿಗ್ಧ ಸನ್ನಿವೇಶದ ಒತ್ತಡಗಳಿಂದಾಗಿ ಜೀವ ರಕ್ಷಣೆಗಾಗಿ ಬರುವವರನ್ನು ನಿರಾಶ್ರಿತರು ಅಂತಾರೆ. ನಿರಾಶ್ರಿತರಿಗೆ ಆಶ್ರಯನಾ ಅಥವಾ ಪೌರತ್ವವನ್ನ ನೀಡುವುದು? ಕೆಲವು ದೇಶಗಳಿಂದ ಬರುವ ಕೆಲವರಿಗೆ ಪೌರತ್ವ ಹಾಗೂ ಬೇರೆ ಕೆಲವು ದೇಶಗಳಿಂದ ಬರುವವರಿಗೆ ಆಶ್ರಯವನ್ನು ನೀಡುವುದು ತಾರತಮ್ಯ ಅಲ್ಲದೆ ಮತ್ತೇನು?
ಸರ್ವರಿಗೂ ಅನ್ವಯವಾಗುವ 11 ವರ್ಷದ ವಾಸದ ಕಾಲ ಮಿತಿಯನ್ನು 3 ದೇಶಗಳ 6 ಧರ್ಮದವರಿಗೆ ಮಾತ್ರ 5 ವರ್ಷ ಮಾಡಿರುವುದು ಹೇಗೆ? 2016 ರಲ್ಲಿ ಪೌರತ್ವ ತಿದ್ದುಪಡಿ ಬಿಲ್ ಜಂಟಿ ಸಂಸತ್ತಿನ 20 ಸದಸ್ಯರ ಆಯ್ಕೆ ಸಮಿತಿಯ ಮುಂದೆ ಚರ್ಚೆಗೆ ಬಂದಾಗ ಈ ಬಲ್ ಸಂವಿಧಾನ ವಿರೋಧಿ ಹಾಗೂ ತಾರತಮ್ಯದಿಂದ ಕೂಡಿದೆ ಎಂದು 10 ಮಂದಿ ಸದಸ್ಯರು ವಿರೋಧ ಮಾಡಿದ್ದರು. ಆದರೆ ಈ ಬಾರಿ (2019) ಆಯ್ಕೆ ಸಮಿತಿ ಮುಂದೆ ಬಲ್ ಬರಲೇ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಅಸ್ಸಾಮಿನಲ್ಲಿ ಎನ್‍ಆರ್‍ಸಿಯಿಂದಾಗಿ 19 ಲಕ್ಷ ಜನರು ಪೌರತ್ವವನ್ನು ಕಳೆದುಕೊಂಡಾಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ನಂತರವಷ್ಟೆ ಎನ್‍ಆರ್‍ಸಿಯನ್ನು ಜಾರಿ ಮಾಡುವುದೆಂದು ಕೊಲ್ಕತ್ತಾದಲ್ಲಿ ನಡೆದ ರ್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದಾರೆ.
ದೇಶಾದ್ಯಂತ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್ ವಿರುದ್ಧ ಪ್ರತಿಭಟನೆಗಳ ಕಾವು ಹೆಚ್ಚಾದಂತೆ ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು "ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 2014 ರಿಂದ ಇದುವರೆಗೂ ಸಂಸತ್ತಿನಲ್ಲಾಗಲಿ, ಕ್ಯಾಬಿನಟಿನಲ್ಲಾಗಲಿ ಎನ್‍ಆರ್‍ಸಿ ಬಗ್ಗೆ ಪ್ರಸ್ತಾಪ ಮಾಡಿಯೇ ಇಲ್ಲ" ಎಂದು ಭಾಷಣ ಮಾಡುತಾರೆ. ಆದರೆ ರಾಜ್ಯ ಸಭೆಯಲ್ಲಿ, ವಿವಿಧ ಚುನಾವಣಾ ರ್ಯಾಲಿಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಅಮಿತ್ ಶಾ ಅವರು "ಇಡೀ ದೇಶಾದ್ಯಂತ ಎನ್‍ಆರ್‍ಸಿಯನ್ನು ಜಾರಿ ಮಾಡುವುದಾಗಿ" ಹೇಳುತ್ತಲೇ ಬಂದಿದ್ದಾರೆ.
ಎನ್‍ಆರ್‍ಸಿಗೆ ಸಂಬಂಧಿಸಿದ ಮಾನದಂಡಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಹಾಗೂ ಚರ್ಚೆಗಳ ನಂತರವಷ್ಟೆ ಅಂತಿಮಗೊಳಿಸುವುದು ಎಂದು ಕೇಂದ್ರದ ಕೆಲವು ಸಚಿವರುಗಳು ಹೇಳುತ್ತಿದ್ದರೂ, ಪ್ರಧಾನಿ ಹಾಗೂ ಗೃಹ ಸಚಿವರ ತದ್ವಿರುದ್ಧದ ಹೇಳಿಕೆಗಳಿಂದಾಗಿ ನಾಗರಿಕರು ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ಗೊಂದಲದ ಹೇಳಿಕೆಗಳು ಹಾಗೂ ಅಸ್ಸಾಮ್ ರಾಜ್ಯದ ಘಟನೆ ಕಣ್ಣೆದುರಿಗೆ ಇರುವುದರಿಂದ ನ್ಯಾಯುತವಾಗಿ ಜನರು ಭಯಬೀತರಾಗಿದ್ದಾರೆ. ಈಗಾಗಲೆ ಅಸ್ಸಾಮಿನಲ್ಲಿ ಬಂಧನ ಕೇಂದ್ರಗಳಲ್ಲಿ (ಡಿಟೆನ್ಷನ್ ಸೆಂಟರ್) 28 ಜನ ಸತ್ತಿರುವುದಾಗಿ ಕೇಂದ್ರ ಸಚಿವರೆ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ದೇಶದಲ್ಲಿ ಯಾವುದೇ ಬಂಧನ ಕೇಂದ್ರಗಳು (ಡೆಟೆನ್ಷನ್ ಸೆಂಟರ್) ತೆರೆದಿಲ್ಲ ಎಂದು ಪ್ರಧಾನಿ ಹಳ್ತಿದ್ದಾರೆ. 1971 ರ ದಾಖಲೆಗಳನ್ನಾಗಿದೆ ಅಸ್ಸಾಮಿನಲ್ಲಿ ಕೇಳಿರುವುದು. ಪ್ರಾಕೃತಿಕ ದುರಂತದಿಂದ ಎಲ್ಲವನ್ನೂ ಕಳೆದುಕೊಂಡವರು, ದಶಕಗಳಿಂದ ಭೂಮಿಯ ಹಕ್ಕನ್ನೂ ಲಭಿಸದ ದಲಿತರು, ಆದಿವಾಸಿಗಳು, ಅಲೆಮಾರಿಗಳು, ಎಲ್ಲಾ ಧರ್ಮದಲ್ಲಿರುವ ಬಡಜನರು ಎಲ್ಲಿಂದ ದಾಖಲೆಗಳನ್ನು ನೀಡಲು ಸಾಧ್ಯ?
ಅಸ್ಸಾಮಿನ ಈ 19 ಲಕ್ಷ ಜನರು ಭಾರತೀಯ ಪೌರರಲ್ಲದಿದ್ದರೆ ಮತ್ಯಾರು? ಯಾವುದಾದರು ದೇಶದ ಹೆಸರಿನಲ್ಲಿ ಗುರುತಿಸಲ್ಪಟ್ಟವರು ಹಾಗೂ ಕೆಲವು ಹಕ್ಕುಗಳನ್ನು ಪಡೆಯಲು ಅರ್ಹರಾದವರಾಗಿದ್ದಾರೆ ನಿರಾಶ್ರಿತರು. ಎನ್‍ಆರ್‍ಸಿ ಪಟ್ಟಿಯಿಂದ ಹೊರ ಹೋದವರು ಈ ಆಧಾರದಲ್ಲಿ ನಿರಾಶ್ರಿತರಾಗಲ್ಲ. ಯಾವುದೇ ದೇಶದ ಪೌರತ್ವ ಇಲ್ಲದ ಕಾರಣ ವಲಸಿಗರೂ ಆಗಲ್ಲ. "ದಾಖಲೆ ಹಾಗೂ ಪೌರತ್ವ ಇಲ್ಲದ ಕಾನೂನು ವಿರೋಧಿ ಮನುಷ್ಯ ಜೀವಗಳ"!?. ಈ ರೀತಿಯ 19 ಲಕ್ಷ ಜನರನ್ನಾಗಿದೆ ಅಸ್ಸಾಮಿನಲ್ಲಿ ಮಾತ್ರ ಸೃಷ್ಟಿ ಮಾಡಿರುವುದು. ಇದನ್ನು ದೇಶಾದ್ಯಂತ ಜಾರಿ ಮಾಡುವುದಾಗಿ ಅಮಿತ್ ಶಾ ಹೇಳ್ತಿದ್ದಾರೆ. ಇದರ ಮಧ್ಯೆ ಎನ್‍ಪಿಆರ್ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿದ್ದು, ಎನ್‍ಪಿಆರ್ ಎನ್‍ಆರ್‍ಸಿಯ ಮೊದಲ ಹೆಜ್ಜೆಯಾಗಿದೆ ಎಂದು ಸರಕಾರ ಅಧಿಕೃತವಾಗಿ ತಿಳಿಸಿರುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.

No comments
Post a Comment