ಬೆಂಗಳೂರು: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)ಯನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದೆಂದು ಹೇಳಿಕೆ ನೀಡಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರದು ಕೇವಲ ಬೆದರಿಸುವ ವಿಫಲ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಎನ್‍ಆರ್‍ಸಿ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಮುಸ್ಲಿಮ್ ಸಮುದಾಯವನ್ನು ದಮನಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಕೋಮುವಾದಿ ಹಾಗೂ ಜನಾಂಗೀಯವಾದಿ ನೀತಿಗೆ ಮೊರೆ ಹೋಗಿವೆ. ಭಾರತ ದೇಶದ ನಾಗರಿಕರ ಅಭಿವೃದ್ಧಿ, ವಿಕಾಸದ ಬಗ್ಗೆ ಚಿಂತಿಸುವುದರ ಬದಲಾಗಿ ದೇಶದ ಪ್ರಜೆಗಳನ್ನು ಹೊರದಬ್ಬುವುದು ಹೇಗೆ ಎಂಬ ಬಗ್ಗೆ ಯೋಚಿಸುವ ಇಂತಹ ಕುತ್ಸಿತ ಹಾಗೂ ವಿಭಜನಕಾರಿ ಮನಸ್ಸುಗಳು ದೇಶದ ಆಡಳಿತದ ಚುಕ್ಕಾಣಿಯಲ್ಲಿ ವಕ್ಕರಿಸಿರುವುದು ಭಾರತದ ಅತ್ಯಂತ ದುರದೃಷ್ಟವಾಗಿದೆ. ಆರೆಸ್ಸೆಸ್ಸಿನ ಜನಾಂಗೀಯವಾದಿ ಮತ್ತು ವಿಭಜನವಾದಿ ಸಿದ್ಧಾಂತಗಳನ್ನು ಕುತಂತ್ರಗಳ ಮೂಲಕ ಜಾರಿಗೆ ತರುತ್ತಿರುವ ಬಿಜೆಪಿ ಈ ದೇಶದ ಸಮಗ್ರತೆಗೆ, ಏಕತೆಗೆ ಹಾಗೂ ಭಾವೈಕ್ಯತೆಗೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‍ಶಾ ಸಂವಿಧಾನ ವಿರೋಧಿ "ಪೌರತ್ವ ತಿದ್ದುಪಡಿ ಮಸೂದೆ"ಯನ್ನು ಮಂಡಿಸಿ ಜಾರಿಗೆ ತರಲಾಗುವುದೆಂದು ದೇಶದ ಮುಸ್ಲಿಮರನ್ನು ಬೆದರಿಸುವ ಹತಾಶ ಪ್ರಯತ್ನಕ್ಕೆ ಇಳಿದಿದ್ದಾರೆ. ಎಸ್‍ಡಿಪಿಐ ಹಾಗೂ ದೇಶದ ಎಲ್ಲಾ ಸಂವಿಧಾನಪ್ರಿಯ ಹಾಗೂ ಜಾತ್ಯಾತೀತ ಜನರೆಲ್ಲ ಒಂದಾಗಿ ಬಿಜೆಪಿ ಹಾಗೂ ಸಂಘಪರಿವಾರದ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲಾಗುವುದು ಎಂದು ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.
ಎನ್‍ಆರ್‍ಸಿ ಎಂಬ ಬೆದರುಬೊಂಬೆಗೆ ಈ ದೇಶದ ಜನತೆ ಸೊಪ್ಪು ಹಾಕಲಾರರು. ಎಸ್‍ಡಿಪಿಐ ಅದನ್ನು ಸಾರಸಗಟವಾಗಿ ತಿರಸ್ಕರಿಸುತ್ತಿದೆ. ಯಾವುದೇ ಸಮುದಾಯಗಳ ಜನರು ಅದಕ್ಕೆ ಬೆದರಲಾರರು ಎಂದು ಇಲ್ಯಾಸ್ ಮುಹಮ್ಮದ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಜನರು ಪ್ರವಾಹ ಸಂತ್ರಸ್ತರಾಗಿ ಮನೆ ಮಾರುಗಳನ್ನು ಕಳೆದುಕೊಂಡು ಅನ್ನಕ್ಕಾಗಿ ಪರದಾಡುತ್ತಿರುವಾಗ ಅಂತಹವರ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಏನೇನೂ ಮಾಡದ ಕೇಂದ್ರ ಹಾಗೂ ರಾಜ್ಯ ಸರಕಾರ ಇಂತಹ ಹೇಳಿಕೆಗಳಿಂದ ಜನರ ದಿಕ್ಕು ತಪ್ಪಿಸುತ್ತಿದೆ. ದೇಶದಲ್ಲಿ ಮೋದಿ ಸರಕಾರದ ಅತೀ ಜನವಿರೋಧಿ ಆಡಳಿತದಿಂದ ಜನರು ತತ್ತರಿಸುತ್ತಿದ್ದು, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಅಮಿತ್ ಶಾ ಹಾಗೂ ಬೊಮ್ಮಾಯಿ ಹೇಳಿಕೆಗಳು ಖಂಡನೀಯ ಎಂದು ಇಲ್ಯಾಸ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments
Post a Comment