ನಾಪೋಕ್ಲುವಿನಲ್ಲಿ ಸೌಹಾರ್ದತೆಯ ಹುತ್ತರಿ ಹಬ್ಬ ಆಚರಣೆ

No comments
ವರದಿ :ಝಕರಿಯ ನಾಪೋಕ್ಲು.

 ನಾಪೋಕ್ಲು : ಕೊಡಗು ಜಿಲ್ಲಾಧ್ಯಂತ ಬುಧವಾರದಂದು ಸುಗ್ಗಿಯ ಹಬ್ಬ ಹುತ್ತರಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ನಾಪೋಕ್ಲು ಸಮೀಪದ ಬೇತು, ಮತ್ತು ಹಳೇ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಹುತ್ತರಿ  ಆಚರಣೆಯಲ್ಲಿ ಪಾಲ್ಗೊಂಡು ಸೌಹಾರ್ದತೆಗೆ ಸಾಕ್ಷಿಯಾದರು.ಬೇತು ಗ್ರಾಮದ ದಿವಂಗತ ಮಾಜಿ ಮಂತ್ರಿಗಳಾದ ಮುಂಡಂಡ ಎಂ. ನಾಣಯ್ಯಹಾಗೂ ದಿವಂಗತ ರಘು ಸೋಮಣ್ಣ ಅವರ ಮಕ್ಕಳು ಕುಟುಂಬಸ್ಥರು ಪ್ರತಿವರ್ಷ ಹುತ್ತರಿ ಹಬ್ಬವನ್ನು ತಮ್ಮ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದರು. ಅದೇ ರೀತಿ ಈ ವರ್ಷವೂ ಕೂಡ ಹುತ್ತರಿ ಹಬ್ಬಕ್ಕೆ ಸ್ಥಳೀಯ ನೆರೆ ಮನೆಯವರಾದ ಮುಸ್ಲಿಂ ಬಾಂಧವರು  ಹುತ್ತರಿ ಆಚರಣೆಯಲ್ಲಿ ಪಾಲ್ಗೊಂಡು ಜಾತಿ,ಮತ, ಭೇದವಿಲ್ಲದೆ ಎಲ್ಲರೂ ಸಹೋದರರಂತೆ ತಮ್ಮ ಮನೆಯ ಹಬ್ಬದಂತೆ  ಪಾಲ್ಗೊಂಡು ನೆರೆಕಟ್ಟಿ ಕದಿರು ತೆಗೆದು ಪ್ರಸಾದವನ್ನು ಸ್ವೀಕರಿಸಿ ಪಟಾಕಿಗಳನ್ನು ಸಿಡಿಸಿ  ಸಂಭ್ರಮದಿಂದ ಹುತ್ತರಿ ಹಬ್ಬವನ್ನು ಆಚರಿಸಿ ಸೌಹಾರ್ದತೆ ಮೆರೆದರು.:ಹಳೇ ತಾಲೂಕಿನಲ್ಲೂ ಹುತ್ತರಿ ಆಚರಣೆ ನಾಪೋಕ್ಲು ಸಮೀಪದ ಹಳೇ ತಾಲೂಕಿನ ನಿವಾಸಿ ಬೊಪ್ಪೇರ ಸಿ. ಕಾವೇರಪ್ಪ ಹಾಗೂ ಅವರ ಮಗ ಜಯ ಉತ್ತಪ್ಪ ಅವರು ತಮ್ಮ ನಿವಾಸದಲ್ಲಿ ಹಲವು ವರ್ಷಗಳಿಂದಲೂ ಸೌಹಾರ್ದತೆಯಾಗಿ ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ನಿವಾಸದಲ್ಲಿ ಸ್ಥಳೀಯ 50ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದಲ್ಲಿ ಪಾಲ್ಗೊಂಡು ಕದಿರು ತೆಗೆದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಹಬ್ಬದ ಸಂಪ್ರದಾಯ ಮುಗಿದೊಡನೆ ಆಗಮಿಸಿದ ಎಲ್ಲರಿಗೂ ಸೌಹಾರ್ದತೆಯಿಂದ ಯಾವುದೇ ಭೇದಭಾವವಿಲ್ಲದೆ ಊಟೋಪಚಾರದ ಸಮಾರಾಧನೆ ನಡೆಯುತ್ತದೆ. ಎಲ್ಲರೂ ಇದನ್ನು ಪ್ರಸಾದಂತೆ ಸ್ವೀಕರಿಸಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿದರು. ಇತ್ತೀಚಿನ ವರ್ಷಗಳಲ್ಲಿ ಹಬ್ಬ ಹರಿದಿನಗಳಲ್ಲಿ ಜಾತಿ,ಧರ್ಮದ, ರಾಜಕೀಯದ ನಂಟು ಕಂಡು ಬರುತ್ತಿದೆ. ಒಂದೆಡೆ ಇದು ನಮ್ಮ ಹಬ್ಬ ಎನ್ನುತ್ತಿದ್ದರೆ, ಮತ್ತೊಂದೆಡೆ ಆ ಹಬ್ಬಕ್ಕೂ ನಮಗೂ ಸಂಬಂಧವಿಲ್ಲ, ಅವರ ಹಬ್ಬಕ್ಕೆ ನಾವೇಕೆ ಸಹಕಾರ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಆದರೆ ಇಂತಹ ಕುಟುಂಬಗಳಲ್ಲಿ ಆಚರಿಸುವ ಸೌಹಾರ್ದತೆಯ  ಹುತ್ತರಿ ಹಬ್ಬ ಇಡೀ ಸಮಾಜಕ್ಕೆ ಮಾದರಿಯಾಗಿದೆ.

No comments

Post a Comment